ಸಾರಾಂಶ
ಎಲ್.ಎನ್. ಕೂಡೂರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ದೇಗುಲದ ಬ್ರಹ್ಮಕಲಶ ಸಂಭ್ರಮದ ರೂವಾರಿಯಾಗಿ ಜನಮೆಚ್ಚುಗೆ ಗಳಿಸಿದ್ದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ವಿಟ್ಲ ಕಸಬಾ ಗ್ರಾಮದ ಕೂಡೂರು ನಿವಾಸಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು (66) ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.ಹಿರಿಯ ಸಾಮಾಜಿಕ, ಧಾರ್ಮಿಕ ಮುಂದಾಳು ಕೂಡೂರು ಕೃಷ್ಣ ಭಟ್ ಮತ್ತು ಕಮಲಮ್ಮ ದಂಪತಿಯ ಪುತ್ರ ಲಕ್ಷ್ಮೀನಾರಾಯಣ ಕೂಡೂರು ಅವರು ಎಲ್.ಎನ್. ಕೂಡೂರು ಎಂದೇ ಜನಪ್ರಿಯರಾಗಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿದ್ದರು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ದೇಗುಲದ ಬ್ರಹ್ಮಕಲಶ ಸಂಭ್ರಮದ ರೂವಾರಿಯಾಗಿ ಜನಮೆಚ್ಚುಗೆ ಗಳಿಸಿದ್ದರು. ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕ್ಯಾಂಪ್ಕೊ ಅಧ್ಯಕ್ಷರಾಗಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿದ್ದರು.
ಜೇಸಿ ಕ್ಲಬ್ ರಾಷ್ಟ್ರೀಯ ಉಪಾಧ್ಯಕ್ಷ, ವಿಟ್ಲ ಬಸವನಗುಡಿ ವಿಠಲ್ ಜೇಸೀಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷ, ವಿಠಲ ವಿದ್ಯಾ ಸಂಘದ ಸಂಚಾಲಕರಾಗಿದ್ದರು.