ಸೋಲು-ಗೆಲುವಿನ ಲೆಕ್ಕಾಚಾರ, ರಿಲ್ಯಾಕ್ಸ್ ಮೂಡ್‌ನಲ್ಲಿ ಅಭ್ಯರ್ಥಿಗಳು

| Published : Nov 15 2024, 12:36 AM IST

ಸೋಲು-ಗೆಲುವಿನ ಲೆಕ್ಕಾಚಾರ, ರಿಲ್ಯಾಕ್ಸ್ ಮೂಡ್‌ನಲ್ಲಿ ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ್ದ ಶಿಗ್ಗಾಂವಿ ಉಪಚುನಾವಣೆ ಮತದಾನ ಸುಗಮವಾಗಿ ನಡೆದಿದ್ದು, ಮತಯಂತ್ರಗಳಲ್ಲಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಭದ್ರವಾಗಿದೆ. ಇತ್ತ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಕ್ಷೇತ್ರದ ಯಾವ ಭಾಗದಲ್ಲಿ ಎಷ್ಟು ಮತಗಳ ಲೀಡ್ ಬರಬಹುದು ಎಂಬ ಲೆಕ್ಕಾಚಾರ ಜೋರಾಗಿದೆ.

ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಶಿಗ್ಗಾಂವಿ ಉಪಚುನಾವಣೆ ಮತದಾನ ಸುಗಮವಾಗಿ ನಡೆದಿದ್ದು, ಮತಯಂತ್ರಗಳಲ್ಲಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಭದ್ರವಾಗಿದೆ. ಇತ್ತ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಕ್ಷೇತ್ರದ ಯಾವ ಭಾಗದಲ್ಲಿ ಎಷ್ಟು ಮತಗಳ ಲೀಡ್ ಬರಬಹುದು ಎಂಬ ಲೆಕ್ಕಾಚಾರ ಜೋರಾಗಿದೆ.ಪ್ರಜಾಪ್ರಭುತ್ವದ ಹಬ್ಬದಲ್ಲಿ ತಮ್ಮ ಹಕ್ಕು ಚಲಾಯಿಸಿರುವ ಮತದಾರ ನಿರಾಳವಾಗಿದ್ದರೆ, ಫಲಿತಾಂಶವನ್ನು ಎದುರು ನೋಡುತ್ತಿರುವ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ನ. 23ರಂದು ಮತಎಣಿಕೆ ನಡೆಯಲಿದ್ದು, ಅಲ್ಲಿಯ ವರೆಗೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಲೆಕ್ಕಾಚಾರದಲ್ಲಿ ಮುಳುಗುವಂತೆ ಮಾಡಿದೆ.ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಮೂಹೂರ್ತ ನಿಗದಿಯಾಗುತ್ತಿದ್ದಂತೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಸುತ್ತಾಡಿ ಪ್ರಚಾರ ಕೈಗೊಂಡು ಸುಸ್ತು ಹೊಡೆದಿರುವ ಅಭ್ಯರ್ಥಿಗಳು ಗುರುವಾರ ಕೆಲವರು ತಮ್ಮ ಮನೆಯಲ್ಲಿ ಕುಳಿತು ವಿಶ್ರಾಂತಿ, ಕಾರ್ಯಕರ್ತರೊಂದಿಗೆ ಚರ್ಚೆ, ಮದುವೆ, ದೇವಸ್ಥಾನಗಳಿಗೆ ಭೇಟಿ ಇತರೆ ತಮ್ಮ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು. ಇದರ ನಡುವೆ ತಮ್ಮ ಪಕ್ಷದ ಮುಖಂಡರ ಜತೆ ಮತಗಳ ಲೆಕ್ಕಾಚಾರ ನಡೆಸಿದರು. ಕಳೆದ ಹದಿನೈದು ದಿನಗಳಿಂದ ಪ್ರಚಾರದ ಅಖಾಡಕ್ಕೆ ಧುಮುಕಿದ್ದ ಅಭ್ಯರ್ಥಿಗಳಿಗೆ ಇಂದು ಒಂದು ರೀತಿಯಲ್ಲಿ ನಿರಾಳವಾಗಿದ್ದರೂ ಫಲಿತಾಂಶದ ಆತಂಕ ಎಲ್ಲರನ್ನೂ ಕಾಡುತ್ತಿದೆ.ಪ್ರಮುಖರ ದಿನಚರಿ ಈ ಕೆಳಗಿನಂತಿದೆ: ಉಪಚುನಾವಣೆಯಲ್ಲಿ ಬ್ಯೂಸಿಯಾಗಿದ್ದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಗುರುವಾರ ರಿಲ್ಯಾಕ್ಸ್‌ ಮೂಡ್‌ನಲ್ಲಿ ಇದ್ದು, ಎಂದಿನಂತೆ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಸೇರಿದಂತೆ ಇತರೆ ನಗರ, ಪ್ರದೇಶಗಳಲ್ಲಿ ಗೃಹ ಪ್ರವೇಶ, ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಸಂಜೆ ಶಿಗ್ಗಾಂವಿಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರೊಂದಿಗೆ ಚುನಾವಣೆ ಚರ್ಚೆಗಳಲ್ಲಿ ತೊಡಿಗಿಸಿಕೊಂಡಿದ್ದರು. ಭರತ್ ಬೊಮ್ಮಾಯಿ ಬೆಳಗ್ಗೆ ಹನಮರಹಳ್ಳಿ ಗ್ರಾಮದ ಬಳಿ ಪ್ರಭಂಜನ ಗಾರ್ಮೆಂಟ್ಸ್‌ಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿಯ ಜತೆ ಮಾತನಾಡಿದ ಬಳಿಕ ರಾಣಿಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಬಳಿ ಕುರುವತ್ತಿ ಬಸವೇಶ್ವರ ಸ್ಟೋನ್ ಕ್ರಸರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಉಪ ಚುನಾವಣೆ ಪ್ರಚಾರ ಭರಾಟೆಯಲ್ಲಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ ಮತದಾನ ಮುಗಿಯುತ್ತಿದ್ದಂತೆ ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಮನೆಯಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ದಿನವಿಡಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ, ಮತಗಟ್ಟೆವಾರು ಮಾಹಿತಿ ಪಡೆದುಕೊಂಡ ಯಾಸೀರ್‌ಖಾನ್ ಪಠಾಣ ಸ್ನೇಹಿತರ ಮತ್ತು ಕುಟುಂಬದ ಜತೆ ದಿನ ಕಳೆದರು. ಈ ವೇಳೆ ಅವರು, ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಕಳೆದ ಬಾರಿಯಷ್ಟೇ ಈ ಬಾರಿಯೂ ಮತದಾನವಾಗಿದೆ. ಆದರೆ ಫಲಿತಾಂಶ ಮಾತ್ರ ಉಲ್ಟಾ ಆಗುತ್ತದೆ. ಬೊಮ್ಮಾಯಿ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಹಲವಾರು ಸಚಿವರು, ಶಾಸಕರು ಬಂದು ಕೆಲಸ ಮಾಡಿದ್ದನ್ನು ಅಪ್ತರ ಜತೆಗೆ ಚರ್ಚೆಸಿದರು.