ವರದಿ ಪರಿಷ್ಕರಣೆಗೆ ಸಚಿವ ಸಂಪುಟ ಉಪ ಸಮಿತಿ ರಚಿಸಿ

| Published : Aug 09 2025, 02:04 AM IST

ಸಾರಾಂಶ

ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನ ದಾಸ್‌ ಏಕಸದಸ್ಯ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಪಕ್ಷಪಾತದಿಂದ ಕೂಡಿದೆ. ಇಂತಹ ವರದಿ ಪರಿಷ್ಕರಣೆಗೆ ಸಚಿವ ಸಂಪುಟದ ಉಪ ಸಮಿತಿ ರಚಿಸುವಂತೆ ಜಿಲ್ಲಾ ಛಲವಾದಿ ಮಹಾಸಭಾ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

- ಪರೈಯ್ಯ, ಪರವನ್‌ ಜಾತಿ ಎಡಗೈ ಪಂಗಡಕ್ಕೆ ಸೇರ್ಪಡೆಯಲ್ಲಿ ದುರುದ್ದೇಶ: ರುದ್ರಮುನಿ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನ ದಾಸ್‌ ಏಕಸದಸ್ಯ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಪಕ್ಷಪಾತದಿಂದ ಕೂಡಿದೆ. ಇಂತಹ ವರದಿ ಪರಿಷ್ಕರಣೆಗೆ ಸಚಿವ ಸಂಪುಟದ ಉಪ ಸಮಿತಿ ರಚಿಸುವಂತೆ ಜಿಲ್ಲಾ ಛಲವಾದಿ ಮಹಾಸಭಾ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ಅವರು, ನ್ಯಾಯಮೂರ್ತಿ ನಾಗಮೋಹನ ದಾಸ್ ಅಧ್ಯಕ್ಷತೆ ಸಮಿತಿ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್‌ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿದೆ ಎಂದರು.

ಬಲಗೈ ಸಮುದಾಯಕ್ಕೆ ಸೇರಿದ ಇನ್ನೂ ಹಲವಾರು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ, ಬಲಗೈ ಸಮುದಾಯದ ಜನಸಂಖ್ಯೆ ಉದ್ದೇಶಪೂರ್ವಕವಾಗಿ ಕಡಿಮೆ ತೋರಿಸಿದೆ. ಆಯೋಗವು ದುರುದ್ದೇಶ ಪೂರ್ವಕವಾಗಿ ಪರೈಯ್ಯ, ಪರವನ್‌ ಸಮದಾಯಗಳನ್ನು ಎಡಗೈ ಗುಂಪಿಗೆ ಸೇರಿಸಿದೆ ಎಂದು ದೂರಿದರು.

ವರದಿಯಲ್ಲಿ ಜಾತಿಯೇ ಅಲ್ಲದ ಆದಿಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ಶೇ.1 ಮೀಸಲಾತಿ ನಿಗದಿಪಡಿಸಿದ್ದನ್ನು ರದ್ದುಪಡಿಸಬೇಕು. ಈ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಬೇಕು. ಸರ್ಕಾರವು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರ್ಪಡೆಗೊಳ್ಳುವ ಜಾತಿಗಳನ್ನು ನಮೂದಿಸಿ, ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಪರೈಯ್ಯ, ಪರವನ್ ಸಮುದಾಯಗಳನ್ನು ಬಲಗೈ ಗುಂಪಿಗೆ ಸೇರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಬಲಗೈ ಸಮುದಾಯಕ್ಕೆ ಶೇ.8ರಷ್ಟು ಮೀಸಲಾತಿ ಕಲ್ಪಿಸಬೇಕು. ನ್ಯಾ.ನಾಗಮೋಹನ ದಾಸ್ ಸರ್ಕಾರಕ್ಕೆ ಸಲ್ಲಿಸಿದ ಏಕಪಕ್ಷೀಯ, ಪಕ್ಷಪಾತದಿಂದ ಕೂಡಿದ ವರದಿ ಯಾವುದೇ ಕಾರಣಕ್ಕೂ ಯಥಾವತ್ ಸರ್ಕಾರ ಒಪ್ಪಿಕೊಳ್ಳ ಬಾರದು ಎಂದು ಎನ್.ರುದ್ರಮುನಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ಎಸ್.ಶೇಖರಪ್ಪ, ಮುಖಂಡರಾದ ಎ.ಡಿ. ಕೊಟ್ರ ಬಸಪ್ಪ, ಜಯಣ್ಣ, ಹಾಲೇಶಪ್ಪ, ಮಧುಸೂದನ, ಜಯಪ್ರಕಾಶ, ಎಂ.ಸಿ. ಓಂಕಾರಪ್ಪ, ಹರಳಹಳ್ಳಿ ನವೀನಕುಮಾರ ಇತರರು ಇದ್ದರು.

- - -

-8ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ರುದ್ರಮುನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.