ಸಾರಾಂಶ
ಬಳ್ಳಾರಿ: ಬೆಂಗಳೂರಿನ "ದಿ ರಾಮೇಶ್ವರಂ ಕೆಫೆ " ಬಾಂಬ್ ಸ್ಫೋಟ ಪ್ರಕರಣದ ಆರೋಪಿಯ ಪತ್ತೆಗಾಗಿ ಬಳ್ಳಾರಿಯಲ್ಲಿಯೇ ಬೀಡು ಬಿಟ್ಟಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡದ ಅಧಿಕಾರಿಗಳು, ಗುಮಾನಿ ಮೇರೆಗೆ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಬಳ್ಳಾರಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಎನ್‌ಐಎ ದಾಳಿ ನಡೆಸಿ ಬಂಧಿಸಿದ ಶಂಕಿತ ಉಗ್ರರೊಂದಿಗೆ ಬಾಂಬ್ ಸ್ಫೋಟದ ಆರೋಪಿ ನಂಟಿರುವ ಬಗ್ಗೆ ಸಹ ವಿಚಾರಣೆ ನಡೆಸುತ್ತಿದ್ದು, ಬಳ್ಳಾರಿಯಲ್ಲಿ ಈ ಹಿಂದೆ ಎನ್‌ಐಎನಿಂದ ಬಂಧನಕ್ಕೆ ಒಳಗಾದ ನಿಷೇಧಿತ ಪಿಎಫ್‌ಐ ಸಂಘಟನೆಯ ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿಗಳ ಸ್ನೇಹಿತರನ್ನು ಸಹ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ವಿಚಾರಣೆಗೆ ಒಳಪಡಿಸಿ, ಸ್ಫೋಟದ ಆರೋಪಿಯ ಕುರಿತು ವಿಚಾರಿಸಿದ್ದಾರೆ ಎಂಬ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.ತುಮಕೂರು ಮೂಲಕ ಬಳ್ಳಾರಿಗೆ ಬಂದಿರುವ ಆರೋಪಿ ನಗರದಲ್ಲಿ ಯಾರನ್ನಾದರೂ ಸಂಪರ್ಕಿಸಿದ್ದಾನೆಯೇ? ಆತ ಎಲ್ಲೆಲ್ಲಿ ಓಡಾಡಿದ್ದಾನೆ. ಬಸ್ ನಿಲ್ದಾಣದ ಮೂಲಕ ತೆರಳಿದ್ದೆಲ್ಲಿಗೆ ಎಂಬಿತ್ಯಾದಿ ಮಾಹಿತಿ ಸೇರಿದಂತೆ ಶಂಕಿತ ಆರೋಪಿ ಕುರಿತು ಇಂಚಿಂಚೂ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಇದಕ್ಕಾಗಿ ಸಿಸಿ ಟಿವಿ ದೃಶ್ಯಾವಳಿಗಳ ಮೊರೆ ಹೋಗಿದ್ದಾರೆ.
ಆರೋಪಿ ಬಳ್ಳಾರಿಯಲ್ಲಿಯೇ ತಲೆ ಮರೆಸಿಕೊಂಡಿರಬಹುದೇ ಎಂಬ ಗುಮಾನಿ ಮೇರೆಗೆ ಕಳೆದ ಎರಡು ದಿನಗಳಿಂದ ಬಳ್ಳಾರಿಯಲ್ಲಿಯೇ ಉಳಿದು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕೌಲ್‌ಬಜಾರ್, ಮುಲ್ಲಾರ್‌ಪೇಟೆ ಮತ್ತಿತರ ಕಡೆಗಳಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿದ್ದಾರೆ.ಏತನ್ಮಧ್ಯೆ ಎನ್‌ಐಎ ಅಧಿಕಾರಿಗಳು ಆರೋಪಿ ಗುರುತು ಹಿಡಿಯಲು ಸಾರ್ವಜನಿಕರನ್ನು ಮಾತನಾಡಿಸಿ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿಗಳಿಂದಲೂ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಎನ್‌ಐಎ ಅಧಿಕಾರಿಗಳು ಎರಡು ತಂಡಗಳನ್ನು ಮಾಡಿಕೊಂಡು ಬಸ್ ನಿಲ್ದಾಣದಲ್ಲಿ ಒಂದು ತಂಡ ಹಾಗೂ ಮತ್ತೊಂದು ತಂಡ ನಗರದ ನಾನಾ ಕಡೆ ಸುತ್ತಾಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಂಕಿತ ಆರೋಪಿ ಬಳ್ಳಾರಿಗೆ ಬಂದಿರುವುದು ಸ್ಪಷ್ಟವಾಗಿದ್ದು, ಮಾ. 1ರಂದು ಬಸ್ ನಿಲ್ದಾಣದಲ್ಲಿ ಓಡಾಡಿರುವುದು ಸಿಸಿ ಕ್ಯಾಮೆರಾದ ದೃಶ್ಯಾವಳಿಗಳಿಂದ ಅಧಿಕಾರಿಗಳಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಸುತ್ತಮುತ್ತಲ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆಯಿದೆ.ಶಂಕಿತನ ಪತ್ತೆಗಾಗಿ ತೀವ್ರ ಶೋಧ ನಡೆಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.ವಿಜಯನಗರದಲ್ಲೂ ಸಿಸಿ ಕ್ಯಾಮೆರಾ ಪರಿಶೀಲನೆಗುಪ್ತಚರ ಇಲಾಖೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ವಿಜಯನಗರ ಜಿಲ್ಲೆಯ ಬಸ್ ನಿಲ್ದಾಣಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಶುಕ್ರವಾರ ಕೂಡ ಪರಿಶೀಲನೆ ನಡೆಸಿದರು.ಬಳ್ಳಾರಿಯಲ್ಲಿ ಉಗ್ರಗಾಮಿ ಕಂಡುಬಂದ ಹಿನ್ನೆಲೆ ಎನ್‌ಐಎ ವಿಜಯನಗರ ಜಿಲ್ಲಾ ಪೊಲೀಸರಿಗೂ ಅಲರ್ಟ್ ಸಂದೇಶ ರವಾನೆ ಮಾಡಿದ್ದು, ಹೀಗಾಗಿ ನಗರದ ಬಸ್ ನಿಲ್ದಾಣ ಸೇರಿದಂತೆ ಕೂಡ್ಲಿಗಿ, ಹೊಸಪೇಟೆ, ಕಾನಾಹೊಸಳ್ಳಿ, ಮರಿಯಮ್ಮನಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದರು.ರಾಮೇಶ್ವರಂ ಕೆಫೆ ಸ್ಫೋಟ ಮಾಡಿದ ಬಳಿಕ ಉಗ್ರಗಾಮಿ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡಿ ಬಳ್ಳಾರಿಗೆ ಬಂದಿದ್ದು, ಅಲ್ಲಿಂದ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎನ್‌ಐಎ ಸೂಚನೆ ಮೇರೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಸ್ಫೋಟದ ಮ್ಯಾಡುಲ್‌ನ ಜಾಡು ಹಿಡಿದು ತೀವ್ರ ತನಿಖೆ ನಡೆಸುತ್ತಿದ್ದಾರೆ.