ನಗರಸಭೆ ಮಳಿಗೆ ಟೆಂಡರ್‌ ಕರೆದು ಹಂಚಿಕೆ ಮಾಡಿ: ಸಂಜೀವಕುಮಾರ ನೀರಲಗಿ

| Published : Sep 09 2025, 01:01 AM IST

ನಗರಸಭೆ ಮಳಿಗೆ ಟೆಂಡರ್‌ ಕರೆದು ಹಂಚಿಕೆ ಮಾಡಿ: ಸಂಜೀವಕುಮಾರ ನೀರಲಗಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿರುವ ವಾಣಿಜ್ಯ ಮಳಿಗೆಗಳಿಂದ ಹೆಚ್ಚಿನ ಬಾಡಿಗೆ ವಸೂಲಿ ಮಾಡುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಎಲ್‌ಬಿಎಸ್ ಮಾರ್ಕೆಟ್‌ನಲ್ಲಿ ನಿರ್ಮಿಸಿರುವ 29 ಮಳಿಗೆಗಳು ವ್ಯಾಪಾರಿಗಳಿಗೆ ಬಳಕೆಯಾಗದೆ ಹಾಳು ಬಿದ್ದಿವೆ.

ಹಾವೇರಿ: ನಗರಸಭೆ ವ್ಯಾಪ್ತಿಯಲ್ಲಿರುವ ಮಳಿಗೆಗಳನ್ನು ಬಹಳ ವರ್ಷಗಳಿಂದ ಹರಾಜು ನೀಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರಸಭೆಗೆ ಬರಬೇಕಿದ್ದ ಆದಾಯ ಬರುತ್ತಿಲ್ಲ. ಶೀಘ್ರದಲ್ಲಿ ಟೆಂಡರ್‌ ಕರೆದು ಮಳಿಗೆ ಹರಾಜು ಮಾಡಬೇಕು ಎಂದು ನಗರಸಭೆ ಸದಸ್ಯ, ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಕಿಡಿಕಾರಿದರು.

ನಗರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಶಶಿಕಲಾ ಮಾಳಗಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ವಿಶೇಷ ತುರ್ತು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ 243 ಮಳಿಗೆಗಳಿವೆ. 2017ರಲ್ಲಿ ಸಿಂಗಲ್ ಟೆಂಡರ್ ಆಗಿರುವ 93 ಮಳಿಗೆಗಳು ಇವತ್ತಿಗೂ ಹಳೆ ಬಾಡಿಗೆಯನ್ನು ಪಾವತಿಸುತ್ತಿದ್ದಾರೆ. ಗೂಗಿಕಟ್ಟಿಯ ವಿ ಕಾಂಪ್ಲೆಕ್ಸ್‌ನಲ್ಲಿ 40 ಮಳಿಗೆ ಇವೆ. ಈ ಪೈಕಿ 24 ಮಳಿಗೆಗಳು ಕೇವಲ ₹250 ಪಾವತಿಸುತ್ತಿದ್ದಾರೆ. 14 ಮಳಿಗೆಯವರು ₹4 ಸಾವಿರ ಕಟ್ಟುತ್ತಿದ್ದಾರೆ. ಕೆಲವರು ₹17 ಸಾವಿರದಿಂದ ₹18 ಸಾವಿರ ಬಾಡಿಗೆ ಕಟ್ಟಲು ಸಿದ್ಧರಿದ್ದಾರೆ ಎಂದರು.

ನಗರದಲ್ಲಿರುವ ವಾಣಿಜ್ಯ ಮಳಿಗೆಗಳಿಂದ ಹೆಚ್ಚಿನ ಬಾಡಿಗೆ ವಸೂಲಿ ಮಾಡುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಎಲ್‌ಬಿಎಸ್ ಮಾರ್ಕೆಟ್‌ನಲ್ಲಿ ನಿರ್ಮಿಸಿರುವ 29 ಮಳಿಗೆಗಳು ವ್ಯಾಪಾರಿಗಳಿಗೆ ಬಳಕೆಯಾಗದೆ ಹಾಳು ಬಿದ್ದಿವೆ. ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯತ್ತಿವೆ. ಕೆಲ ಸಿಎ ಸೈಟ್‌ಗಳು ಮಾರಾಟ ಆಗುತ್ತಿವೆ. ನಮ್ಮ ನಗರಸಭೆ ಆಸ್ತಿ ಕಾಪಾಡಿಕೊಳ್ಳುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾದರೆ ನಗರಸಭೆಗೆ ಆದಾಯ ಹೇಗೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಐಡಿಎಸ್‌ಎಂಟಿ ಮಳಿಗೆಗಳ ಅನುದಾನದಲ್ಲಿ ₹3.40 ಕೋಟಿ ಅನುದಾನವಿದ್ದು, ನಗರದ ವಾಲ್ಮೀಕಿ ವೃತ್ತದ ಬಳಿಯ ಸಿಎ ಸೈಟ್‌ನಲ್ಲಿ ಸುಸಜ್ಜಿತ ಮಾಲ್ ನಿರ್ಮಿಸುವಂತೆ ಅಧ್ಯಕ್ಷರ ಗಮನಕ್ಕೆ ತಂದರು.

ನಗರದ ಆಯಕಟ್ಟಿನರುವ ಸಿಎ ಸೈಟ್‌ನಲ್ಲಿ ವಾಣಿಜ್ಯ ಮಳಿಗೆ ಹಾಗೂ ಸುಸಜ್ಜಿತ ಮಾಲ್ ನಿರ್ಮಿಸಲು ಹಾಗೂ ಈಗಾಗಲೇ ನಿರ್ಮಿಸಿರುವ ಮಳಿಗೆಗಳನ್ನು ಹಂಚಿಕೆ ಮಾಡಲು ಅಧ್ಯಕ್ಷರು ನಿರ್ಣಯ ಕೈಗೊಂಡರು.

ಪೈಪಲೈನ್ ದುರಸ್ತಿ ಮಾಡಿ: ಅಂಬೇಡ್ಕರ್ ಸರ್ಕಲ್, ಸುಭಾಸ ಸರ್ಕಲ್ ಸೇರಿ ಹಲವು ಕಡೆ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ. ರಿಪೇರಿ ಮಾಡಿಸುವಂತೆ ಸದಸ್ಯ ಪೀರಸಾಬ್ ಚೋಪದಾರ ಸಭೆಯ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಅಧ್ಯಕ್ಷೆ ಶಶಿಕಲಾ ಮಾಳಗಿ ನಗರದಲ್ಲಿ ಆಗಾಗ ಒಡೆದು ಹಾಳಾಗುವ ಕುಡಿಯುವ ನೀರಿನ ಪೈಪಲೈನ್ ದುರಸ್ತಿಗೆ ವಾರ್ಷಿಕ ₹10 ಲಕ್ಷ ಮೀಸಲಿಡುವ ಬಗ್ಗೆ ಅನುಮತಿ ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸಚಿನ್ ಡಂಬಳ ಪೈಪ್‌ಲೈನ್ ರಿಪೇರಿ ಕೆಲಸವೊಂದಕ್ಕೆ ₹10 ಲಕ್ಷ ಮೀಸಲು ಅಗತ್ಯವಿಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದರು.

ಪೈಪ್‌ಲೈನ್ ಪೂರ್ತಿ ಒಡೆದು ಹಾಳಾಗಿದ್ದರೆ ನವೀಕರಣ ಪೈಪ್ ಕನೆಕ್ಷನ್ ಕೊಡಿ, ಸಣ್ಣಪುಟ್ಟ ಕೆಲಸಗಳಿದ್ದರೆ ವಾಲ್‌ಮನ್‌ಗಳಿಂದಲೇ ಕೆಲಸ ಮಾಡಿಸಿ ಎಂದು ಆಗ್ರಹಿಸಿದರು.ಧರಣಿ ನಡೆಸುವ ಎಚ್ಚರಿಕೆ: ಕುಡಿಯುವ ನೀರಿಗೆ ಸಂಬಂಧಿಸಿದಂತೆ ₹108 ಲಕ್ಷ ಅನುದಾನ ಬಂದಿದ್ದು, ಜಲ ಶುದ್ಧಿಕರಣಕ್ಕೆ ₹40 ಲಕ್ಷ, ಕರ್ಜಗಿ ಜಾಕವೆಲ್ ಬಳಿ ದುರಸ್ತಿಗೆ ₹40 ಲಕ್ಷ, ನಗರಕ್ಕೆ ನೀರು ಸರಬರಾಜು ಮಾಡಲು ₹28 ಲಕ್ಷ ರು. ಹಂಚಿಕೆ ಮಾಡಿ ಮೂರು ತಿಂಗಳೇ ಕಳೆದಿವೆ. ಆದರೆ ಇಲ್ಲಿಯವರೆಗೂ ನಗರಸಭೆ ಟೆಂಡರ್ ಕರೆದಿಲ್ಲವೆಂದರೆ ಏನರ್ಥ ಎಂದು ಸದಸ್ಯ ಸಂಜೀವಕುಮಾರ ನೀರಲಗಿ ಪ್ರಶ್ನಿಸಿದರು. ಡಿಸಿಯವರು, ನಗರ ಯೋಜನಾ ನಿರ್ದೇಶಕರಿಗೆ ಪ್ರಸ್ತಾವನೆ ಕೊಟ್ಟಿದ್ದೇವೆ, ಸಹಿ ಬಾಕಿ ಇದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಆಕ್ಷೇಪಿಸಿದ ಸಂಜೀವಕುಮಾರ ಅಧಿಕಾರಿಗಳನ್ನು ಫಾಲೋ ಅಪ್ ಮಾಡಿ, ಕುಳಿತುಕೊಂಡು ಆದೇಶ ಮಾಡಿಸಿಕೊಂಡು ಬರಬೇಕು. ಇಲ್ಲವಾದರೆ ನಗರಸಭೆಯಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಹಣ ಲೂಟಿ, ಆರೋಪ: 2021- 25ರ ವರೆಗೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಬೇರೆ ಬೇರೆ ಅಭಿವೃದ್ಧಿ ಕೆಲಸ ಮಾಡಿ ಹಣ ಖರ್ಚು ಮಾಡಿದ್ದೀರಿ. ಬಳಿಕ ಮುಂದಿನ ಸಾಮಾನ್ಯ ಸಭೆಯಲ್ಲಿ ಆ ಬಗ್ಗೆ ಅನುಮೋದನೆ ಪಡೆದುಕೊಳ್ಳುವುದೇ ಇಲ್ಲ. ಹೀಗಾಗಿ ಇದರಲ್ಲಿ ಕೋಟ್ಯಂತರ ರು. ಲೂಟಿಯಾಗಿರುವ ಸಂಶಯವಿದೆ. ಈ ಬಗ್ಗೆ ಮಾಹಿತಿ ಕೇಳಿದರೂ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಇದರ ಸಂಪೂರ್ಣ ಮಾಹಿತಿ ಕೊಟ್ಟು ಸಭೆ ಮುಂದುವರಿಸುವಂತೆ ಸದಸ್ಯ ಐ.ಯು. ಪಠಾಣ ಆಗ್ರಹಿಸಿದರು.

ಆಗ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶಶಿಕಲಾ ಮಾಳಗಿ, ವಾರದೊಳಗೆ ಮತ್ತೊಂದು ಸಭೆ ಕರೆದು ಅಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪೌರಾಯುಕ್ತ ಎಚ್. ಕಾಂತರಾಜು ಸೇರಿ ನಗರಸಭೆ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಇದ್ದರು.