ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಮೀಣ ರಾಜಕಾರಣ ಗರಿಗೆದರಿದೆ. ಅಧಿಕೃತ ಮೀಸಲಾತಿ ಪಟ್ಟಿ ಪ್ರಕಟವಾಗುವ ಮುನ್ನವೇ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಜಿಪಂ ಕ್ಷೇತ್ರಗಳ ಮೀಸಲಾತಿ ಕುರಿತು ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಮೀಣ ರಾಜಕಾರಣ ಗರಿಗೆದರಿದೆ. ಅಧಿಕೃತ ಮೀಸಲಾತಿ ಪಟ್ಟಿ ಪ್ರಕಟವಾಗುವ ಮುನ್ನವೇ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಜಿಪಂ ಕ್ಷೇತ್ರಗಳ ಮೀಸಲಾತಿ ಕುರಿತು ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.ಡಿ. 15ರೊಳಗೆ ಜಿಪಂ ಹಾಗೂ ತಾಪಂ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಇತ್ತೀಚೆಗೆ ತಿಳಿಸಿದ್ದು, ಶೀಘ್ರದಲ್ಲೇ ಅಧಿಕೃತ ಮೀಸಲಾತಿ ಪಟ್ಟಿ ಪ್ರಕಟವಾಗಲಿದೆ ಎಂಬ ನಿರೀಕ್ಷೆ ಇದೆ.
ಈ ನಡುವೆ, ಅಧಿಕೃತ ಮೀಸಲಾತಿ ಪ್ರಕಟವಾಗದಿದ್ದರೂ ಸದ್ಯದ ರಾಜಕೀಯ ವಲಯದ ಲೆಕ್ಕಾಚಾರದ ಪ್ರಕಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಎಂಟು ಜಿಪಂ ಕ್ಷೇತ್ರಗಳ ಪೈಕಿ ಅಳವಂಡಿ ಕ್ಷೇತ್ರ ಬಿಸಿಎಂ-ಎ, ಹಿರೇಸಿಂದೋಗಿ ಸಾಮಾನ್ಯ, ಇರಕಲಗಡಗಿ ಸಾಮಾನ್ಯ, ಲೇಬಗೇರಿ ಎಸ್ಸಿ, ಗಿಣಿಗೇರಿ ಎಸ್ಸಿ, ಹೊಸಗೊಂಡಬಾಳ ಸಾಮಾನ್ಯ ಮಹಿಳೆ, ಹಿಟ್ನಾಳ ಸಾಮಾನ್ಯ ಮಹಿಳೆ ಹಾಗೂ ಬಂಡಿಹರ್ಲಾಪುರ ಸಾಮಾನ್ಯ ಮಹಿಳೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತಮ್ಮ ನಿರೀಕ್ಷೆಯಂತೆ ಆಗಲಿ ಎಂದು ಆಕಾಂಕ್ಷಿಗಳು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.ಈ ಮೀಸಲಾತಿ ಆಧಾರದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಆಕಾಂಕ್ಷಿಗಳು ಈಗಾಗಲೇ ತಮ್ಮದೇ ಆದ ಲೆಕ್ಕಾಚಾರ ಆರಂಭಿಸಿದ್ದಾರೆ. ಕೊಪ್ಪಳ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಜಿಪಂ ಚುನಾವಣೆಗೆ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸುವ ಕುರಿತು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಕ್ಷೇತ್ರದಲ್ಲಿ ಪಕ್ಷದ ಹಿಡಿತವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್‌ನಲ್ಲಿ ಭಾರಿ ತುರುಸು: ಜಿಪಂ ಚುನಾವಣೆಗೆ ಕಾಂಗ್ರೆಸ್ ಪಾಳೆಯದಲ್ಲಿ ಸಿದ್ಧತೆ ಚುರುಕುಗೊಂಡಿದೆ. ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿಯೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚೆ ನಡೆದಿದ್ದು, ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಹೊಣೆಗಾರಿಕೆಯನ್ನು ಹಾಲಿ ಅಥವಾ ಮಾಜಿ ಶಾಸಕರಿಗೆ ವಹಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.ಇದಕ್ಕೆ ಹೋಲಿಸಿದರೆ ಬಿಜೆಪಿ ಪಾಳೆಯದಲ್ಲಿ ಚುನಾವಣಾ ಸಿದ್ಧತೆ ಇನ್ನೂ ಸ್ಪಷ್ಟ ರೂಪ ಪಡೆದುಕೊಂಡಿಲ್ಲ ಎನ್ನಲಾಗುತ್ತಿದೆ. ಚುನಾವಣೆಯನ್ನು ಯಾವ ನಾಯಕತ್ವದಲ್ಲಿ ಎದುರಿಸಬೇಕು, ವಿಧಾನಸಭಾ ಕ್ಷೇತ್ರವಾರು ಟಿಕೆಟ್ ಹಂಚಿಕೆ ಜವಾಬ್ದಾರಿ ಯಾರಿಗೆ ಎಂಬ ಕುರಿತು ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ.
ಇದೇ ವೇಳೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸ್ಥಳೀಯವಾಗಿ ಜೆಡಿಎಸ್ ಜತೆಗಿನ ಹೊಂದಾಣಿಕೆ ಹಾಗೂ ಟಿಕೆಟ್ ಹಂಚಿಕೆಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ಆಕಾಂಕ್ಷಿಗಳಲ್ಲಿಯೂ ಜಿಪಂ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಾಗುವ ನಿರೀಕ್ಷೆಯಿದೆ.ಹಿರೇಸಿಂದೋಗಿಯಲ್ಲಿ ಯಾರಿಗೆ ಟಿಕೆಟ್?: ಹಿರೇಸಿಂದೋಗಿ ಜಿಪಂ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಇಲ್ಲಿ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ಎಂಬುದು ಕುತೂಹಲ ಮೂಡಿಸಿದೆ.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಸಹೋದರನ ಪುತ್ರ ಸೋಮಶೇಖರ ಅವರನ್ನು ಹಿರೇಸಿಂದೋಗಿ ಜಿಪಂ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿತ್ತು ಎನ್ನಲಾಗಿದೆ. ಸೋಮಶೇಖರ ಅವರ ನೇತೃತ್ವದಲ್ಲಿ ಹಿರೇಸಿಂದೋಗಿಯಲ್ಲಿ ಆರೋಗ್ಯ ತಪಾಸಣಾ ಶಿಬಿರವೂ ನಡೆದಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಹಿಟ್ನಾಳ ಕುಟುಂಬ ಈ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.ಪದಾಧಿಕಾರಿ ನೇಮಕದಲ್ಲೂ ಪೈಪೋಟಿ: ಕಾಂಗ್ರೆಸ್‌ನಲ್ಲಿ ಜಿಲ್ಲಾ ಹಾಗೂ ಕೆಳಹಂತದ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯೂ ನಡೆಯುತ್ತಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕದ ಸಂದರ್ಭದಲ್ಲಿ ಸ್ಥಳೀಯ ನಾಯಕರ ಅಭಿಪ್ರಾಯಕ್ಕೆ ಆದ್ಯತೆ ಸಿಕ್ಕಿಲ್ಲ ಎಂಬ ಅಸಮಾಧಾನ ಕೆಲವರಲ್ಲಿದ್ದು, ಕೆಳಹಂತದ ಪದಾಧಿಕಾರಿಗಳ ನೇಮಕದಲ್ಲಿಯೂ ಪೈಪೋಟಿ ಕಂಡುಬರುತ್ತಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಜಿಲ್ಲಾ ಪದಾಧಿಕಾರಿಗಳ ನೇಮಕ ಮಾಡುವ ಹಾಗೂ ಆಯಾ ಕ್ಷೇತ್ರಗಳ ಶಾಸಕರು ಅಥವಾ ಮಾಜಿ ಶಾಸಕರ ಅಭಿಪ್ರಾಯ ಪಡೆದು ತಾಲೂಕುವಾರು ಪದಾಧಿಕಾರಿಗಳನ್ನು ನೇಮಿಸುವ ಉದ್ದೇಶದಿಂದ ಮಾಜಿ ಸಚಿವ ಎನ್.ಎಸ್. ಬೋಸರಾಜ ನೇತೃತ್ವದ ತಂಡವನ್ನು ಕಳುಹಿಸುವ ಕುರಿತು ಪಕ್ಷದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.ಸಭೆಯಲ್ಲಿ ಜಟಾಪಟಿ?: ಇತ್ತೀಚೆಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿಯೂ ನಾಯಕರ ನಡುವೆ ಮಾತಿನ ಚಕಮಕಿ ನಡೆದಿರುವ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ. ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉಂಟಾದ ಗೊಂದಲದ ಕುರಿತು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಪಕ್ಷದ ಮುಂಚೂಣಿ ಪದಾಧಿಕಾರಿಯೊಬ್ಬರ ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಅಧಿಕೃತ ಮೀಸಲಾತಿ ಪಟ್ಟಿ ಹೊರಬೀಳುವ ಮುನ್ನವೇ ಕೊಪ್ಪಳ ವಿಧಾನಸಭಾ ಕ್ಷೇತ್ರದ ಎಂಟು ಜಿಪಂ ಕ್ಷೇತ್ರಗಳ ಮೇಲೆ ರಾಜಕೀಯ ಪಕ್ಷಗಳ ಕಣ್ಣು ನೆಟ್ಟಿದ್ದು, ಮೀಸಲಾತಿ ಪ್ರಕಟವಾದ ಬಳಿಕ ಟಿಕೆಟ್ ಆಕಾಂಕ್ಷಿಗಳ ಚಟುವಟಿಕೆ ಮತ್ತಷ್ಟು ಬಿರುಸುಗೊಳ್ಳುವ ನಿರೀಕ್ಷೆಯಿದೆ.