ತುಂಗಭದ್ರಾ ಪಾವಿತ್ರ್ಯತೆ ಕಾಪಾಡಲು ಅಭಿಯಾನ

| Published : Nov 05 2024, 12:46 AM IST

ಸಾರಾಂಶ

ತುಂಗಭದ್ರಾ ಮತ್ತು ಇತರೆ ನದಿಗಳ ಪಾವಿತ್ರ್ಯತೆಯನ್ನು ಕಾಪಾಡುವ ಹಿನ್ನಲೆಯಲ್ಲಿ ನ. 6 ರಿಂದ 14ರವರೆಗೆ ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ಪಾದಯಾತ್ರೆಯನ್ನು ನಿರ್ಮಲ ತುಂಗಭದ್ರಾ ಅಭಿಯಾನದ ಮೂಲಕ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಭಿಯಾನದ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತುಂಗಭದ್ರಾ ಮತ್ತು ಇತರೆ ನದಿಗಳ ಪಾವಿತ್ರ್ಯತೆಯನ್ನು ಕಾಪಾಡುವ ಹಿನ್ನಲೆಯಲ್ಲಿ ನ. 6 ರಿಂದ 14ರವರೆಗೆ ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ಪಾದಯಾತ್ರೆಯನ್ನು ನಿರ್ಮಲ ತುಂಗಭದ್ರಾ ಅಭಿಯಾನದ ಮೂಲಕ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಭಿಯಾನದ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನದಿಗಳು ಇಂದು ಕಲುಷಿತಗೊಳ್ಳುತ್ತಿವೆ. ಇವುಗಳನ್ನು ಸಂರಕ್ಷಿಸುವ ಹೊಣೆ ಸರ್ಕಾರದ್ದು ಮತ್ತು ಸಾರ್ವಜನಿಕರದ್ದು ಆಗಿದೆ. ಈ ಹಿನ್ನಲೆಯಲ್ಲಿ ನಿರ್ಮಲಾ ತುಂಗಭದ್ರಾ ಅಭಿಯಾನವು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್ ಸಹಯೋಗದೊಂದಿಗೆ ಸುಮಾರು 400 ಕಿ.ಮೀ. ಉದ್ದದ ಬೃಹತ್ ಜಲಜಾಗೃತಿ, ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದರು.ಈ ಪಾದಯಾತ್ರೆಯಲ್ಲಿ ತುಂಗ ಭದ್ರಾ ನದಿಪಾತ್ರದ ಪರಿಸರಾಸಕ್ತರು, ಸಾಧು ಸಂತರು, ವಿದ್ಯಾರ್ಥಿಗಳು, ರೈತರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಳ್ಳಲಿದ್ದಾರೆ. ಇದೊಂದು ಪಕ್ಷಾತೀತ ಹೋರಾಟವಾಗಿದ್ದು, ನದಿಯ ಶುದ್ಧತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ಹಿನ್ನಲೆಯಲ್ಲಿ ಈ ಅಭಿಯಾನ ಕೈಗೊಳ್ಳಲಾಗಿದೆ. ಇದಕ್ಕಾಗಿ ಎಲ್ಲಾ ಪರಿಸರಾಸಕ್ತರು, ಸಾರ್ವಜನಿಕರು ಪಾಲ್ಗೊಳ್ಳಲು ಮನವಿ ಮಾಡಿದರು.ನ. 5ರಂದು ಬೆಳಗ್ಗೆ 10ಕ್ಕೆ ಮೊದಲ ತಂಡ ಶಿವಮೊಗ್ಗದಿಂದ ಹೊರಟು ಶೃಂಗೇರಿಯ ಗಂಗಡಿಕಲ್ ಗಂಗಾ ಮೂಲ (ತುಂಗಾ-ಭದ್ರ ನದಿ ಹುಟ್ಟುವ ಸ್ಥಳ) ಇಲ್ಲಿ ಪೂಜೆ ಸಲ್ಲಿಸಿ ಶೃಂಗೇರಿಗೆ ತೆರಳಲಾಗುವುದು. ಸಂಜೆ ಶೃಂಗೇರಿಯಲ್ಲಿ ಪಾದಯಾತ್ರೆ ಕುರಿತು ಸಭೆ ನಡೆಸಲಿದ್ದೇವೆ. ಅದೇ ದಿನ ಮಧ್ಯಾಹ್ನ 2ಗಂಟೆಗೆ ಮತ್ತೊಂದು ತಂಡ ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಳದಿಂದ ಪಾದಯಾತ್ರೆಗೆ ತೆರಳುವವರು ಬಸ್ ಮೂಲಕ ಶೃಂಗೇರಿ ತಲುಪಲಿದ್ದಾರೆ ಎಂದರು.ಪಾದಯಾತ್ರೆಯು ನ. 6ರಂದು ಬೆಳಗ್ಗೆ 10 ಕ್ಕೆ ಶೃಂಗೇರಿಯಿಂದ ಆರಂಭ ಗೊಳ್ಳುವುದು, ಈ ಪಾದಯಾತ್ರೆಗೆ ಶೃಂಗೇರಿ ಹಿರಿಯ ಶ್ರೀಗಳಾದ ಪೂಜ್ಯಶ್ರೀ ಭಾರತೀ ತೀರ್ಥ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕತ ಉಮಾ ಶಂಕರ್ ಪಾಂಡೆ ಉದ್ಘಾಟಿಸಲಿದ್ದಾರೆ. ಶೃಂಗೇರಿ ಶಾಸಕ ರಾಜೇಗೌಡ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಕಾಡಾ ಅಧ್ಯಕ್ಷ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಅಭಿಯಾನದ ಸದಸ್ಯ ಗಿರೀಶ್ ಪಟೇಲ್ ಮಾತನಾಡಿ, ಈ ಪಾದಯಾತ್ರೆಯು ಶಿವಮೊಗ್ಗಕ್ಕೆ ನ. 9ರಂದು ಸಂಜೆ ಬರಲಿದ್ದು, ಇಲ್ಲೆ ವಾಸ್ತವ್ಯ ಹೂಡಲಿದೆ. ನ. 10 ಮತ್ತು 11 ರಂದು ಶಿವಮೊಗ್ಗ ನಗರದಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ. ನ.10ರಂದು ಬೆಳಗ್ಗೆ 8.30 ರಿಂದ 10 ರವರೆಗೆ ಹಾಗೂ 10.30 ರಿಂದ 12 ರವರೆಗೆ 2 ಸಭೆಗಳು ನಡೆಯಲಿವೆ. ನ. 11 ರಂದು ಬೆಳಗ್ಗೆ 9ಕ್ಕೆ ಶಾಲಾ ಕಾಲೇಜುಗಳಲ್ಲಿ ಸಭೆಗಳನ್ನು ನಡೆಸಲಾಗುವುದು. ಸುಮಾರು 6 ಕಿ.ಮೀ. ಪಾದಯಾತ್ರೆಯ ನಂತರ ಮಧ್ಯಾಹ್ನ 3.30ಕ್ಕೆ ಗೋಂದಿಚಟ್ನಹಳ್ಳಿಯಿಂದ ಹೊಳಲೂರು ಕಡೆಗೆ ಪಾದಯಾತ್ರೆ ಸಾಗುವುದು ಎಂದರು.ಶಿವಮೊಗ್ಗ ಕಾರ್ಯಕ್ರಮದ ಜವಾಬ್ದಾರಿಯನ್ನು ಪರ್ಯಾವರಣ ಟ್ರಸ್ಟ್ ಹೊರಲಿದ್ದು, ಶಾಸಕ ಚನ್ನಬಸಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಮಾಜಿ-ಹಾಲಿ ಶಾಸಕರು ಜನಪ್ರತಿನಿಧಿಗಳು, ವಿವಿಧ ಪರಿಸರಾಸಕ್ತ ಸಂಘಟನೆ ಗಳು ಇದರಲ್ಲಿ ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದರು.ಈ ಪಾದಯಾತ್ರೆಯು ನ. 14 ರಂದು ಹರಿಹರ ತಲುಪುತ್ತದೆ. ಅಲ್ಲಿಯೂ ಕೂಡ ಸ್ವಾಮೀಜಿಗಳ ಮತ್ತು ಜನಪ್ರತಿನಿಧಿಗಳ ಜತೆ ಸೇರಿ ಸಭೆ ನಡೆಸುತ್ತದೆ. ಇದು ಸಮಾರೋಪ ಸಭೆಯಾಗಿರುತ್ತದೆ ಮತ್ತು ಮುಂದಿನ ಹಂತದ ಪಾದಯಾತ್ರೆಯನ್ನು ಅಲ್ಲಿಯೇ ನಿಶ್ಚಯ ಮಾಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಪಶ್ಚಿಮ ಘಟ್ಟದ ಸುಂದರ ಪರಿಸರವನ್ನು ಉಳಿಸುವ ಮತ್ತು ಅಧ್ಯಯನ ಮಾಡುವ ದೃಷ್ಟಿಯಿಂದ ಪಶ್ಚಿಮ ಘಟ್ಟ ಅಧ್ಯಯನ ಕೇಂದ್ರ ಸ್ಥಾಪನೆಗೂ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಜೊತೆಗೆ ಮರಳುಗಣಿಗಾರಿಕೆ ತಡೆಯಲು ತ್ಯಾಜ್ಯ ನೀರು ಶುದ್ಧೀಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಜ್ಞರ ಸಮಿತಿ ರಚನೆ ಮಾಡುವಂತೆ ಸರ್ಕಾರಕ್ಕೆ ವರದಿಯ ಮೂಲಕ ಒತ್ತಾಯಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ. ಶಂಕರ್, ಡಾ. ಶ್ರೀಪತಿ, ಎಸ್.ಬಿ. ಅಶೋಕ್ ಕುಮಾರ್, ಡಾ. ಕಿರಣ್‌ಕುಮಾರ್ ಇನ್ನಿತರರಿದ್ದರು.