ರೈತರು ಮತ್ತು ಕೃಷಿ ಕಾರ್ಮಿಕರ ಹಿತ ಕಾಪಾಡಲು ಇಂತಹ ನೀತಿಗಳ ವಿರುದ್ಧ ಬಲಿಷ್ಠ ಚಳವಳಿ ರೂಪಿಸುವ ಅಗತ್ಯ

ಬಳ್ಳಾರಿ: ಇಲ್ಲಿನ ಗಾಂಧಿ ಭವನದಲ್ಲಿ ಅಖಿಲ ಭಾರತ ಕಿಸಾನ್ ಮಹಾಸಭಾ (ಎಐಕೆಕೆಎಂಎಸ್‌) ವತಿಯಿಂದ ಮೂರನೇ ತಾಲೂಕು ಮಟ್ಟದ ರೈತ ಸಮ್ಮೇಳನ ಆಯೋಜಿಸಲಾಗಿತ್ತು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಹಾಸಭಾದ ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದರ ಮೇಲೊಂದು ರೈತ ಹಾಗೂ ಕೃಷಿ ಕಾರ್ಮಿಕ ವಿರೋಧಿ ನೀತಿ ಜಾರಿಗೆ ತರುತ್ತಿವೆ. ವಿದ್ಯುತ್ ಖಾಸಗೀಕರಣ, ಅಮೆರಿಕ-ಭಾರತ ವ್ಯಾಪಾರ ಒಪ್ಪಂದ, ಹೊಸ ಬೀಜ ಕಾಯ್ದೆ ಸೇರಿದಂತೆ ಹಲವು ಹೆಸರಿನಲ್ಲಿ ಜಾರಿಗೊಳಿಸುತ್ತಿರುವ ನೀತಿ ರೈತರು ಮತ್ತು ಕೃಷಿ ಕಾರ್ಮಿಕರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿವೆ ಎಂದು ಆರೋಪಿಸಿದರು.

ರೈತರು ಮತ್ತು ಕೃಷಿ ಕಾರ್ಮಿಕರ ಹಿತ ಕಾಪಾಡಲು ಇಂತಹ ನೀತಿಗಳ ವಿರುದ್ಧ ಬಲಿಷ್ಠ ಚಳವಳಿ ರೂಪಿಸುವ ಅಗತ್ಯವಿದೆ. ರೈತರು ನೆಮ್ಮದಿಯಿಂದ ಬದುಕುವಂತಹ ಹೊಸ ಸಮಾಜ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ತಾಲೂಕಿನ ರೈತರು ಸಂಘಟಿತರಾಗಿ ಹೋರಾಟ ರೂಪಿಸಬೇಕು. ವಿಶೇಷವಾಗಿ ಎಚ್‌ಎಲ್‌ಸಿ ಮತ್ತು ಎಲ್‌ಎಲ್‌ಸಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಪ್ರಬಲ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಸಮ್ಮೇಳನದಲ್ಲಿ ಬೆಂಬಲ ಬೆಲೆ, ಎಚ್‌ಎಲ್‌ಸಿ ಮತ್ತು ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಪೂರೈಕೆ, ವಿದ್ಯುತ್ ಖಾಸಗೀಕರಣ, ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಹಾಗೂ ಪಿಂಚಣಿ ವ್ಯವಸ್ಥೆ ಸೇರಿದಂತೆ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಗೊತ್ತುವಳಿ ಮಂಡಿಸಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ನೂತನ ತಾಲೂಕು ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಬಸರಕೋಡು, ಉಪಾಧ್ಯಕ್ಷರಾಗಿ ಈರಣ್ಣ ಹರಗಿನಡೋಣಿ, ರುದ್ರಯ್ಯ ಬ್ಯಾಲಚಿಂತೆ, ಗೋಪಾಲ್ ಕೊರಲಗುಂದಿ ಹಾಗೂ ಕಾಸಿಂಸಾಬ್ ಡಿ.ಕಗ್ಗಲು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಧನರಾಜ್ ಎತ್ತಿನಬೂದಿಹಾಳ ಅವರನ್ನು ಆಯ್ಕೆ ಮಾಡಲಾಯಿತು.

21 ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ 30 ಕೌನ್ಸಿಲ್ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಯಿತು.

ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್, ರಾಜ್ಯ ಸಮಿತಿ ಸದಸ್ಯ ಹನುಮಂತಪ್ಪ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಕೋಳೂರು ಪಂಪಾಪತಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಲ್ಲುಕಂಬ ಪಂಪಾಪತಿ, ಕೋಳೂರು ಲಿಂಗಪ್ಪ, ಬೆಳಗಲ್ ಬಸವರಾಜ್, ಮಲ್ಲಪ್ಪ, ತಿಪ್ಪಯ್ಯ, ಚಕ್ರಪಾಣಿ, ತಿಮ್ಮಾರೆಡ್ಡಿ, ಏರಿಯಪ್ಪ ಸೇರಿದಂತೆ ನೂರಾರು ರೈತ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.