ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಬದಲು ರಾಜಕೀಯ ಉದ್ದೇಶಕ್ಕಾಗಿ ಎಸ್‌ಇಪಿ ಜಾರಿಗೊಳಿಸಲು ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ. ಇದು ಖಂಡನೀಯ. ಇದರ ವಿರುದ್ಧ ರಾಜ್ಯಾದ್ಯಂತ ಪೀಪಲ್ಸ್ ಪೋರಂ ಫಾರ್ ಕರ್ನಾಟಕದಿಂದ ಅಭಿಯಾನ ನಡೆಸಲಾಗುವುದು ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಎನ್‌ಇಪಿ ಎಂದರೆ ನ್ಯಾಶನಲ್ ಎಜ್ಯುಕೇಶನ್ ಪಾಲಿಸಿ. ಮೋದಿ ಸರ್ಕಾರ ಜಾರಿಗೊಳಿಸಿದ್ದಕ್ಕಾಗಿ ಬದಲಿಸಲಾಗುತ್ತಿದೆ ಎಂದು ಇವರು ಹೇಳುತ್ತಾರೆ. ಹಾಗಾದರೆ ಎಸ್‌ಇಪಿ ಎಂದರೆ ಸೋನಿಯಾಗಾಂಧಿ ಎಜ್ಯುಕೇಶನ್ ಪಾಲಿಸಿನಾ ಎಂದು ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಸರ್ಕಾರ ಜಾರಿಗೊಳಿಸಿದೆ ಎಂಬ ಏಕೈಕ ಕಾರಣದಿಂದ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಕೆಲಸ ಈ ಸರ್ಕಾರ ಮಾಡುತ್ತಿದೆ ಎಂದರು.ಎಸ್‌ಇಪಿ ಜಾರಿಗೊಳಿಸಲಿ. ಎನ್‌ಇಪಿಯಲ್ಲಿನ ದೋಷಗಳು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಅದಕ್ಕೆ ಇವರ ಬಳಿ ಉತ್ತರವಿಲ್ಲ. ಬರೀ ಮೋದಿ ಸರ್ಕಾರ ಜಾರಿಗೊಳಿಸುತ್ತಿದೆ ಎಂಬ ಕಾರಣಕ್ಕೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಹಾಗೊಂದು ವೇಳೆ ಎಸ್‌ಇಪಿ ಜಾರಿಗೊಳಿಸಲೇಬೇಕು ಎಂದರೆ ಮೊದಲು ಅವರ ಸಚಿವ ಸಂಪುಟದ ಸಹದ್ಯೋಗಿಗಳು ನಡೆಸುವ ಖಾಸಗಿ ಶಾಲೆಗಳಲ್ಲಿ ಜಾರಿಗೊಳಿಸಲಿ. ಬಡವರು ಓದುವ ಸರ್ಕಾರಿ ಶಾಲೆಗಳಲ್ಲಿ ಬೇಡ. ಬಡವರ ಮಕ್ಕಳನ್ನು ಉನ್ನತ ಶಿಕ್ಷಣ, ಕೌಶಲ್ಯಭರಿತ ಶಿಕ್ಷಣದಿಂದ ವಂಚಿತವನ್ನಾಗಿ ಮಾಡುವ ಷಡ್ಯಂತ್ರ ಈ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.ಈ ಕೂಡಲೇ ರಾಜ್ಯ ಸರ್ಕಾರ ತನ್ನ ನೀತಿಯಿಂದ ಹಿಂದೆ ಸರಿದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಇದಕ್ಕಾಗಿ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.
ಸಿದ್ದು ಕೈಗೊಂಬೆ:ಸಿಎಂ ಸಿದ್ದರಾಮಯ್ಯ ಅವರು ಎಡಪಂಥೀಯ ಬುದ್ದಿಜೀವಿಗಳ ಕೈಗೊಂಬೆಯಾಗಿದ್ದಾರೆ. ಅವರ ಅಣತಿಯಂತೆ ಎಸ್‌ಇಪಿ ಜಾರಿಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆಗೆ ಒಂದು ರೀತಿ ನೀತಿ ಇರುತ್ತದೆ. ಅದರಂತೆ ಮಾಡಲಿ. ಆದರೆ ಇದ್ಯಾವುದನ್ನು ಇಲ್ಲಿ ಪಾಲಿಸಿಲ್ಲ ಎಂದರು. ಪ್ರಣಾಳಿಕೆಯಲ್ಲಿ ಸೇರಿಸಿದ್ದಕ್ಕೆ ಪಠ್ಯಪುಸ್ತಕ ಬದಲಿಸುವ ಪ್ರಕ್ರಿಯೆ ನಡೆಸಲಾಗಿದೆ. ರಾಜ್ಯಾದ್ಯಂತ ಇದರ ವಿರುದ್ಧ ಅಭಿಯಾನದ ಮೂಲಕ ಜನರಲ್ಲಿ, ಪಾಲಕರಲ್ಲಿ, ತಜ್ಞರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ನುಡಿದರು.