ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಶಿರಸಿಯಲ್ಲಿ ಜ. 11ರಂದು ನಡೆಯುವ ಬೃಹತ್ ಜನ ಸಮಾವೇಶದ ಕುರಿತು ಯಲ್ಲಾಪುರ ಪಟ್ಟಣದ ಟಿಎಸ್ಎಸ್ ಶಾಖೆಯ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಯಲ್ಲಾಪುರ: ಪಶ್ಚಿಮ ಘಟ್ಟದ ನದಿಗಳ ಜೋಡಣೆ ಯೋಜನೆಯನ್ನು ಸ್ಥಗಿತಗೊಳಿಸಲು ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಆಂದೋಲನ ನಡೆಯುತ್ತಿದೆ. ಪಶ್ಚಿಮ ಘಟ್ಟದ ಪರಿಸರ, ನಮ್ಮ ಬದುಕನ್ನು ಉಳಿಸಿಕೊಳ್ಳುವ ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ವಿನಂತಿಸಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಶಿರಸಿಯಲ್ಲಿ ಜ. 11ರಂದು ನಡೆಯುವ ಬೃಹತ್ ಜನ ಸಮಾವೇಶದ ಕುರಿತು ಪಟ್ಟಣದ ಟಿಎಸ್ಎಸ್ ಶಾಖೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.‌ ಯೋಜನೆಯ ಡಿಪಿಆರ್‌ಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅದರ ಪ್ರಕ್ರಿಯೆಗಳು ಮುಗಿದು, ಅನುಷ್ಠಾನದ ಹಂತಕ್ಕೆ ಬರಲು ಕೆಲವು ತಿಂಗಳುಗಳು ಬೇಕು. ಅಷ್ಟರೊಳಗೆ ಹೋರಾಟ ತೀವ್ರಗೊಳಿಸಿ, ಯೋಜನೆ ರದ್ದಾಗುವಂತೆ ಮಾಡಬೇಕು. ಈ ಹೋರಾಟ ಕೇವಲ ಪಶ್ಚಿಮ ಘಟ್ಟಕ್ಕೆ ಸೀಮಿತವಾಗದೇ, ಮುಂದೆ ಎಂದೂ ಇಡೀ ರಾಜ್ಯದಲ್ಲಿ ಇಂತಹ ಅವೈಜ್ಞಾನಿಕ ಯೋಜನೆಗಳು ನಡೆಯದೇ ಇರುವಂತೆ ನೀಡುವ ಎಚ್ಚರಿಕೆಯಾಗಬೇಕು ಎಂದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯೋಜನೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಜನರಿಗೆ ಸರಿಯಾದ ತಿಳಿವಳಿಕೆ ಮೂಡಿಸಿ, ಹೋರಾಟಕ್ಕೆ ಇಳಿಯುವಂತೆ ಮಾಡಬೇಕು. ಹೋರಾಟದ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ವಾಸ್ತವಿಕ ನೆಲೆಗಟ್ಟಿನಲ್ಲಿ ಇಲ್ಲಿನ ಸ್ಥಿತಿಯನ್ನು ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಗಮನ ಸೆಳೆಯಬೇಕು. ಬೇರೆ ಬೇರೆ ರೀತಿಯಲ್ಲಿ ಹೋರಾಟ ಹತ್ತಿಕ್ಕುವ ಪ್ರಯತ್ನಗಳೂ ನಡೆಯುವ ಸಾಧ್ಯತೆ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಯೋಜನೆಯ ಅನುಷ್ಠಾನದಿಂದ ನಮ್ಮ ಬದುಕಿನ ಮೇಲೆ ನೇರ ಪರಿಣಾಮ ಆಗಲಿದೆ. ನಾವು ಯೋಜನೆಯನ್ನು ವಿರೋಧಿಸುತ್ತಿರುವುದು ಯಾಕೆ? ಈ ಯೋಜನೆ ಹೇಗೆ ಅವೈಜ್ಞಾನಿಕವಾದದ್ದು? ಎಂಬ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಡಿ. ಶಂಕರ ಭಟ್ಟ, ಎಸ್.ಎಂ. ಭಟ್ಟ, ಎಂ.ಕೆ. ಭಟ್ಟ ಯಡಳ್ಳಿ ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಹೋರಾಟ ಯಶಸ್ವಿಯಾಗುವ ನಿಟ್ಟಿನಲ್ಲಿ ಮಾಡಬೇಕಾದ ಸಿದ್ಧತೆಯ ಬಗ್ಗೆ ಚರ್ಚಿಸಲಾಯಿತು.

ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಮಾವಿಮನೆ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಯಲ್ಲಾಪುರ ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ನಗರ ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಟಿಎಸ್ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ, ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ಟಿ.ಆರ್. ಹೆಗಡೆ, ನರಸಿಂಹ ಸಾತೊಡ್ಡಿ ಇತರರಿದ್ದರು. ಟಿಎಸ್ಎಸ್ ಸಲಹಾ ಸಮಿತಿ ಸದಸ್ಯ ಗಣಪತಿ ಭಟ್ಟ ಸ್ವಾಗತಿಸಿದರು. ಆನಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ವಂದಿಸಿದರು.