ಸಾರಾಂಶ
ರಾಮನಗರ: ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯನ್ನು ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳು, ಪದಾಧಿಕಾರಿಗಳು ಹಾಗೂ ದೇವರಾಜ್ ಅರಸು ಅವರ ಅಭಿಮಾನಿಗಳು ಸಹಕಾರ ನೀಡುವಂತೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಹಿಂದುಳಿದ ವರ್ಗದವರಿಗೆ ಶಕ್ತಿ ನೀಡಿ, ಅವರ ಬದುಕಿಗೆ ಜೀವ ತುಂಬಿದ ಡಿ.ದೇವರಾಜ ಅರಸುರವರು ದೀನದಲಿತರು ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅರಸು ಅವರಂತಹ ಮಹನೀಯರ ಜನ್ಮ ದಿನಾಚರಣೆಯನ್ನು ಜಿಲ್ಲೆಯಲ್ಲಿ ಬಹಳ ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಹಾಗೂ ಎಲ್ಲರ ಸಹಭಾಗಿತ್ವದಲ್ಲಿ ಗೌರವಯುತವಾಗಿ ಆಯೋಜಿಸಲಾಗುವುದು. ರಾಜ್ಯದ ಎಲ್ಲಾ ವರ್ಗದವರು ಅವರಿಗೆ ಗೌರವ ನೀಡುತ್ತಾರೆ. ಅವರಿಗೆ ನಮನ ಸಲ್ಲಿಸಲು ಜಿಲ್ಲೆಯ ಜನರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುವ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಲು ವಿವಿಧ ಸಾಂಸ್ಕೃತಿಕ ಕಲಾತಂಡಗಳನ್ನು ಕರೆ ತರಲಾಗುವುದು. ಆನೆ ಹಾಗೂ ಬೆಳ್ಳಿ ರಥದಲ್ಲಿ ದೇವರಾಜ ಅರಸು ಅವರ ಭಾವಚಿತ್ರವನ್ನಿರಿಸಿ ಮೆರವಣಿಗೆ ಮಾಡಲಾಗುವುದು. ಅಂದು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರನ್ನು ಸನ್ಮಾನಿಸಲಾಗುವುದು. ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು.ಹಿಂದುಳಿದ ವರ್ಗಗಳ ಶಾಲಾ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿಯಂತಹ ಕೆಲಸಗಳನ್ನು ಮಾಡಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ, ಎಲ್ಲರೂ ಒಗ್ಗಟ್ಟಾಗಿ ಡಿ. ದೇವರಾಜ ಅರಸು ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು.
ಇದಕ್ಕೂ ಮುನ್ನ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಮಾತನಾಡಿ, ದೇವರಾಜ ಅರಸು ಅವರ ಜಯಂತಿಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.ಸಮುದಾಯದ ಮುಖಂಡರು ಮಾತನಾಡಿ, ಆ.20ರಂದು ದೇವರಾಜ ಅರಸು ಅವರ ಜನ್ಮ ದಿನಾಚರಣೆಯಿದೆ. ಈ ಬಾರಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಬೇಕು, ಅದಕ್ಕಾಗಿ ಆ.20ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಿ, ನಂತದ ದಿನದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನವರು ಸೇರಿ ಜಿಲ್ಲಾ ಮಟ್ಟದಲ್ಲಿ ಡಿ. ದೇವರಾಜ ಅರಸ್ ಜಯಂತಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸುವ ಬಗ್ಗೆ ಸಲಹೆ ನೀಡಿದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ , ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಬಿಲಾಲ್, ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ಪ್ರಧಾನ ಕಾರ್ಯದರ್ಶಿ ನಾರಾಯಣ್, ಕಾರ್ಯಧ್ಯಕ್ಷ ಆರ್. ರಂಗಪ್ಪ, ಮಾಗಡಿ ಮಾರಣ್ಣ, ಬಿ.ಉಮೇಶ, ಸುಜ್ಞಾನಮೂರ್ತಿ, ಪವಿತ್ರ ಪ್ರಭಾಕರ ರೆಡ್ಡಿ, ಗುರುವೇ ಗೌಡ, ಸುಗಂಧರಾಜ ಅರಸ್, ಸಂಘದ ಪದಾಧಿಕಾರಿಗಳು ಹಾಜರಿದ್ದರು.5ಕೆಆರ್ ಎಂಎನ್ 6.ಜೆಪಿಜಿ
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ಡಿ. ದೇವರಾಜ ಅರಸು 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಿದ್ದತಾ ಸಭೆ ನಡೆಯಿತು.