ಸಾರಾಂಶ
ದಾವಣಗೆರೆ: ಸಹಕಾರ ಸಂಘಗಳನ್ನು ಬಳಸಿಕೊಂಡು ಸಾವಯವ ಕೃಷಿಯನ್ನು ಉತ್ತೇಜಿಸುವ ಜೊತೆಗೆ ನ್ಯಾಯಬೆಲೆ ಅಂಗಡಿ, ಗ್ಯಾಸ್ ಏಜೆನ್ಸಿ ನಿರ್ವಹಿಸಿದರೆ ಜನರಿಗೂ ಅನುಕೂಲವಾಗುತ್ತದೆ ಎಂದು ಚಿತ್ರದುರ್ಗ ಸಂಸದ, ಮಾಜಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಸಹಕಾರ ಭಾರತಿ-ಕರ್ನಾಟಕ ಹಮ್ಮಿಕೊಂಡಿದ್ದ 7ನೇ ರಾಜ್ಯ ಸಹಕಾರಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅತಿಯಾದ ಕ್ರಿಮಿನಾಶ, ರಸಗೊಬ್ಬರ ಬಳಕೆಯಿಂದಾಗಿ ಭೂಮಿ ಫಲವತ್ತತೆ ಕ್ಷೀಣಿಸುತ್ತಿದ್ದು, ಭೂಮಿಯ ಸುರಕ್ಷತೆ ಕಾಪಾಡಲು ಸಾವಯವ ಕೃಷಿ ಉತ್ತೇಜಿಸುವ ಅವಶ್ಯಕತೆ ಇದೆ ಎಂದರು. ಕ್ರಿಮಿನಾಶಕ, ರಾಸಾಯನಿಕದ ಅತಿಯಾದ ಬಳಕೆಯಿಂದಾಗಿ ನೀರಾವರಿ ಪ್ರದೇಶದ ಲಕ್ಷಾಂತರ ಎಕರೆ ಭೂಮಿ ಬಂಜರಾಗಿದೆ. ಜಮಖಂಡಿ ತಾಲೂಕಿನಲ್ಲಿ ಅತೀ ಹೆಚ್ಚು ಭೂ ಪ್ರದೇಶವು ಸವಳು ಮಣ್ಣಾಗಿ ಪರಿವರ್ತನೆಯಾಗಿದೆ. ರೈತರಿಗೆ ವೈಜ್ಞಾನಿಕವಾಗಿ ನಿರ್ವಹಣೆ ಗೊತ್ತಿಲ್ಲದೇ, ನೀರಾವರಿ ಪ್ರದೇಶದ ನೆಲವೂ ಬಂಜರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಸಂಸ್ಥೆಗಳ ಮಟ್ಟದಲ್ಲಿ ರೈತರಿಗೆ ತರಬೇತಿ ನೀಡುವ ಕೆಲಸ ಆಗಬೇಕಿದೆ ಎಂದು ಹೇಳಿದರು. ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ದೇಶದ ಆಹಾರ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಗ್ಯಾಸ್ ಏಜೆನ್ಸಿಗಳು, ಪೆಟ್ರೋಲ್ ಪಂಪ್‌ಗಳನ್ನು ಸಹಕಾರ ಸಂಘಗಳಿಗೆ ವಹಿಸಲು ಕೇಂದ್ರ ಮುಂದಾಗಿದೆ. ಗ್ರಾಮ ಮಟ್ಟದಲ್ಲಿ ಸಹಕಾರ ಸಂಘಗಳಿಗೆ ನ್ಯಾಯಬೆಲೆ ಅಂಗಡಿಗಳ ಹೊಣೆಗಾರಿಕೆ ಕೊಟ್ಟರೆ ಜನರಿಗೂ ಅನುಕೂಲವಾಗುತ್ತದೆ. ಹಾಲಿನ ಸೊಸೈಟಿಯಂತೆ ಅವುಗಳೂ ಇರಬೇಕು. ಸಾಕಷ್ಟು ಸಿಬ್ಬಂದಿ ಇರುವುದರಿಂದ ಫಲಾನುಭವಿಗಳಿಗೆ ಸಾಧ್ಯವಾದ ಸಮಯದಲ್ಲಿ ಪಡಿತರ ಕೊಂಡೊಯ್ಯಬಹುದು. ಇದರಿಂದ ಬರುವ ಕಮೀಷನ್ ಹಣದಲ್ಲಿ ಸೊಸೈಟಿ ಖರ್ಚು ನಿಭಾಯಿಸಬಹುದು ಎಂದು ತಿಳಿಸಿದರು. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದಿಂದ ಪ್ರತಿದಿನ 93 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ರೈತರಿಗೆ ದಿನವೊಂದಕ್ಕೆ ಸರ್ಕಾರದಿಂದ 5 ಕೋಟಿ ರು. ಸಹಾಯಧನ ಸಿಗುತ್ತಿದೆ. ಶಿಕ್ಷಣ, ಮಹಿಳಾ ಆರ್ಥಿಕ ಸಬಲೀಕರಣ, ಪಶು ಸಂಗೋಪನೆಗೆ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಸೂಕ್ತ ಯೋಜನೆ ರೂಪಿಸುವ ಅವಶ್ಯಕತೆ ಇದೆ. ರೈತರಿಗೆ ಸರಿಯಾದ ಮಾಹಿತಿ ಒದಗಿಸಿದರೆ ನೀರಾವರಿ ಯೋಜನೆ ಯಶಸ್ವಿಗೊಳಿಸಬಹುದು. ಸಾಮೂಹಿಕ ನೀರಾವರಿಯಿಂದ ಖರ್ಚು ವೆಚ್ಚ ಕಡಿಮೆ ಮಾಡಬಹುದು. ಇದಕ್ಕಾಗಿ ಸಹಕಾರಿ ಸಂಘಗಳು ಮುಂದೆ ಬರಲಿ ಎಂದರು. ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಮೂರು ದಶಕದ ಹಿಂದೆ ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ಗೌರವ ಇತ್ತು. ಆದರೆ, ಸಹಕಾರ ಕ್ಷೇತ್ರಕ್ಕೂ ರಾಜಕಾರಣಿಗಳ ಮಧ್ಯ ಪ್ರವೇಶದಿಂದ ಸಂಘಗಳು ಮುಳುಗುತ್ತಿವೆ. ನಮ್ಮವರು ಅಧ್ಯಕ್ಷರಾಗಬೇಕೆಂಬ ಸ್ವಜನ ಪಕ್ಷಪಾತವು ಸಹಕಾರಿ ಕ್ಷೇತ್ರಕ್ಕೆ ಮಾರಕವಾಗುತ್ತದೆ. ಒಳ್ಳೆಯ ಕೆಲಸ ಮಾಡುವವರು ಸಂಘದ ಅಧ್ಯಕ್ಷರು, ಪದಾಧಿಕಾರಿಗಳಾಗಬೇಕು. ಹಾಗಾದಾಗ ಮಾತ್ರ ಸಂಘಗಳು ಉಳಿಯುತ್ತವೆ, ಬೆಳೆಯುತ್ತವೆ, ಅಭಿವೃದ್ಧಿ ಹೊಂದುತ್ತದೆ. ಸಂಘಗಳ ಬೆಳವಣಿಗೆಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು. ಬೇಲೂರು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಹಕಾರ ಭಾರತಿ ರಾಜ್ಯಾಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ ಅಧ್ಯಕ್ಷತೆ ವಹಿಸಿದ್ದರು.
ಸಹಕಾರ ಭಾರತಿ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಉಪಾಧ್ಯಕ್ಷ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ನಾಗಲಿಂಗ ಪತ್ತಾರ್, ಮರಿಗೌಡರನ್ನು ಸನ್ಮಾನಿಸಲಾಯಿತು.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಉದಯ ವಾಸುದೇವ ಜೋಶಿ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಜಿ.ನಂಜನಗೌಡ, ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚಪೂರ, ಹಾಲಪ್ಪ ಆಚಾರ್, ಕೃಷ್ಣಾರೆಡ್ಡಿ ಮೋಹನ್ ದಾಸ್ ನಾಯ್ಕ, ಎಂ.ಆರ್.ಪ್ರಭುದೇವ್, ಜಿ.ಎನ್.ಸ್ವಾಮಿ, ದಾ-ಹ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ.ಮುರುಗೇಶ ಮತ್ತಿತರರಿದ್ದರು.