ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುನಗರದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಹೇಮಾವತಿ ಹೋರಾಟ ಸಮಿತಿ ಜೂ. 25 ರಂದು ಕರೆ ನೀಡಿರುವ ತುಮಕೂರು ಜಿಲ್ಲೆ ಬಂದ್‌ಗೆ ವಿವಿಧ ಕನ್ನಡ ಪರ, ರೈತಪರ ಸಂಘಟನೆಗಳು ಗುರುವಾರ ಸಭೆ ನಡೆಸಿ ಬೆಂಬಲ ನೀಡಿ ಹೋರಾಟದಲ್ಲಿ ಭಾಗವಹಿಸಲು ತೀರ್ಮಾನಿಸಿವೆ.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ನಮ್ಮ ಜಿಲ್ಲೆ ಪಾಲಿನ ಹೇಮಾವತಿ ನೀರನ್ನು ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಪೈಪ್‌ಗಳಲ್ಲಿ ರಾಮನಗರ, ಕನಕಪುರಕ್ಕೆ ಅನಧಿಕೃತವಾಗಿ ತೆಗೆದುಕೊಂಡು ಹೋಗುವ ಸರ್ಕಾರದ ಕ್ರಮವನ್ನು ಜಿಲ್ಲೆಯ ಜನ ವಿರೋಧಿಸಿದ್ದಾರೆ. ಈ ಕಾಮಗಾರಿ ವಿರುದ್ಧ ಹೇಮಾವತಿ ಹೋರಾಟ ಸಮಿತಿ ಹಲವು ಹಂತದ ಹೋರಾಟ ಮಾಡಿದೆ. ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ಹೋರಾಟ ಬೆಂಬಲಿಸಿದ್ದಾರೆ ಎಂದು ಹೇಳಿದರು.ತುಮಕೂರು ಜಿಲ್ಲೆಯ ಜನ ಕುಡಿಯುವ ನೀರಿಗಾಗಿ ಹೇಮಾವತಿ ನೀರನ್ನು ಅವಲಂಬಿಸಿದ್ದಾರೆ. ನಮ್ಮ ಪಾಲಿನ ಪೂರ್ಣ ಪ್ರಮಾಣದ ನೀರನ್ನು ಈವರೆಗೂ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಪರಿಸ್ಥಿತಿಯಲ್ಲಿ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಮಾಗಡಿ ಭಾಗಕ್ಕೆ ನೀರು ಕೊಂಡೊಯ್ದರೆ ಜಿಲ್ಲೆಯ ಜನ ನೀರಿನ ಹಾಹಾಕಾರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಈ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಜೂ. 25 ರಂದು ತುಮಕೂರು ಜಿಲ್ಲೆ ಬಂದ್ ಗೆ ಕರೆಯಲಾಗಿದೆ. ಜಿಲ್ಲೆಯ ಜನ ಸ್ವಯಂಪ್ರೇರಿತರಾಗಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು.ಅಂದು ಬೆಳಿಗ್ಗೆ ನಗರದ ಬಿಜಿಎಸ್ ವೃತ್ತದಲ್ಲಿ ಹೋರಾಟಗಾರರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ತೆರಳುವರು. ವಿವಿಧ ಮಠಾಧೀಶರು, ವಿವಿಧ ಪಕ್ಷಗಳ ಶಾಸಕರು, ಮಾಜಿ ಶಾಸಕರು, ಹಲವು ಸಂಘಟನೆಗಳ ಪ್ರಮುಖರು ಈ ಹೋರಾಟದಲ್ಲಿ ಭಾಗವಹಿಸುವರು. ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲು, ತರಕಾರಿ,ಆಂಬುಲೆನ್ಸ್ ಮುಂತಾದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳು ಬಂದ್ ಆಗಲಿವೆ. ಜನರು ಸಹಕರಿಸಬೇಕು ಹಾಗೂ ಬೆಂಬಲಿಸಬೇಕು ಎಂದು ಹೇಳಿದರು.ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು ಮಾತನಾಡಿ, ಜಿಲ್ಲೆಯ ಜನರ ಜೀವನಾಡಿಯಾದ ಹೇಮಾವತಿ ನೀರನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲೆ ಬಂದ್ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕು. ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯನ್ನು ಸರ್ಕಾರ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಕನ್ನಡ ಮತ್ತು ಸಂಸ್ಕೃತಿ ವೇದಿಕೆ ರಾಜ್ಯಾಧ್ಯಕ್ಷ ಕನ್ನಡ ಪ್ರಕಾಶ ಮಾತನಾಡಿ, ನಮ್ಮ ಪಾಲಿನ ಹೇಮಾವತಿ ನೀರನ್ನು ಉಳಿಸಿಕೊಳ್ಳಲು ಜಿಲ್ಲೆಯ ಜನರ ಸ್ವಾಭಿಮಾನದ ಹೋರಾಟ ಶುರುವಾಗಿದೆ. ಬಂದ್ ಯಶಸ್ವಿಗೊಳಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ ಎಂದರು.ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಒಬಿಸಿ ಘಟಕ ಜಿಲ್ಲಾಧ್ಯಕ್ಷ ಎಸ್.ರಾಮಚಂದ್ರರಾವ್, ಕರ್ನಾಟಕ ಕಾರ್ಮಿಕರ ಪ್ರಜಾವೇದಿಕೆ ಅಧ್ಯಕ್ಷ ಮೀಸೆ ಸತೀಶ್, ಕರುನಾಡು ಯುವ ವೇದಿಕೆ ಅಧ್ಯಕ್ಷ ಪ್ರಸನ್ನಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಹೊಸಕೋಟೆ ನಟರಾಜ್, ವಿಠಲ್, ಹರಿಪ್ರಸಾದ್, ಇಮ್ರಾನ್ ಪಾಷಾ, ಜುಬೇದ್ ಪಾಷ ಭಾಗವಹಿಸಿದ್ದರು.