ಸಚಿವ ಸಂಪುಟ ಸಭೆ ಶುಕ್ರವಾರ ಮಂಗಳೂರು ನಗರದ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೆ. 17ರಂದು ಸಂಜೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆಯ ಸಚಿವರು ಮಂಗಳೂರಿಗೆ ಆಗಮಿಸಲಿದ್ದಾರೆ.

ಮಂಗಳೂರು: ಸಚಿವ ಸಂಪುಟ ಸಭೆ ಶುಕ್ರವಾರ ಮಂಗಳೂರು ನಗರದ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೆ. 17ರಂದು ಸಂಜೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆಯ ಸಚಿವರು ಮಂಗಳೂರಿಗೆ ಆಗಮಿಸಲಿದ್ದಾರೆ. ಸೆ. 18 ರಂದು ಬೆಳಗ್ಗೆ ಮಂಗಳೂರು ನಗರದ ಮುಖ್ಯರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳಕಚೇರಿಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ ಮೇರಿಹಿಲ್‌ನಲ್ಲಿರುವ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ ನಂತರ ಮಂಗಳೂರು ನಗರಕ್ಕೆ ವಾಪಸ್‌ ಆಗಲಿದ್ದಾರೆ. ನಂತರ ಮರು ದಿನ ಬೆಳಗ್ಗೆ ನಿರ್ಗಮಿಸಲಿದ್ದಾರೆ. ಇದರಿಂದ ಸಾರ್ವಜನಿಕರು ಸುರಕ್ಷಿತವಾಗಿ ಪರ್ಯಾಯ ಮಾರ್ಗಗಳನ್ನು ಉಪಯೋಗಿಸಿಕೊಂಡು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಗಣ್ಯರ ಸಂಚಾರದ ರಸ್ತೆಗಳು:

ಗುರುವಾರ ಸಂಜೆ ಸೆ. 19ರ ಬೆಳಗ್ಗೆ ವರೆಗೆ ಬಜಪೆ ವಿಮಾನ ನಿಲ್ದಾಣದಿಂದ ಕಾವೂರು - ಬೋಂದೆಲ್- ಮೇರಿಹಿಲ್- ಕೆ.ಪಿ.ಟಿ.- ಕದ್ರಿ ಕಂಬಳ - ಬಂಟ್ಸ್‌ಹಾಸ್ಟೆಲ್‌- ಡಾ. ಬಿ.ಆರ್.ಅಂಬೇಡ್ಕರ್ ಜಂಕ್ಷನ್- ಹಂಪನ್ ಕಟ್ಟೆ-ಕ್ಲಾಕ್ ಟವರ್ - ಹ್ಯಾಮಿಲ್ಟನ್ ಜಂಕ್ಷನ್.

18ರಂದು ಬೆಳಗ್ಗೆ ಹ್ಯಾಮಿಲ್ಟನ್ ಜಂಕ್ಷನ್- ಕ್ಲಾಕ್ ಟವರ್- ಹಂಪನಕಟ್ಟ - ಡಾ. ಬಿ.ಆರ್.ಅಂಬೇಡ್ಕರ್ ಜಂಕ್ಷನ್ - ಕೆ.ಪಿ.ಟಿ. ಜಂಕ್ಷನ್ - ನಂತೂರು ವೃತ್ತ - ಪಂಪುವೆಲ್ - ನಾಗುರಿ - ಬಜಾಲ್ ಕ್ರಾಸ್ (ಪ್ರಜಾಸೌಧ)- ಪಡೀಲ್ ಜಂಕ್ಷನ್.ಮೇಲ್ಕಂಡ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಆ್ಯಂಬುಲೆನ್ಸ್‌ ಹಾಗೂ ಇತರೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು.

ಬದಲಿ ಮಾರ್ಗಗಳು: -ಸ್ಟೇಟ್‌ಬ್ಯಾಂಕ್‌ ಬಳಿಯ ಬದ್ರಿಯಾ ಜಂಕ್ಷನ್‌ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲ ತರಹದ ವಾಹನಗಳು ಪರ್ಯಾಯವಾಗಿ ಬದ್ರಿಯಾ ಜಂಕ್ಷನ್ - ನಿಲೇಶ್ವರ ರಸ್ತೆ - ರೋಸಾರಿಯೋ ರಸ್ತೆ ಮುಖೇನ ಸಂಚರಿಸುವುದು.

-ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಬದ್ರಿಯಾ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲ ತರಹದ ವಾಹನಗಳು ಪರ್ಯಾಯವಾಗಿ ಹ್ಯಾಮಿಲ್ಟನ್ ಜಂಕ್ಷನ್- ನೆಲ್ಲಿಕಾಯಿ ರಸ್ತೆ ಮುಖೇನ ಸಂಚರಿಸುವುದು.-ಪಂಪುವೆಲ್ ಜಂಕ್ಷನ್‌ನಿಂದ ನಾಗುರಿ ಮೂಲಕ ಪಡೀಲ್ ಜಂಕ್ಷನ್ ಕಡೆಗೆ ಅಥವಾ ಪಡೀಲ್ ಜಂಕ್ಷನ್ ಕಡೆಯಿಂದ ನಾಗುರಿ ಮೂಲಕ ಪಂಪುವೆಲ್ ಕಡೆಗೆ ಸಂಚರಿಸಬೇಕಾದ ಎಲ್ಲ ತರಹದ ವಾಹನಗಳು ಪರ್ಯಾಯವಾಗಿ ನಂತೂರು ವೃತ್ತ - ಕೈಕಂಬ - ಮರೋಳಿ ಮೂಲಕ ಅಥವಾ ತೊಕ್ಕೊಟ್ಟು- ದೇರಳಕಟ್ಟೆ- ಮುಡಿಪು - ಬೊಳ್ಯಾರ್- ಮೆಲ್ಕಾರ್ ಮೂಲಕ ಸಂಚರಿಸುವುದು. -ಬಜಾಲ್ ಕ್ರಾಸ್ (ಪ್ರಜಾಸೌಧ) ನಿಂದ ಬಜಾಲ್ ಕಡೆಗೆ ಅಥವಾ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣ ಕಡೆಗೆ ಬರುವ ಮತ್ತು ಹೋಗುವ ಎಲ್ಲ ತರಹದ ವಾಹನಗಳು ಪಡೀಲ್ ಬಜಾಲ್ ಕ್ರಾಸ್‌ಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ - ಬಜಾಲ್ ಮೂಲಕ ಸಂಚರಿಸುವುದು.

-ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಮಹಾಕಾಳಿಪಡ್ಪು- ಮಂಗಳಾದೇವಿ ಮೂಲಕ ನಗರಕ್ಕೆ ಸಂಚರಿಸುವುದು.