ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಅಸಂಘಟಿತ ವಲಯದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡುವುದಾಗಿ ಕರೆಸಿ ಬಳಿಕ ಕಿಟ್ ಬೇಕಿದ್ದಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಒತ್ತಡ ಹೇರಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ವಲಯದ ನೋಂದಾಯಿತ ಕಾರ್ಮಿಕರಿಗೆ ಕಿಟ್ ವಿತರಿಸುವುದಾಗಿ ಪ್ರಚಾರ ಮಾಡಿಸಲಾಗಿದೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ನೂರಕ್ಕೂ ಹೆಚ್ಚು ಮಂದಿಯನ್ನು ಆರೋಗ್ಯ ತಪಾಸಣೆಗೊಳಪಟ್ಟಲ್ಲಿ ಮಾತ್ರ ಕಿಟ್ ವಿಧಿಸುವುದಾಗಿ ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಈ ಸಂದರ್ಭ ತಿರುಗಿ ಬಿದ್ದ ಕೆಲ ಕಾರ್ಮಿಕರು ಆರೋಗ್ಯ ತಪಾಸಣೆ ನಡೆಸಲು ಯಾವೊಬ್ಬರೂ ವೈದ್ಯರೂ ಸ್ಥಳದಲ್ಲಿಲ್ಲ ಇನ್ನು 20ಕ್ಕೂ ಹೆಚ್ಚು ವಿಧದ ತಪಾಸಣೆ ಮಾಡುವುದಾಗಿ ತಿಳಿಸಿದ್ದರೂ ಸಹಾ ಅಗತ್ಯ ವೈದ್ಯಕೀಯ ಸಲಕರಣೆಗಳಿಲ್ಲ, ಹೀಗಾಗಿ ಆರೋಗ್ಯ ತಪಾಸಣೆ ಹೆಸರಿನಲ್ಲಿ ಬಿಲ್ ಮಾಡಲು ನಡೆಸಿರುವ ಷಡ್ಯಂತ್ರ ಎಂದು ಕಾರ್ಮಿಕರು ದೂರಿದ್ದಾರೆ.ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಸ್ಥಳಕ್ಕಾಗಮಿಸಿ ಇದೇ ಮಾದರಿಯಲ್ಲಿ ಕಳೆದ ವರ್ಷ ಆರೋಗ್ಯ ತಪಾಸಣೆ ನಡೆಸಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು ಅದರ ವರದಿಯನ್ನು ಸಂಬಂಧಿಸಿದವರಿಗೆ ನೀಡಲಿಲ್ಲ. ಈ ಬಾರಿ ಮತ್ತೆ ತಪಾಸಣೆ ನಡೆಸಲು ಆಗಮಿಸಿದ್ದಾರೆ, ಆದರೆ ಬಂದಿರುವವರ ಜೊತೆ ವೈದ್ಯರೇ ಇಲ್ಲ, ಓರ್ವ ಕಾರ್ಮಿಕನ ಆರೋಗ್ಯ ತಪಾಸಣೆಗೆ ಸರ್ಕಾರ ಮೂರೂವರೆ ಸಾವಿರ ಹಣವನ್ನು ನೀಡುತ್ತಿದೆ, ಹೀಗಾಗಿ ಕಿಟ್ ವಿತರಣೆ ನೆಪ ಹೇಳಿ ಆರೋಗ್ಯ ಶಿಬಿರಕ್ಕೆ ಮುಂದಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಗಲಿಬಿಲಿಗೊಳಗಾದ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಿಟ್ ಸಮೇತ ಸ್ಥಳದಿಂದ ತೆರಳಿದ್ದಾರೆ.
----------ತಾಲೂಕಿನ ಯಡಿಯಾಲ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಗುರುವಾರ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಿದ್ದೇವೆ, ಶುಕ್ರವಾರ ಕಸವಿನಹಳ್ಳಿ ಗ್ರಾಮದಲ್ಲೂ ಕೂಡ ಆಯೋಜನೆ ಮಾಡಲಾಗಿತ್ತು. ಯಡಿಯಾಲ ಗ್ರಾಮದಲ್ಲಿ ನಡೆದ ಆರೋಗ್ಯ ತಪಾಸಣೆಯ ವೇಳೆ ಕಾರ್ಮಿಕ ಇಲಾಖೆಯ ನಿಬಂಧನೆಗಳ ಸೂಚನೆಯಂತೆ ಆರೋಗ್ಯ ತಪಾಸಣೆ ನಡೆಸಿದ್ದೇವೆ, ಜೊತೆಗೆ ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಣೆಯನ್ನು ಮಾಡಿದ್ದೇವೆ, ಸ್ಥಳಕ್ಕೆ ಆಗಮಿಸಿದ ರೈತ ಸಂಘಟನೆಯ ಮುಖಂಡರೊಬ್ಬರು ನೀವು ಆರೋಗ್ಯ ತಪಾಸಣೆಗೆ ಬಂದ ಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿಲ್ಲ, ಅಗತ್ಯ ಸಿಬ್ಬಂದಿಗಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು, ನಮ್ಮ ಇಲಾಖೆಯಿಂದ 14 ವಿಧದ ಆರೋಗ್ಯ ತಪಾಸಣೆ ನಡೆಸಿದ್ದೇವೆ, ತಂಡದಲ್ಲಿ 15ಕ್ಕೂ ಹೆಚ್ಚು ಮಂದಿ ನುರಿತ ತಜ್ಞರು ಇರುತ್ತಾರೆ, ಇನ್ನು ಊಟ, ತಿಂಡಿ ವ್ಯವಸ್ಥೆಗೆ ನಮ್ಮ ಇಲಾಖೆಯಿಂದ ಯಾವುದೇ ಅನುದಾನವಿಲ್ಲ, ಆದ್ದರಿಂದ ಈ ಮೊದಲೇ ಅವರಿಗೆ ಊಟ, ತಿಂಡಿ ಮಾಡಿ ಬರುವಂತೆ ತಿಳಿಸಲಾಗಿತ್ತು, ಅವರು ಮಾಡಿರುವ ಆರೋಪ ನಿರಾಧಾರ ಎಂದರು.
- ಅಂಬಿಕಾ, ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕಿ.