ಸಾರಾಂಶ
- ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಪೊಲೀಸರ ವಶಕ್ಕೆ
- ವಿದ್ಯಾರ್ಥಿ ಮೊಬೈಲ್ ನಲ್ಲಿ ವಿಡಿಯೋ ಕ್ಲಿಪ್ ಗಳಿರುವ ಆತಂಕ- ಕೆಲ ತಿಂಗಳಿಂದ ವಿಡಿಯೋ ರೆಕಾರ್ಡ್ ಮಾಡಿದ ಆರೋಪ
- ವಿದ್ಯಾರ್ಥಿಗಳೊಂದಿಗೆ ಪೋಷಕರು ಪ್ರತಿಭಟನೆಯಲ್ಲಿ ಭಾಗಿಕನ್ನಡಪ್ರಭ ವಾರ್ತೆ ರಾಮನಗರ
ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಪ್ರಕರಣ ಮಾಸುವ ಮುನ್ನವೇ ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೋಡು ಸಮೀಪದ ರಾಜರಾಜೇಶ್ವರಿ ಗ್ರೂಪ್ ಆಫ್ ಇನ್ಸ್ ಟ್ಯೂಷನ್ ಗೆ ಸೇರಿದ ಎಸಿಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಶೌಚಾಲಯದಲ್ಲಿ ಮೊಬೈಲ್ ಇರಿಸಿ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪ ಕೇಳಿಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಎಸಿಎಸ್ ಎಂಜಿನಿಯರಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 7ನೇ ಸೆಮಿಸ್ಟರ್ ವಿದ್ಯಾರ್ಥಿ ಕುಶಾಲ್ ಎಂಬುವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಆತನ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಕುಶಾಲ್ ಹಲವು ತಿಂಗಳಿಂದ ಇಂತಹ ಕೃತ್ಯ ಎಸಗುತ್ತಿದ್ದು, ಆತನ ಮೊಬೈಲ್ ನಲ್ಲಿ ನಾಲ್ಕೈದು ವಿಡಿಯೋ ಕ್ಲಿಪ್ ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ದುಷ್ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ ? :ಕಾಲೇಜು ವಿದ್ಯಾರ್ಥಿನಿಯೊಬ್ಬರು ಶುಕ್ರವಾರ ಬೆಳಗ್ಗೆ ಶೌಚಾಲಯಕ್ಕೆ ತೆರಳಿದ್ದ ವೇಳೆ ಸಿಸಿಟಿವಿ ಕ್ಯಾಮೆರಾ ಮಾದರಿಯ ಕ್ಯಾಮೆರಾದೊಂದಿಗೆ ಯುವಕ ಇರುವುದನ್ನು ನೋಡಿ ಗಾಬರಿಗೊಂಡಿದ್ದಾಳೆ. ತಕ್ಷಣ ಆಕೆ ಶೌಚಾಲಯದ ಬಾಗಿಲಿಗೆ ಚಿಲಕ ಹಾಕಿಕೊಂಡು ಬಂದು ತನ್ನ ಸಹಪಾಠಿಗಳಿಗೆ ಈ ವಿಚಾರ ತಿಳಿಸಿದ್ದಾಳೆ. ಕ್ಷಣಾರ್ಧದಲ್ಲಿ ಈ ವಿಚಾರ ಕಾಲೇಜಿನ ವಿದ್ಯಾರ್ಥಿಗಳಿಗೆಲ್ಲ ಗೊತ್ತಾಗಿ ಶೌಚಾಲಯ ಬಳಿ ಜಮಾಯಿಸಿದ್ದಾರೆ.
ಮಹಿಳಾ ಶೌಚಾಲಯದಲ್ಲಿದ್ದ ವಿದ್ಯಾರ್ಥಿಯನ್ನು ಉಳಿದ ವಿದ್ಯಾರ್ಥಿಗಳು ಪ್ರಾಂಶುಪಾಲರ ಕೊಠಡಿಗೆ ಕರೆದೊಯ್ದು ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ವಿಷಯ ತಿಳಿಸಿದಾಗ ಅವರೆಲ್ಲರು ಕಾಲೇಜು ಬಳಿಗೆ ಧಾವಿಸಿ ಬಂದಿದ್ದಾರೆ. ವಿಡಿಯೋ ಕ್ಲಿಪ್ ಗಳಿರುವ ವಿಚಾರ ತಿಳಿದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕದಲ್ಲಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದರಿಂದ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮತ್ತು ಕುಂಬಳಗೋಡು ಠಾಣೆ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿನಿಯರ ಮನವೊಲಿಸಿದರು.
ಆನಂತರ ಪೊಲೀಸರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದರು. ಈ ಘಟನೆ ಕುರಿತಂತೆ ಕಾಲೇಜು ಆಡಳಿತ ಮಂಡಳಿ ಯಾವುದೇ ಹೇಳಿಕೆ ನೀಡಿಲ್ಲ. ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟಿದ್ದಾನೆಂದು ಹೇಳಲಾದ ವಿದ್ಯಾರ್ಥಿ ಕುಶಾಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದು ಬಂಧಿತ ವಿದ್ಯಾರ್ಥಿಯ ವಿಚಾರಣೆಯಿಂದ ಗೊತ್ತಾಗಬೇಕಿದೆ.ವಿದ್ಯಾರ್ಥಿನಿಯ ದೂರಿನ ಮೇರೆಗೆ ಕುಂಬಳಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.