ಸಾರಾಂಶ
ಮೋಟಾರು ವಾಹನ ತೆರಿಗೆ ಸೇರಿದಂತೆ ಇನ್ನಿತರ ತೆರಿಗೆ, ಶುಲ್ಕ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವ ವಾಹನಗಳ ಪತ್ತೆಗೆ ಸಾರಿಗೆ ಇಲಾಖೆಯಿಂದ ಸಿಸಿ ಕ್ಯಾಮೆರಾ ಅಳವಡಿಕೆಗೆ ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೋಟಾರು ವಾಹನ ತೆರಿಗೆ ಸೇರಿದಂತೆ ಇನ್ನಿತರ ತೆರಿಗೆ, ಶುಲ್ಕ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವ ವಾಹನಗಳ ಪತ್ತೆಗೆ ಸಾರಿಗೆ ಇಲಾಖೆಯಿಂದ ಸಿಸಿ ಕ್ಯಾಮೆರಾ ಅಳವಡಿಕೆಗೆ ನಿರ್ಧರಿಸಲಾಗಿದೆ.ಈವರೆಗೆ ತೆರಿಗೆ ಪಾವತಿಸದೇ ವಂಚಿಸುವ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವ ವಾಹನಗಳ ಪತ್ತೆಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ರಸ್ತೆ ಬದಿಯಲ್ಲಿ ನಿಂತು ತಪಾಸಣೆ ನಡೆಸುತ್ತಿದ್ದರು. ಆದರೆ, ಇನ್ನು ಮುಂದೆ ಇಲಾಖೆಗೆ ತೆರಿಗೆ ವಂಚಿಸುವ ವಾಹನಗಳ ಪತ್ತೆಗಾಗಿ ಸಿಸಿ ಕ್ಯಾಮೆರಾ ಮೊರೆ ಹೋಗಲಿದೆ. ಅದರಂತೆ ಪ್ರಾಯೋಗಿಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 20 ಕಡೆಗಳಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.
ಹೀಗೆ ಅಳವಡಿಸುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುವ ವಾಹನಗಳ ನೋಂದಣಿ ಸಂಖ್ಯೆಯನ್ನು ಪಡೆದು ಅವುಗಳು ತೆರಿಗೆ ಪಾವತಿಸಿವೇಯೇ ಅಥವಾ ಕಾಯ್ದೆ ಉಲ್ಲಂಘಿಸುತ್ತಿವೆಯೇ ಎಂದು ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಕಂಡು ಬಂದರೆ ವಾಹನ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ಅಲ್ಲದೆ, ಮುಂದೆ ವಾಹನಗಳ ಎಫ್‌ಸಿ ಮಾಡಲು ಅಥವಾ ಇನ್ಯಾವುದಾದರೂ ಕಾರಣಕ್ಕೆ ಆರ್‌ಟಿಒ ಕಚೇರಿಗೆ ಬಂದರೆ ಅವುಗಳಿಂದ ದಂಡ ಅಥವಾ ನಿಗದಿತ ತೆರಿಗೆ ವಸೂಲಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.