ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಜು.2ರಂದು ಬುಧವಾರ ರಾಜ್ಯ ಸಚಿವ ಸಂಪುಟದ 14 ನೇ ಸಭೆ ನಡೆಯಲಿದ್ದು, ಸಭೆಯು ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಭಿವೃದ್ಧಿಯ ಕುರಿತು ವಿಶೇಷ ಬೆಳಕು ಚೆಲ್ಲುವ ನಿರೀಕ್ಷೆ ಇದೆ ಎಂದು ಉನ್ನತ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ನಂದಿಗಿರಿಧಾಮದ ಮಯೂರ ಸಭಾಂಗಣದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಡಳಿತದ ಅಧಿಕಾರಿಗಳ ತಂಡದೊಂದಿಗೆ ನಂದಿಗಿರಿಧಾಮಕ್ಕೆ ಸಚಿವರು ಭೇಟಿ ನೀಡಿ ಪೂರ್ವ ಸಿದ್ದತೆಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ಥಳಾತರಗೊಂಡಿದ್ದ ಸಭೆಗುಲಬರ್ಗಾ, ಚಾಮರಾಜನಗರ ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ನಡೆದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ನಂದಿಗಿರಿಧಾಮದಲ್ಲಿಯೂ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಮುಖ್ಯಮಂತ್ರಿಗಳಿಗೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿ ಸಚಿವರೆಲ್ಲರೂ ಮನವಿ ಮಾಡಿದ್ದೆವು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿಗಳು ಜೂನ್ 19 ರಂದು ದಿನಾಂಕ ನೀಡಿದ್ದರು. ಸಭೆಯೂ ನಿಗದಿಯಾಗಿತ್ತು. ಆದರೆ, ಈ ಭಾಗದ ಜಿಲ್ಲೆಗಳ ಜನರ ನಿರೀಕ್ಷೆಗೆ ಪೂರಕವಾಗಿ ಯೋಜನೆಗಳಿಗೆ ಹಣಕಾಸು ಇಲಾಖೆ ಪೂರಕ ತಯಾರಿಗಳು ಆಗದ ಕಾರಣ ಸಭೆಯನ್ನು ಬೆಂಗಳೂರಿನ ವಿಧಾನಸೌಧಕ್ಕೆ ಸ್ಥಳಾಂತರವಾಗಿತ್ತು ಎಂದರು.
ಗರಿಗೆದರಿದ ಜನರ ನಿರೀಕ್ಷೆಮುಖ್ಯಮಂತ್ರಿಗಳು ಮತ್ತೆ ದಿನಾಂಕ ನೀಡಿ, ಜುಲೈ 02 ರಂದು ಬುಧವಾರ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಮೂರೂ ಜಿಲ್ಲೆಗಳ ಹಲವು ನಿರೀಕ್ಷೆಗಳು ಈ ಬಾರಿಯ ಸಚಿವ ಸಂಪುಟ ಸಭೆಯಿಂದ ಗರಿಗೆದರಿವೆ. ನಾಳೆ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ಮಹತ್ವದ ತೀರ್ಮಾನಗಳು ಈ ಭಾಗದ ಜನರಲ್ಲಿ ಹಲವು ಭರವಸೆಗಳನ್ನು ಹುಟ್ಟು ಹಾಕಿವೆ. ಮುಖ್ಯಮಂತ್ರಿಗಳು ಪ್ರಕಟಿಸುವ ನಿರ್ಧಾರಗಳು ಮೂರು ಜಿಲ್ಲೆಗಳ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ್ದಾಗಿದ್ದು, ವಿಶೇಷವಾಗಿ ಬೆಳಕು ಚೆಲ್ಲಲಿದೆ ಎಂದರು. ಮುಖ್ಯಮಂತ್ರಿಗಳು ಬೆಂಗಳೂರಿನ ನಿವಾಸದಿಂದ ರಸ್ತೆ ಮಾರ್ಗದ ಮೂಲಕ ಆಗಮಿಸಿ ಮೊದಲಿಗೆ ಪುರಾಣ ಮತ್ತು ಇತಿಹಾಸ ಪ್ರಸಿದ್ಧ ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯಕ್ಕೆ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಭೇಟಿ ನೀಡಿ, ಅಲ್ಲಿ ಪೂಜೆ ಸಲ್ಲಿಸಿದ ನಂತರ ಕೆಎಸ್ಸಾರ್ಟಿಸಿ ಬಸ್ ಮೂಲಕವಾಗಿ ನಂದಿಗಿರಿಧಾಮಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 12 ಕ್ಕೆ ಸಚಿವ ಸಂಪುಟ ಸಭೆ ಆರಂಭವಾಗಲಿದೆ ಎಂದರು.
ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯ ಮತ್ತು ನಂದಿಗಿರಿಧಾಮಕ್ಕೆ ಖಾಸಗಿ ವ್ಯಕ್ತಿಗಳು ಹಾಗೂ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಧಿಕೃತ ಅನುಮತಿ ಪತ್ರ ಹೊಂದಿರುವ ವ್ಯಕ್ತಿಗಳು ಮತ್ತು ವಾಹನಗಳಿಗೆ ಮಾತ್ರ ಪ್ರವೇಶದ ಅವಕಾಶವಿರುತ್ತದೆ ಎಂದು ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.