ವಡ್ಡಿನಹಳ್ಳಿಯ ಕಾಂಪೋಸಿಟ್ ರೀಜನಲ್ ಸೆಂಟರ್ (ಸಿಆರ್‌ಸಿ), ಪ್ರಧಾನ ಮಂತ್ರಿ ದಿವ್ಯಾಂಗನ್ ವಯೋಶ್ರೀ ಕೇಂದ್ರ, ದಾವಣಗೆರೆ ಲಯನ್ಸ್ ಕ್ಲಬ್-317 ಎಚ್, ಅಲಿಮ್ಕೋ ಸಹಯೋಗದಲ್ಲಿ ಹರಿಹರ ತಾಲೂಕಿನ ಮಲೇಬೆನ್ನೂರಿನ ಜಿಗಳಿ ರಸ್ತೆಯ ಲಯನ್ಸ್ ಸಭಾ ಭವನದಲ್ಲಿ ವಿಶೇಷಚೇತನರಿಗೆ ಸಹಾಯಕ ಅಗತ್ಯ ಸಾಧನಗಳ ಮೌಲ್ಯಮಾಪನ ಶಿಬಿರವನ್ನು ಅ.14ರಂದು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್-317 ಎಚ್ ಜಿಲ್ಲಾ ಗವರ್ನರ್ ಆರ್.ಜಿ.ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
- ಅಗತ್ಯ ಸಾಧನಗಳ ಮೌಲ್ಯಮಾಪನ, 1 ತಿಂಗಳಲ್ಲಿ ಸಾಧನ ವಿತರಣೆ: ಆರ್.ಜಿ.ಶ್ರೀನಿವಾಸಮೂರ್ತಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆವಡ್ಡಿನಹಳ್ಳಿಯ ಕಾಂಪೋಸಿಟ್ ರೀಜನಲ್ ಸೆಂಟರ್ (ಸಿಆರ್‌ಸಿ), ಪ್ರಧಾನ ಮಂತ್ರಿ ದಿವ್ಯಾಂಗನ್ ವಯೋಶ್ರೀ ಕೇಂದ್ರ, ದಾವಣಗೆರೆ ಲಯನ್ಸ್ ಕ್ಲಬ್-317 ಎಚ್, ಅಲಿಮ್ಕೋ ಸಹಯೋಗದಲ್ಲಿ ಹರಿಹರ ತಾಲೂಕಿನ ಮಲೇಬೆನ್ನೂರಿನ ಜಿಗಳಿ ರಸ್ತೆಯ ಲಯನ್ಸ್ ಸಭಾ ಭವನದಲ್ಲಿ ವಿಶೇಷಚೇತನರಿಗೆ ಸಹಾಯಕ ಅಗತ್ಯ ಸಾಧನಗಳ ಮೌಲ್ಯಮಾಪನ ಶಿಬಿರವನ್ನು ಅ.14ರಂದು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್-317 ಎಚ್ ಜಿಲ್ಲಾ ಗವರ್ನರ್ ಆರ್.ಜಿ.ಶ್ರೀನಿವಾಸ ಮೂರ್ತಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಆರಂಭಗೊಳ್ಳುವ ಶಿಬಿರದಲ್ಲಿ ಭಾಗವಹಿಸುವ ವಿಶೇಷಚೇತನರು, ದೃಷ್ಟಿಹೀನರಿಗೆ ಯಾವ್ಯಾವ ಅಗತ್ಯ ಸಾಧನ ಸಲಕರಣೆಗಳು ಬೇಕೆಂಬುದನ್ನು ಗುರುತಿಸ, ಮುಂದಿನ ದಿನಗಳಲ್ಲಿ ದಾವಣಗೆರೆ ತಾ. ವಡ್ಡಿನಹಳ್ಳಿ ಗ್ರಾಮದ ಸಿಆರ್‌ಸಿ ಕೇಂದ್ರದಲ್ಲಿ ಅವುಗಳನ್ನು ವಿತರಿಸಲಾಗುವುದು ಎಂದರು.ಲಯನ್ಸ್ ಕ್ಲಬ್‌ನಿಂದ ದಾವಣಗೆರೆ ಜಿಲ್ಲೆ ನಂತರ ಶಿವಮೊಗ್ಗ, ವಿಜಯನಗರ, ಚಿತ್ರದುರ್ಗದಲ್ಲಿ ವಿಶೇಷಚೇತನರಿಗೆ ಸಹಾಯಕ ಅಗತ್ಯ ಸಾಧನಗಳ ಮೌಲ್ಯಮಾಪನ ಶಿಬಿರ ಹಮ್ಮಿಕೊಳ್ಳಲಾಗುವುದು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಲ್ಲಿ ಶಿಬಿರ ಆಯೋಜಿಸಲಾಗಿದೆ. ತಮ್ಮ ಸಂಸ್ಥೆಯಿಂದ ಇದು ಮೊದಲ ಶಿಬಿರವಾಗಿದ್ದು, ಮುಂದಿನ ದಿನಗಳಲ್ಲಿ ದಾವಣಗೆರೆ ತಾಲೂಕು ಮಟ್ಟದಲ್ಲೂ ಶಿಬಿರ ನಡೆಸಲಾಗುವುದು ಎಂದು ಹೇಳಿದರು.
ಸಿಆರ್‌ಸಿ ಕೇಂದ್ರದ ಪ್ರಭಾರ ನಿರ್ದೇಶಕ ಕೆ.ಮಾರುತಿ ಕೃಷ್ಣಗೌಡ ಮಾತನಾಡಿ, ಸಿಆರ್‌ಸಿ ಕೇಂದ್ರದ ಅಧಿಕಾರಿಗಳು, ಇತರರು ಶಿಬಿರಾರ್ಥಿಗಳ ಮೌಲ್ಯಮಾಪನ ಮಾಡುವರು. ಯಾರಿಗೆ, ಯಾವ್ಯಾವ ಸಾಧನಾ ಸಲಕರಣೆ ನೀಡಬೇಕು ಎಂಬುದನ್ನು ಪಟ್ಟಿ ಮಾಡಿಕೊಳ್ಳುವರು. ಮುಂದಿನ ದಿನಗಳಲ್ಲಿ ನಮ್ಮ ವಡ್ಡಿನಹಳ್ಳಿ ಸಿಆರ್‌ಸಿ ಕೇಂದ್ರದಲ್ಲೇ ಅತ್ಯಗತ್ಯ ಸಾಧನಾ ಸಲಕರಣೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.ವಿಶೇಷಚೇತನರಿಗೆ ಅಗತ್ಯ ಸಾಧನಾ ಸಲಕರಣೆ ನೀಡುವುದರಿಂದ ಚಲನಶೀಲತೆ, ಶ್ರವಣ ಸಾಮರ್ಥ್ಯ, ಜ್ಞಾನಾತ್ಮಕ ಸಾಮರ್ಥ್ಯ, ಕಲಿಕಾ ಸಾಮರ್ಥ್ಯ, ಹೆಚ್ಚು ಸ್ವಾವಲಂಬಿ ಮತ್ತು ಉತ್ತಮ ಜೀವನ ನಡೆಸುವುದಕ್ಕೆ ನೆರವಾಗಲಿದೆ. ಸುಮಾರು ಐದಾರು ಕೋಟಿ ರು.ಗಳ ಅನುದಾನದ ಅಗತ್ಯ ಸಾಧನಾ ಸಲಕರಣೆ ವಿತರಿಸಲಾಗುವುದು. ಶಿಬಿರಕ್ಕೆ ಆಗಮಿಸುವವರು ಆಧಾರ ಕಾರ್ಡ್ ಕಡ್ಡಾಯವಾಗಿ ತರಬೇಕು ಎಂದರು.
ಬಿಪಿಎಲ್ ಕಾರ್ಡ್ (ಇದ್ದಲ್ಲಿ), ಯುಡಿಐಡಿ, ವೈದ್ಯರ ಪ್ರಮಾಣಪತ್ರ, ತಮ್ಮ ಭಾವಚಿತ್ರಗಳನ್ನು ತರಬೇಕು. 60 ವರ್ಷ ಮೇಲ್ಪಟ್ಟವರಿಗೆ ಯುಡಿಐಡಿ ಅಗತ್ಯ ಇರುವುದಿಲ್ಲ. ಯಾವುದೇ ವಯೋಮಾನದ ಮಿತಿ ಇಲ್ಲ. ಮೌಲ್ಯಮಾಪನಾ ಶಿಬಿರರದಲ್ಲಿ ಯಾರಿಗೆ ಯಾವ ಸಾಧನಾ ಸಲಕರಣೆಬೇಕೆಂದು ಗುರುತಿಸಲಾಗುವುದು. 15 ದಿನದಿಂದ 1 ತಿಂಗಳೊಳಗೆ ಸಿಆರ್‌ಸಿ ಕೇಂದ್ರದಲ್ಲಿ ಶ್ರವಣಯಂತ್ರ, ವ್ಹೀಲ್ ಚೇರ್, ಕ್ಲಚರ್, ಕಲಿಕಾ ಸಾಮಗ್ರಿ, ಬೆಲ್ಟ್, ಬ್ರೈಲಿ ಕಿಟ್ ಇತರೆ ಸಲಕರಣೆಗಳ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.ಲಯನ್ಸ್ ಕ್ಲಬ್‌ನ ಅಜಯಕುಮಾರ ಮಾತನಾಡಿ, ದಾವಣಗೆರೆ ಶ್ರೀ ಕನ್ನಿಕಾ ಪರಮೇಶ್ವರಿ ಬ್ಯಾಂಕ್‌ನ ಸಭಾಂಗಣದಲ್ಲಿ ಅ.30 ಮತ್ತು 31ರಂದು 2 ದಿನ 30 ಶಿಕ್ಷಕರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಹದಿಹರೆಯದ ಸಮಸ್ಯೆ, ನೈತಿಕ ಶಿಕ್ಷಣ ಇತರೆ ವಿಷಯಗಳ ಬಗ್ಗೆ ಕವಿತಾ ಶಾಸ್ತ್ರಿ ತರಬೇತಿ ನೀಡುವರು. ತರಬೇತಿ ನಂತರದಲ್ಲಿ ಶಿಕ್ಷಕರು ಬೋಧನೆಯಲ್ಲಿ ಹೇಗೆ ತೊಡಗಿಸಿಕೊಳ್ಳುವರು ಎಂಬುದನ್ನು ಗಮನಿಸಲಾಗುವುದು ಎಂದು ತಿಳಿಸಿದರು.
ಸಿಆರ್‌ಸಿ ಕೇಂದ್ರದ ಪುನರ್ವಸತಿ ಅಧಿಕಾರಿ ವಿ.ಕನಕ ಸಭಾಪತಿ, ಲಯನ್ಸ್ ಕ್ಲಬ್‌ನ ಡಾ. ಬಿ.ಎಸ್. ನಾಗಪ್ರಕಾಶ್, ಡಾ. ಆರ್.ತಿಪ್ಪೇಸ್ವಾಮಿ, ಸಿದ್ದೇಶ ಮಲೆಬೆನ್ನೂರು, ಎನ್.ವಾಸುದೇವ ರಾಯ್ಕರ್, ಸುರಭಿ ಎಸ್.ಶಿವಮೂರ್ತಿ, ನಾಗರಾಜ, ಅಜಯ ನಾರಾಯಣ, ವೀರೇಶ, ಗಿರೀಶ, ಸುಬ್ರಹ್ಮಣ್ಯ, ಪ್ರಶಾಂತ ಪಡಗಲ್, ಲಕ್ಷ್ಮೀನಾರಾಯಣ ಇತರರು ಇದ್ದರು.- - -
-12ಕೆಡಿವಿಜಿ1: ದಾವಣಗೆರೆಯಲ್ಲಿ ಸೋಮವಾರ ಲಯನ್ಸ್ ಕ್ಲಬ್-317 ಎಚ್ ಜಿಲ್ಲಾ ಗವರ್ನರ್ ಆರ್.ಜಿ.ಶ್ರೀನಿವಾಸ ಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.