ಸಮಾಜದಲ್ಲಿ ಯಾವುದೇ ವ್ಯಕ್ತಿಗಳಿಗೆ ಕುಷ್ಠರೋಗ ಲಕ್ಷಣಗಳಾದ ತಿಳಿ ಬಿಳಿ ತಾಮ್ರ ಬಣ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳ ರೋಗದ ಬಗ್ಗೆ ಸೂಕ್ತ ತಿಳವಳಿಕೆ ನೀಡಿ, ಆರಂಭ ಹಂತದಲ್ಲಿ ರೋಗವನ್ನು ಪತ್ತೆ ಮಾಡಿ ಔಷಧಿಯನ್ನು ಪಡೆಯುವುದರಿಂದ ರೋಗವು ಸಂಪೂರ್ಣವಾಗಿ ಗುಣಮುಖ ಹೊಂದುತ್ತಾರೆ. ಅದನ್ನು ನಿರ್ಲಕ್ಷಿಸಿದರೆ ಅಂಗವಿಕಲತೆಗೆ ಒಳಗಾಗುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳ ಪತ್ತೆ ಹಚ್ಚುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದ ಭಿತ್ತಿಪತ್ರ ಹಾಗೂ ಬ್ಯಾನರ್ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಸಮಾಜದಲ್ಲಿ ಯಾವುದೇ ವ್ಯಕ್ತಿಗಳಿಗೆ ಕುಷ್ಠರೋಗ ಲಕ್ಷಣಗಳಾದ ತಿಳಿ ಬಿಳಿ ತಾಮ್ರ ಬಣ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳ ರೋಗದ ಬಗ್ಗೆ ಸೂಕ್ತ ತಿಳವಳಿಕೆ ನೀಡಿ, ಆರಂಭ ಹಂತದಲ್ಲಿ ರೋಗವನ್ನು ಪತ್ತೆ ಮಾಡಿ ಔಷಧಿಯನ್ನು ಪಡೆಯುವುದರಿಂದ ರೋಗವು ಸಂಪೂರ್ಣವಾಗಿ ಗುಣಮುಖ ಹೊಂದುತ್ತಾರೆ. ಅದನ್ನು ನಿರ್ಲಕ್ಷಿಸಿದರೆ ಅಂಗವಿಕಲತೆಗೆ ಒಳಗಾಗುತ್ತಾರೆ. ಈ ಅಭಿಯಾನವನ್ನು ಸದುಪಯೋಗ ಪಡಿಸಿಕೊಂಡು ಈ ದಿಸೆಯಲ್ಲಿ ಕೆಲಸ ಮಾಡಿದರೆ ಗಾಂಧೀಜಿಯವರ ಕನಸಾದ ಕುಷ್ಠರೋಗ ಮುಕ್ತ ಭಾರತವನ್ನು ನಿರ್ಮಿಸಬಹುದಾಗಿದೆ. ಇದಕ್ಕಾಗಿ ನಾವು ಒಟ್ಟುಗೂಡಿ ಶ್ರಮಿಸಬೇಕು ಎಂದರು.

ಈ ಬ್ಯಾಕ್ಟಿರಿಯಗಳು ಸೀನಿದಾಗ ಕೆಮ್ಮಿದಾಗ ಹೊರಬರುವ ತುಂತುರ ಹನಿಗಳ ಮೂಲಕ ರೋಗಾಣುಗಳು ಗಾಳಿಯಲ್ಲಿ ಸೇರಿಕೊಂಡು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಕಾಯಿಲೆಗೆ ಹೆದರಬೇಕಾಗಿರುವುದಿಲ್ಲ, ಅದನ್ನು ಗುಪ್ತವಾಗಿಡದೇ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಮನಕ್ಕೆ ತಂದು, ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಬಹು ಔಷಧಿಯಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಅಭಿಯಾನವನ್ನು ಡಿ.9 ರವರೆಗೆ ಎಲ್ಲಾ ಗ್ರಾಮ ಪಂಚಾಯಿತಿ, ಪುರಸಭೆಗಳು, ನಗರಸಭೆಗಳು ಮತ್ತು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಿಬ್ಬಂದಿ ಸಮೀಕ್ಷೆಗೆ ಬರುವ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಹಕಾರ ನೀಡಬೇಕು. ಕುಷ್ಠರೋಗಕ್ಕೆ ಸಂಬಂದಿಸಿದಂತೆ ಸಮಾಜದಲ್ಲಿನ ಕಳಂಕವನ್ನು ಹಾಗೂ ಮಾಹಿತಿಯನ್ನು ಜನಸಾಮಾನ್ಯರಿಗೆ ಜನಪ್ರತಿನಿಧಿಗಳ ಮುಖಾಂತರ ತಿಳಿಸಬೇಕು. ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಮತ್ತು ಗ್ರಾಮ ಮಟ್ಟದಲ್ಲಿ ಐಇಸಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅವರು ಸೂಚಿಸಿದರು.

ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸೀಫ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಜಿ. ಬೃಂದಾ, ಸಹಾಯಕ ಸಾಂಖ್ಯಿಕ ಅಧಿಕಾರಿ ಅನಿಲ್ ಕ್ರಿಸ್ಟಿ, ಫಿಜಿಯೋಥೆರಪಿಸ್ಟ್ ಡಾ.ಆರ್.ಟಿ. ಶ್ರುತಿ, ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಎಸ್. ಸುಮಂತ್, ಪ್ಯಾರ ಮೆಡಿಕಲ್ ವರ್ಕರ್ ಜೆ. ಮಹೇಶ್ ಕುಮಾರ್ ಮೊದಲಾದವರು ಇದ್ದರು.