ಜಿಎಸ್‌ಟಿ ಇಳಿಕೆ ಹಿನ್ನೆಲೆ: ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಅಭಿಯಾನ, ನಾಗರಿಕ ಸಂವಾದ: ಸಂಸದ ಚೌಟ

| Published : Sep 27 2025, 12:03 AM IST

ಜಿಎಸ್‌ಟಿ ಇಳಿಕೆ ಹಿನ್ನೆಲೆ: ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಅಭಿಯಾನ, ನಾಗರಿಕ ಸಂವಾದ: ಸಂಸದ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಟೋಬರ್‌ 20ರ ವರೆಗೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಯಾನ ನಡೆಸಲಾಗುವುದು. ಜಿಎಸ್‌ಟಿ ಇಳಿಕೆಯ ಲಾಭ ಜನರಿಗೆ ದೊರೆಯಬೇಕು ಎಂಬ ಉದ್ದೇಶದೊಂದಿಗೆ ನಾಗರಿಕರ ಜತೆ ಸಂವಾದ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ, ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ತಿಳಿಸಿದರು.

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿರುವುದು ದೇಶದ ಆರ್ಥಿಕತೆಯನ್ನು ರೂಪಿಸುವ ಮಹತ್ತರ ಹೆಜ್ಜೆಯಾಗಿದೆ. ಜಿಎಸ್‌ಟಿ ಇಳಿಕೆ ಹಿನ್ನೆಲೆಯಲ್ಲಿ ಅಕ್ಟೋಬರ್‌ 20ರ ವರೆಗೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಯಾನ ನಡೆಸಲಾಗುವುದು. ಜಿಎಸ್‌ಟಿ ಇಳಿಕೆಯ ಲಾಭ ಜನರಿಗೆ ದೊರೆಯಬೇಕು ಎಂಬ ಉದ್ದೇಶದೊಂದಿಗೆ ನಾಗರಿಕರ ಜತೆ ಸಂವಾದ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ, ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ತಿಳಿಸಿದರು.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2047ಕ್ಕೆ ವಿಕಸಿತ ಭಾರತ ನಿರ್ಮಾಣ ಪ್ರಧಾನಿ ಅವರ ಗುರಿಯಾಗಿದೆ. ಅದಕ್ಕಾಗಿ ಆತ್ಮನಿರ್ಭರತೆಯ ದಾರಿಯಲ್ಲಿ ಸಾಗಲಾಗುತ್ತಿದೆ. ಅದರ ಭಾಗವಾಗಿ ಜಿಎಸ್‌ಟಿ 2.0 ಜಾರಿಗೆ ತರಲಾಗಿದೆ. ಈ ಬಗ್ಗೆ ಬಿಜೆಪಿ ಆರ್ಥಿಕ ಪ್ರಕೋಷ್ಠದ ಜತೆಗೂಡಿ ಅಂಗಡಿ, ಮಾರುಕಟ್ಟೆಗಳಿಗೆ ತೆರಳಿ ಜನರ ಜತೆ ಸಂವಾದ, ಜಾಗೃತಿ ನಡೆಸಲಾಗುವುದು ಎಂದರು.ಜಿಎಸ್‌ಟಿ ಸುಧಾರಣೆ ನವರಾತ್ರಿ ಹಾಗೂ ಮುಂಬರುವ ಹಬ್ಬಗಳನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡಲು ಪ್ರೇರಣೆ ನೀಡಿದೆ. ವ್ಯಾಪಾರಿಗಳು, ಉದ್ದಿಮೆದಾರರು, ಗ್ರಾಹಕರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಉಳಿತಾಯ ಉತ್ಸವ ಆಯೋಜಿಸಲಾಗುತ್ತಿದೆ. ಜಿಎಸ್‌ಟಿ ಇಳಿಕೆಯ ಪರಿಣಾಮವನ್ನು ಈಗಾಗಲೇ ಮಾರುಕಟ್ಟೆಯಲ್ಲಿ ನಾವು ಕಾಣುತ್ತಿದ್ದೇವೆ. ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಬೇಡಿಕೆ ಹೆಚ್ಚುವ ಜತೆಗೆ ಉತ್ಪಾದನೆಯೂ ಅಧಿಕವಾಗಲಿದೆ. ಜನರ ಹಣ ಉಳಿತಾಯ ಆಗುವುದರೊಂದಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ. ಆಹಾರ, ಬಟ್ಟೆ, ವಸತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ವಾಹನಗಳ ಬೆಲೆ ಈಗಾಗಲೇ ಇಳಿಕೆಯಾಗಿದೆ. ವಾಹನಗಳ ಮಾರಾಟವೂ ಹೆಚ್ಚಾಗಿದೆ. ಹನಿ ನೀರಾವರಿ, ಕೃಷಿ ಯಂತ್ರೋಪಕರಣಗಳ ಬೆಲೆ ಇಳಿಕೆಯಿಂದ ರೈತರಿಗೆ ಅನುಕೂಲವಾಗಲಿದೆ. ಈ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಉತ್ತೇಜನ ದೊರೆಯಲಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಆರ್ಥಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ಜಿಎಸ್‌ಟಿ ಇಳಿಕೆಯ ಲಾಭವನ್ನು ಈಗಾಗಲೇ ಆರ್ಥಿಕ ವಲಯದಲ್ಲಿ ಕಾಣುತ್ತಿದ್ದೇವೆ. ಅನೇಕ ವಸ್ತುಗಳ ಬೆಲೆ ಇಳಿಕೆಯಾಗಿದೆ. ಇದರ ನೇರ ಲಾಭ ಜನತೆಗೆ ಆಗಲಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ, ಪ್ರಕೋಷ್ಠಗಳ ಜಿಲ್ಲಾ ಸಹ ಸಂಚಾಲಕ ಪ್ರಸನ್ನ ದರ್ಬೆ, ಕೋಶಾಧಿಕಾರಿ ಸಂಜಯ ಪ್ರಭು, ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಇದ್ದರು.ಧರ್ಮದ ಕಾಲಂನಲ್ಲಿ ‘ಹಿಂದು’ ಎಂದು ನಮೂದಿಸಿ

ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಎಲ್ಲ ಹಿಂದು ಧರ್ಮೀಯರು ‘ಹಿಂದು’ ಎಂದು ನಮೂದಿಸುವಂತೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ವಿನಂತಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಪದೇ ಪದೇ ಹಿಂದು ವಿರೋಧಿ ಧೋರಣೆ ಪ್ರದರ್ಶಿಸುತ್ತಿದೆ. 450 ಕೋಟಿ ರು. ಖರ್ಚು ಮಾಡಿ ನಡೆಸುತ್ತಿರುವ ಸಮೀಕ್ಷೆಯಲ್ಲಿ ಹೊಸ ಜಾತಿಗಳನ್ನು ಸೃಷ್ಟಿಸಲಾಗಿದೆ. ಸಮಾಜ ಒಡೆಯುವ ಈ ಪ್ರಯತ್ನ ಖಂಡನೀಯ ಎಂದು ಬ್ರಿಜೇಶ್‌ ಚೌಟ ಹೇಳಿದರು.