ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸಚಿವ ಅಮಿತ್ ಶಾ ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸದನದಲ್ಲಿ ಅಪಮಾನಿಸಿ ನೀಡಿರುವ ಹೇಳಿಕೆ ಖಂಡಿಸಿ ಡಾ.ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯು ಜ.7ರ ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ಮೈಸೂರು ಬಂದ್ ಕರೆ ನೀಡಿದೆ. ಅಲ್ಲದೆ, ಪುರಭವನ ಆವರಣದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ವೇದಿಕೆ ಕಾರ್ಯಕ್ರಮ ಆಯೋಜಿಸಿದೆ.ಬಂದ್ ಕರೆ ನೀಡಿರುವ ಡಾ.ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯವರು ಮಂಗಳವಾರ ಬೆಳಗ್ಗೆ 9ಕ್ಕೆ ಅಶೋಕ (ಬಲ್ಲಾಳ್) ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ನಂತರ ಮೆರವಣಿಗೆ ಹೊರಡಲು ನಿರ್ಧರಿಸಿದ್ದಾರೆ.
ಈ ಮೈಸೂರು ಬಂದ್ ಗೆ ಉದ್ಯಮಿಗಳು, ವ್ಯಾಪಾರಿಗಳು, ಪೌರಕಾರ್ಮಿಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು, ಸಂಘಟನೆಯವರು ಬೆಂಬಲ ನೀಡಿದ್ದು, ಬಂದ್ ಯಶಸ್ವಿ ಆಗಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.ಮೈಸೂರು ಬಂದ್ ನಲ್ಲಿ ಜಾತಿ ಭೇದಗಳಿಲ್ಲದೇ ಬೆಂಬಲ ವ್ಯಾಪಕವಾಗಿ ದೊರೆತಿದೆ. ಲಾರಿ ಮಾಲೀಕರು, ಆಟೋ, ಕ್ಯಾಬ್, ಟೆಂಪೋ ಮಾಲೀಕರು ಸಹ ಬೆಂಬಲ ಸೂಚಿಸಿದ್ದಾರೆ. ಎಪಿಎಂಸಿಯಲ್ಲೂ ಉತ್ತಮ ಸ್ಪಂದನೆ ದೊರೆತಿದೆ. ಆದರೆ, ಈ ವೇಳೆ ಮೆಡಿಕಲ್ ಶಾಪ್, ಹಾಲು ಮೊದಲಾದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಜೊತೆಗೆ, ಹಲವಾರು ತಂಡಗಳಾಗಿ ಸಾಗುವವರು ಅಲ್ಲಲ್ಲಿ ಅಂಗಡಿ ತೆರೆದಿರುವವವರ ಮನವೊಲಿಸುವ ಕೆಲಸ ಮಾಡಲಿದ್ದಾರೆ. ಆದರೆ, ಶಾಂತಿಯುತವಾಗಿ ಬಂದ್ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ಮಾತನಾಡಿ, ಅಮಿತ್ ಶಾ ಅವರು ಸಂವಿಧಾನದ ಬಗ್ಗೆ ಮಾತನಾಡುವುದು ಒಂದು ವ್ಯಸನ ಎಂದಿದ್ದಾರೆ. ಈ ರೀತಿ ಅವಹೇಳನ ಮಾಡುವ ಮೂಲಕ ಕೋಮುವಾದಿ, ಜಾತಿವಾದಿ ಮನಸ್ಥಿತಿ ಪ್ರತಿಬಿಂಬಿಸಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಅವರ ಹೇಳಿಕೆ ವಿರೋಧಿಸಿ ನಡೆದ ಬಂದ್ ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ರೀತಿ ಮೈಸೂರಿನಲ್ಲಿ ಕರೆ ನೀಡಿರುವ ಬಂದ್ ಗೆ ಬಹಳಷ್ಟು ಮಂದಿ ಬೆಂಬಲ ಸೂಚಿಸಿ, ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಲಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಹೆದ್ದಾರಿಗಳಲ್ಲಿ ವಾಹನ ಸಂಚಾರ ತಡೆ ಹಿಡಿಯಲಾಗುವುದು ಎಂದು ಹೇಳಿದರು.ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ವಿವಿಧ ಸಂಘಟನೆಗಳ ಮುಖಂಡರಾದ ತಿಪ್ಪಣ್ಣ, ಡಿ. ನಾಗೇಂದ್ರಕುಮಾರ್, ರಫತ್ ಖಾನ್, ದೇವನೂರು ಪುಟ್ಟನಂಜಯ್ಯ, ಹರೀಶ್ ಮೊಗಣ್ಣ, ಎಸ್. ರಾಜೇಶ್ ಮೊದಲಾದವರು ಇದ್ದರು.ವಿವಿಧ ಸಂಘಟನೆಗಳ ಬೆಂಬಲ
ಡಾ.ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯು ಜ.7ಕ್ಕೆ ಕರೆ ನೀಡಿರುವ ಮೈಸೂರು ಬಂದ್ ಗೆ ಕರ್ನಾಟಕ ದಲಿತ ಪ್ಯಾಂಥರ್ಸ್ ಅಧ್ಯಕ್ಷ ಯೋಗನರಸಿಂಹ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಅಲ್ಪಸಂಖ್ಯಾತರು, ಗ್ರಾಮಾಂತರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕಟ್ಟಡ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು ಬೆಂಬಲ ನೀಡುವಂತೆ ಹಾಗೂ ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳು ಭಾಗವಹಿಸುವಂತೆ ಕೋರಿದ್ದಾರೆ.ಮೈಸೂರು ಬಂದ್ ಬೆಂಬಲಿಸಿ ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ಬೆಂಬಲಿಸಿ, ಭಾಗವಹಿಸುತ್ತಿದೆ ಎಂದು ಜಿಲ್ಲಾಧ್ಯಕ್ಷ ಪಿ. ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಗಂಗಾಧರ್, ಜಿಲ್ಲಾ ಉಸ್ತುವಾರಿ ಪುಟ್ಟಬಸವಯ್ಯ ತಿಳಿಸಿದ್ದಾರೆ.ಪೌರಕಾರ್ಮಿಕರಿಂದ ಪಾದಯಾತ್ರೆ
ಮೈಸೂರು ಮಹಾನಗರ ಪಾಲಿಕೆ ಪೌರಕಾರ್ಮಿಕರ ಮತ್ತು ಒಳಚರಂಡಿ ಸಹಾಯಕರ ಸಂಘ, ಮನೆ ಮನೆ ಕಸ ಸಂಗ್ರಹಣೆ ವಾಹನ ಚಾಲಕರ ಸಂಘದವರು ಮೈಸೂರು ಬಂದ್ ಬೆಂಬಲಿಸಿ ಜ.7ರ ಬೆಳಗ್ಗೆ 10.30ಕ್ಕೆ ಮೈಸೂರು ಮಹಾನಗರ ಪಾಲಿಕೆಯಿಂದ ಪುರಭವನದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.ಮಾಜಿ ಮೇಯರ್ ನಾರಾಯಣ ನೇತೃತ್ವದಲ್ಲಿ ನಡೆಯುವ ಈ ಪಾದಯಾತ್ರೆಯಲ್ಲಿ ಮತ್ತೊಬ್ಬ ಮಾಜಿ ಮೇಯರ್ ಪುರುಷೋತ್ತಮ್, ಹರಿಹರ ಆನಂದಸ್ವಾಮಿ, ಆರ್. ಶಿವಣ್ಣ, ಆರ್ಟಿಸ್ಟ್ ನಾಗರಾಜು, ಶಂಕರ್ ಬಾಬು, ಗುರುದತ್ತ, ಹರೀಶ್, ರಾಮಚಂದ್ರ, ದಾಸ್, ಯತಿರಾಜ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ವಿವಿಧ ಧರ್ಮ ಗುರುಗಳೊಂದಿಗೆ ಕಾಂಗ್ರೆಸ್ ಭಾಗಿ
ಮೈಸೂರು ಬಂದ್ ಬೆಂಬಲಿಸಿ ಸ್ವಾತಂತ್ರ್ಯ ಸೇನಾನಿ, ಸಮಾಜದ ವಿವಿಧ ಧರ್ಮ ಗುರುಗಳೊಂದಿಗೆ ಕಾಂಗ್ರೆಸ್ ಪ್ರಮುಖರು ಭಾಗವಹಿಸಲಿದ್ದಾರೆ. ಜ.7ರ ಬೆಳಗ್ಗೆ 10ಕ್ಕೆ ಕಾಂಗ್ರೆಸ್ ಭವನದಿಂದ ಪುರಭವನ ಅಂಬೇಡ್ಕರ್ ಪ್ರತಿಮೆವರೆಗೂ ಗೌರವ ಮೆರವಣಿಗೆ ಸಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ ತಿಳಿಸಿದ್ದಾರೆ.