ಸಾರಾಂಶ
ವಿ.ಎಂ. ನಾಗಭೂಷಣ
ಸಂಡೂರು: ತೀವ್ರ ಪೈಪೋಟಿಯಿಂದ ಕೂಡಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಶನಿವಾರ ಹೊರ ಬೀಳುವ ಮೂಲಕ ಗೆಲುವು ಸೋಲಿನ ಕುರಿತಾದ ಚರ್ಚೆಗೆ ತೆರೆ ಬಿದ್ದಿದೆ.ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ತುಕಾರಾಂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮದಿಂದ ವಿಜಯಶಾಲಿಯಾಗಿ ಹೊರಹೊಮ್ಮಿರುವುದಲ್ಲದೆ, ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ತಮಗೆ ದೊರೆತ ಕೆಲ ಸಮಯದಲ್ಲಿಯೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಉತ್ತಮ ಪೈಪೋಟಿ ನೀಡಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳ ಜೊತೆಗೆ ಇಲ್ಲಿನ ಕೆಲ ಮೂಲ ಸೌಕರ್ಯಗಳ ಕೊರತೆಯೂ ಬಹುವಾಗಿ ಚರ್ಚಿತವಾಗಿತ್ತು. ಪಟ್ಟಣದಲ್ಲಿ ಸೂಕ್ತವಾದ ಬಸ್ ನಿಲ್ದಾಣ ಇಲ್ಲದಿರುವುದು, ಆಸ್ಪತ್ರೆಯಲ್ಲಿನ ಕೊರತೆಗಳು, ೮-೧೦ ದಿನಗಳಿಗೊಮ್ಮೆ ನೀರು ಬಿಡುವ ವಿಷಯ, ಸಾರಿಗೆ ವ್ಯವಸ್ಥೆಯಲ್ಲಿನ ನ್ಯೂನತೆಗಳು, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡದಿರುವುದು ಸೇರಿದಂತೆ ಹಲವು ವಿಷಯಗಳು ಪ್ರಮುಖವಾಗಿ ಟೀಕೆಗೆ ಒಳಗಾದವು.
ಸೋಲು- ಗೆಲುವಿನ ಕಾರಣ:ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತೆ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಆದರೆ ಕ್ಷೇತ್ರದಲ್ಲಿ ಸೋಲು ಗೆಲುವಿಗೆ ಕಾರಣವಾದ ಅಂಶಗಳ ಬಗ್ಗೆ ಚಿಂತೆನೆ ಆರಂಭವಾಗಿದೆ. ಕ್ಷೇತ್ರದ ಯಾವ್ಯಾವ ಬೂತ್‌ಗಳಲ್ಲಿ ಯಾರಿಗೆ ಲೀಡ್ ದೊರೆತಿದೆ? ಯಾವ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚು ಮತಗಳು ಲಭಿಸಿವೆ? ಯಾವ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತಗಳು ಲಭ್ಯವಾಗಿವೆ? ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಹಾಗೂ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾದ ಅಂಶಗಳ ಕುರಿತ ಚರ್ಚೆಗಳು ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ನಡೆದಿವೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ತುಕಾರಾಂ ಅವರಿಗೆ ಕೆಲ ಬೂತ್‌ಗಳಲ್ಲಿ ಲೀಡ್ ದೊರೆತಿದ್ದರೆ, ಕೆಲ ಬೂತ್‌ಗಳಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗೆ ಲೀಡ್ ದೊರೆತಿದೆ. ಕೆಲವೆಡೆ ಸಮಬಲದ ಹೋರಾಟ ನಡೆದಿದೆ. ಇದೀಗ ಎಲ್ಲೆಲ್ಲಿ ಯಾರಿಗೆ ಲೀಡ್ ದೊರೆತಿದೆ ಎಂಬುದರ ಕುರಿತು ಜನತೆ ಚರ್ಚಿಸುತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೂ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ವಿಜಯೋತ್ಸಾಹ ತುಂಬಿ ತುಳುಕುತ್ತಿದ್ದರೂ ಹಲವೆಡೆಯ ಬೂತ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಲೀಡ್ ದೊರೆತಿರುವುದು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಚಿಂತೆಗೆ ದೂಡಿದೆ.
ಒಟ್ಟಿನಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಬಾರಿಯ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ. ಅನ್ನಪೂರ್ಣ ತುಕಾರಾಂ ಗೆಲ್ಲುವ ಮೂಲಕ ಚುನಾವಣೆಯ ಫಲಿತಾಂಶದ ಬಗ್ಗೆ ಇದ್ದ ಜನರ ಕುತೂಹಲಕ್ಕೆ ತೆರೆ ಬಿದ್ದಿದೆ.