ಕನಕಗಿರಿ ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹಾಗೂ ಕೊಪ್ಪಳ ಲೋಕಾಯುಕ್ತ ಪೊಲೀಸ್ ಠಾಣೆಯ ವತಿಯಿಂದ ಭ್ರಷ್ಟಾಚಾರ ವಿರೋಧಿ ಜಾಗೃತಿ ಹಾಗೂ ಲೋಕಾಯುಕ್ತದ ಪಾತ್ರ ಮತ್ತು ಕಾರ್ಯವೈಖರಿ ಕುರಿತು ಯುವಜನ ಅರಿವಿನ ಕಾರ್ಯಕ್ರಮ ಈಚೆಗೆ ನಡೆಯಿತು.

ಕನಕಗಿರಿ: ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹಾಗೂ ಕೊಪ್ಪಳ ಲೋಕಾಯುಕ್ತ ಪೊಲೀಸ್ ಠಾಣೆಯ ವತಿಯಿಂದ ಭ್ರಷ್ಟಾಚಾರ ವಿರೋಧಿ ಜಾಗೃತಿ ಹಾಗೂ ಲೋಕಾಯುಕ್ತದ ಪಾತ್ರ ಮತ್ತು ಕಾರ್ಯವೈಖರಿ ಕುರಿತು ಯುವಜನ ಅರಿವಿನ ಕಾರ್ಯಕ್ರಮ ಈಚೆಗೆ ನಡೆಯಿತು.

ಲೋಕಾಯುಕ್ತ ಡಿವೈಎಸ್ಪಿ ಶೈಲಾ ಎಸ್. ಪ್ಯಾಟಿಶೆಟ್ಟರ್ ಮಾತನಾಡಿ, ಯುವ ಸಮೂಹವಾಗಿ ನೀವು ಶಿಕ್ಷಣ, ವೃತ್ತಿ ಜೀವನದ ಜತೆಗೆ ದೇಶದ ವ್ಯವಸ್ಥೆಯ ಬಗ್ಗೆಯೂ ಜಾಗೃತಿವಹಿಸಬೇಕು. ಲಂಚ ಕೊಡುವುದು ಅಪರಾಧ, ಲಂಚ ಪಡೆಯುವುದು ಅಷ್ಟೇ ಅಪರಾಧ ಎಂಬ ನೈತಿಕ ಮೌಲ್ಯವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ನಿಮ್ಮ ಸುತ್ತಮುತ್ತ ಎಲ್ಲಾದರೂ ಭ್ರಷ್ಟಾಚಾರ ನಡೆಯುತ್ತಿದ್ದರೆ, ನಿರ್ಭಿತಿಯಿಂದ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಿ. ಭ್ರಷ್ಟಾಚಾರಕ್ಕೆ ಎಂದಿಗೂ ಲಂಚ ನೀಡಬೇಡಿ, ಮೂಕರಾಗಿ ಸಹಿಸಬೇಡಿ. ಅನ್ಯಾಯ ಕಂಡಾಗ ದ್ವನಿ ಎತ್ತಿ. ಲೋಕಾಯುಕ್ತ ಸಂಸ್ಥೆಯು ಸದಾ ಸಾರ್ವಜನಿಕರ ಸೇವೆಯಲ್ಲಿದ್ದು, ನಿಮ್ಮ ದೂರುಗಳಿಗೆ ಸೂಕ್ತ ನ್ಯಾಯ ಒದಗಿಸಲು ಬದ್ಧವಾಗಿದೆ. ಲೋಕಾಯುಕ್ತ ಪೊಲೀಸ್ ವಿಭಾಗವು ಇಂತಹ ದೂರುಗಳನ್ನು ಆಧರಿಸಿ ತನಿಖೆ ನಡೆಸಿ, ದಾಳಿ ಹಾಗೂ ಟ್ರ‍್ಯಾಪ್ ಮೂಲಕ ಭ್ರಷ್ಟರನ್ನು ಹೆಡೆಮುರಿ ಕಟ್ಟಲಾಗುವುದು ಎಂದು ಹೇಳಿದರು.

ಆನಂತರ ಪೇದೆ ಗವಿಕುಮಾರ ಮಾತನಾಡಿ, ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸುಸ್ಥಿರವಾಗಿರಲು ಮತ್ತು ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ''''ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ೧೯೮೪ರ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ಥಾಪಿತವಾದ ಈ ಸಂಸ್ಥೆಯು ಸಾರ್ವಜನಿಕರ ಕುಂದು-ಕೊರತೆಗಳನ್ನು ಪರಿಹರಿಸಲು ಹಾಗೂ ಸರ್ಕಾರಿ ಆಡಳಿತದಲ್ಲಿನ ಭ್ರಷ್ಟಾಚಾರ ತಡೆಯಲು ಕೆಲಸ ಮಾಡುತ್ತದೆ. ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರ ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಬಜರಂಗಬಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಸರ್ವಮಂಗಳಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾಧ್ಯಾಪಕರಾದ ನಫೀಸಾಬಾನು, ಸಂಗಮೇಶ್, ರಕ್ಷಿತ್ ಎ., ಕೊಪ್ಪಳ ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬ್ಬಂದಿ ರಾಜು ಎಂ., ಕಾಲೇಜಿನ ಪತ್ರಿಕೋದ್ಯಮ ಅಧ್ಯಾಪಕ ವಿಜಯ್ ಸರೋದೆ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಶಂಬುಲಿಂಗಯ್ಯಸ್ವಾಮಿ ಇತರರಿದ್ದರು.