ಅಘನಾಶಿನಿ ಕಣಿವೆಯ ಪರಿಸರ ಕಾರ್ಯಕರ್ತರ ಸಭೆ ಶ್ರೀ ಮನ್ನೆಲೆಮಾವು ಮಠದಲ್ಲಿ ನಡೆಯಿತು. ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಅವರು ವೈಜ್ಞಾನಿಕ ವರದಿ ಬಿಡುಗಡೆ ಮಾಡಿದರು.

ಸಿದ್ದಾಪುರ: ಅಘನಾಶಿನಿ ಕಣಿವೆಯ ಪರಿಸರ ಕಾರ್ಯಕರ್ತರ ಸಭೆ ಶ್ರೀ ಮನ್ನೆಲೆಮಾವು ಮಠದಲ್ಲಿ ನಡೆಯಿತು. ವ್ಯಾಪಕ ಜನಜಾಗೃತಿ ಆನಂತರ ಶಿರಸಿಯ ಬೇಡ್ತಿ-ಅಘನಾಶಿನಿ ಸಮಾವೇಶದಲ್ಲಿ ಬಹುದೊಡ್ಡ ಜನಶಕ್ತಿ ಪ್ರಕಟವಾಯಿತು. ಇದಕ್ಕೆ ನೂರಾರು ಕಾರ್ಯಕರ್ತರ ನಿರಂತರ ಪರಿಶ್ರಮ ಕಾರಣ ಎಂದು ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಶ್ಲಾಘಿಸಿ, ನಮ್ಮ ಜನಾಂದೋಲನ ಮುಂದುವರಿಸೋಣ. ಶಿವರಾತ್ರಿಯಂದು ಅಘನಾಶಿನಿ ನದಿ ಪೂಜೆ ಮಾಡುವ ಮೂಲಕ ನದಿಕಣಿವೆ ರಕ್ಷಣೆಗೆ ಗಂಗಾ ಮಾತೆಯಲ್ಲಿ ಪ್ರಾರ್ಥಿಸೋಣ ಎಂದು ಕರೆ ನೀಡಿದರು. ಬಳಿಕ ವೈಜ್ಞಾನಿಕ ವರದಿ ಬಿಡುಗಡೆ ಮಾಡಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಪಶ್ಚಿಮ ಘಟ್ಟದ ನದಿ ಕಣಿವೆಗಳನ್ನು ಉಳಿಸಲು ಸರ್ಕಾರ ತನ್ನ ಅಭಿವೃದ್ಧಿ ನೀತಿಗೆ ಬದಲಾವಣೆ ತರಬೇಕು. ಸುಸ್ಥಿರ ಮಲೆನಾಡಿನ ಅಭಿವೃದ್ಧಿಗೆ ನಮ್ಮ ಜನಪ್ರತಿನಿಧಿಗಳು ಒತ್ತಾಯ ಮಾಡಬೇಕು. ಫೆಬ್ರುವರಿಯಲ್ಲಿ ಉತ್ತರ ಕನ್ನಡ ಜನಪ್ರತಿನಿಧಿಗಳು ನದಿ ತಿರುವು ಯೋಜನೆ ಕೈಬಿಡಲು ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡುವ ಕಾರ್ಯಕ್ರಮವಿದೆ ಎಂದರು.

ಸಂಚಾಲಕ ಬಾಲಚಂದ್ರ ಸಾಯಿಮನೆ, ಅಘನಾಶಿನಿ ತಿರುವು ಯೋಜನೆಯ ಸಾಧ್ಯತಾವರದಿಯಲ್ಲಿ ನದಿ ಕಣಿವೆ, ಇಲ್ಲಿನ ಜನ, ವನದ ಬಗ್ಗೆ ಯಾವ ಉಲ್ಲೇಖವಿಲ್ಲ. ನದಿ ಹುಟ್ಟಿ ಸಮುದ್ರ ಸೇರುವ ದೂರಕ್ಕಿಂತ ಅಘನಾಶಿನಿ ತಿರುವು ಯೋಜನೆಯ ಕಾಲುವೆ ೨೦೦ ಕಿಮೀ ಉದ್ದವಿದೆ. ಜಗತ್ತಿನಾದ್ಯಂತ ವಿನಾಶದ ಅಂಚಿನ ಸಸ್ಯ, ಜೀವವೈವಿಧ್ಯ ಉಳಿವಿಗೆ ಪ್ರಯತ್ನ ನಡೆಯುತ್ತದೆ. ಇಲ್ಲಿ ನಮ್ಮ ಸರ್ಕಾರಗಳೇ ಇವುಗಳ ವಿನಾಶ ಮಾಡುವ ಬೃಹತ್ ನದಿ ತಿರುವು ಯೋಜನೆ ಪ್ರಕಟ ಪಡಿಸುತ್ತಿವೆ. ಡಾ. ಕೇಶವ ಎಚ್. ಕೂರ್ಸೆ ಅವರ ಸಂಯೋಜಕತ್ವದಲ್ಲಿ ನದಿತಿರುವು ಯೋಜನೆಗಳ ಪರಿಣಾಮಗಳ ಬಗ್ಗೆ ವೈಜ್ಞಾನಿಕ ವರದಿ ಸಿದ್ಧಿಪಡಿಸಿದ್ದೇವೆ. ಇದು ಆರಂಭಿಕ ವರದಿ ಎಂದರು. ಸಭೆಯಲ್ಲಿ ಪಾಲ್ಗೊಂಡ ಶಿರಸಿ ಮತ್ತು ಸಿದ್ಧಾಪುರ ತಾಲೂಕಿನ ಮುಖಂಡರು, ನದಿ ಪೂಜೆ ನಡೆಸುವ ಸ್ಥಳ ಗುರುತಿಸಿದರು. ೧೫ ಸ್ಥಳಗಳಲ್ಲಿ ನದಿ ಪೂಜೆ, ಆರತಿ ಕಾರ್ಯಕ್ರಮ ನಡೆಸಲು ಸಂಯೋಜಕರ ನಿಯುಕ್ತ ಮಾಡಲಾಯಿತು.

ಕರಾವಳಿ ಪ್ರದೇಶದಲ್ಲಿ ಜಾಗೃತಿ ಜಾಥಾ ನಡೆಸಲು ನಿಶ್ಚಯಿಸಿ ಪತ್ರ ಚಳವಳಿ, ಸಂಘ-ಸಂಸ್ಥೆಗಳ ನಿರ್ಣಯ ಸಂಗ್ರಹ ಮುಂತಾದ ಕಾರ್ಯಗಳ ಬಗ್ಗೆ ಜವಾಬ್ದಾರಿ ನೀಡಲಾಯಿತು. ಮಹೇಶ ಮುಕ್ರಮನೆ ಸ್ವಾಗತಿಸಿದರು. ಸಂಚಾಲಕ ಗೋಪಾಲಕೃಷ್ಣ ತಂಗಾರಮನೆ ವಂದಿಸಿದರು.

ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರ, ಬಲರಾಮ ಕಾನಸೂರು, ಚಾರು ಶಾಸ್ತ್ರಿ ಕುಳುವೆ, ಶ್ರೀಪಾದ ಹೆಬ್ಬಲಸು, ವಿ.ಆರ್. ಭಟ್ ಗೋಳಿ, ಎನ್.ವಿ. ಮುತ್ತಿಗೆ, ಐ.ಎಸ್. ಭಟ್, ಗಣಪತಿ ಕಲ್ಮನೆ, ಬಾಲು ಹೂಡ್ಲಮನೆ, ಪ್ರಸನ್ನ ಮುಂತಾದವರು ಮಾತನಾಡಿದರು. ವಿವಿಧ ಗ್ರಾಪಂ, ಸಹಕಾರಿ ಸಂಘ, ಸೀಮಾ ಪ್ರಮುಖರು ಪಾಲ್ಗೊಂಡಿದ್ದರು.