ರೈತರ ಕೃಷಿ ಪಂಪ್‍ಸೆಟ್‍ಗಳ ಕೇಬಲ್ ವೈರ್‌ಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಅಫಜಲಪುರ ಪೊಲೀಸರು ನಾಲ್ಕು ಪ್ರಕರಣಗಳನ್ನು ಭೇದಿಸಿ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 1,86,400 ರು.ಮೌಲ್ಯದ 4,620 ಅಡಿ ಕೇಬಲ್ ವೈರ್ ಹಾಗೂ 9,600 ರು.ನಗದು ಹಣ ಜಪ್ತಿ ಮಾಡಿದ್ದಾರೆ.

ಕಲಬುರಗಿ/ಅಫಜಲಪುರ:

ರೈತರ ಕೃಷಿ ಪಂಪ್‍ಸೆಟ್‍ಗಳ ಕೇಬಲ್ ವೈರ್‌ಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಅಫಜಲಪುರ ಪೊಲೀಸರು ನಾಲ್ಕು ಪ್ರಕರಣಗಳನ್ನು ಭೇದಿಸಿ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 1,86,400 ರು.ಮೌಲ್ಯದ 4,620 ಅಡಿ ಕೇಬಲ್ ವೈರ್ ಹಾಗೂ 9,600 ರು.ನಗದು ಹಣ ಜಪ್ತಿ ಮಾಡಿದ್ದಾರೆ.ತಾಲೂಕಿನ ಮಣ್ಣೂರ, ದೇಸಾಯಿ ಕಲ್ಲೂರ ಹಾಗೂ ಅಫಜಲಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರ ಮೋಟರ್ ಪಂಪ್‍ಗಳ ಕೇಬಲ್ ವೈರ್ ಸೇರಿದಂತೆ ಕೃಷಿ ಉಪಕರಣಗಳ ಕಳವಾಗಿರುವ ಪ್ರಕರಣಗಳು ದಾಖಲಾಗಿದ್ದವು. ಮಣ್ಣೂರ ಗ್ರಾಮದ ಚಂದ್ರಕಾಂತ ಹಳಿಮನಿ ಅವರು ಸೆ.18ರಂದು ನೀಡಿದ ದೂರಿನ ಪ್ರಕಾರ, ಸೆ.17ರ ರಾತ್ರಿ 10ರಿಂದ ಸೆ.18ರ ಬೆಳಗ್ಗೆ 7.15ರ ನಡುವಿನ ಅವಧಿಯಲ್ಲಿ ತಮ್ಮದೂ ಸಹಿತ ಒಟ್ಟು 11 ಜನ ರೈತರ ಮೋಟರ್ ಪಂಪ್‍ಗಳ ಕೇಬಲ್ ವೈರ್‌ಗಳನ್ನು ಕಳವು ಮಾಡಲಾಗಿತ್ತು.ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.ಆಳಂದ ಉಪವಿಭಾಗದ ಡಿವೈಎಸ್‍ಪಿ ತಮ್ಮಾರಾಯ ಪಾಟೀಲ್ ಮಾರ್ಗದರ್ಶನದಲ್ಲಿ, ಅಫಜಲಪುರ ವೃತ್ತದ ಸಿಪಿಐ ಲಖನ್ ಮಸಗುಪ್ಪಿ ನೇತೃತ್ವದಲ್ಲಿ ಪಿಎಸ್‌ಐ ಶ್ರೀಶೈಲ್ ಅಂಬಾಟೆ, ಎಎಸ್‌ಐ ಬಸವರಾಜ, ರಾಜಶೇಖರ, ಸಿಬ್ಬಂದಿ ಕಾಶಿನಾಥ್, ಮಲ್ಲಿನಾಥ, ಸಂತೋಷ, ಮಲ್ಲಿನಾಥ, ಆನಂದ, ಯಲ್ಲಪ್ಪ, ಚಿದಾನಂದ, ಭಾಗಣ್ಣ, ಶಿವಶರಣ,ಶಿವಯ್ಯ, ಮಕ್ತುಮ ಒಳಗೊಂಡ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು .ಸೆ.28ರಂದು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 71,600 ರು.ಮೌಲ್ಯದ 1,790 ಅಡಿ, 82,000 ರು.ಮೌಲ್ಯದ 2,050 ಅಡಿ ಹಾಗೂ 28,000 ರು.ಮೌಲ್ಯದ 700 ಅಡಿ ಕೇಬಲ್ ವೈರ್ ವಶಪಡಿಸಿಕೊಳ್ಳಲಾಗಿದೆ.ಇನ್ನೊಂದು ಪ್ರಕರಣದಲ್ಲಿ ಸೆ.29ರಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು 9,600 ರೂ.ನಗದು ಹಾಗೂ 4,800 ರು.ಮೌಲ್ಯದ 80 ಅಡಿ ಕೇಬಲ್ ವೈರ್ ಜಪ್ತಿ ಮಾಡಲಾಗಿದೆ. ಒಟ್ಟು ನಾಲ್ಕು ಪ್ರಕರಣಗಳಲ್ಲಿ ಆರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.