ಶಿಬಿರಾರ್ಥಿಗಳು ವ್ಯಸನಮುಕ್ತರಾಗಿ ನವಜೀವನ ರೂಪಿಸಿಕೊಳ್ಳಿ: ರಾಜೇಗೌಡ

| Published : Jun 17 2024, 01:37 AM IST

ಸಾರಾಂಶ

ಕೊಪ್ಪ, ತಾಲೂಕಿನ ಕುಂಚೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇತರೆ ಸಂಘಸಂಸ್ಥೆಗಳಿಂದ ಕಳೆದೊಂದು ವಾರದಿಂದ ನಡೆಯುತ್ತಿದ್ದ ೧೭೯೯ನೇ ಮದ್ಯವರ್ಜನ ಶಿಬಿರ ಭಾನುವಾರ ಸಂಪನ್ನಗೊಂಡಿತು.

ಒಂದು ವಾರ ನಡೆದ ೧೭೯೯ನೇ ಮದ್ಯವರ್ಜನ ಶಿಬಿರ ಸಂಪನ್ನ

ಕನ್ನಡಪ್ರಭ ವಾರ್ತೆ, ಕೊಪ್ಪ

ತಾಲೂಕಿನ ಕುಂಚೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇತರೆ ಸಂಘಸಂಸ್ಥೆಗಳಿಂದ ಕಳೆದೊಂದು ವಾರದಿಂದ ನಡೆಯುತ್ತಿದ್ದ ೧೭೯೯ನೇ ಮದ್ಯವರ್ಜನ ಶಿಬಿರ ಭಾನುವಾರ ಸಂಪನ್ನಗೊಂಡಿತು. ಸಮಾರಂಭದಲ್ಲಿ ಮುಖ್ಯತಿಥಿಗಳಾಗಿ ಭಾಗವಹಿಸಿದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿದೆ. ೧೭೯೯ನೇ ಮದ್ಯವರ್ಜನ ಶಿಬಿರದ ಮೂಲಕ ರಾಜ್ಯಾದ್ಯಂತ ಲಕ್ಷಾಂತರ ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸಿ ಅವರಿಗೆ ನವಜೀವನ ಕಲ್ಪಿಸಿ ಕೊಟ್ಟಿರುವುದು ದೊಡ್ಡ ಸಾಧನೆ ಎಂದರು. ಶಿಬಿರಾರ್ಥಿಗಳಾಗಿ ಬಂದು ಇಲ್ಲಿಯ ಶಿಸ್ತು ಜೀವನ ಮೈಗೂಡಿಸಿಕೊಂಡಿರುವ ಶಿಬಿರಾರ್ಥಿಗಳು ಮತ್ತೆ ದುಶ್ಚಟಕ್ಕೆ ದಾಸರಾಗದೆ ವ್ಯಸನಮುಕ್ತರಾಗಿ ಉತ್ತಮ ಜೀವನ ರೂಪಿಸಿಕೊಂಡಲ್ಲಿ ಶಿಬಿರ ಅರ್ಥಪೂರ್ಣವಾಗಲಿದೆ ಎಂದರು. ಅಮ್ಮ ಫೌಂಡೇಶನ್ ಸಂಸ್ಥಾಪಕ ತುಮ್ಕಾನೆ ಸುಧಾಕರ್ ಶೆಟ್ಟಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಪರಿಕಲ್ಪನೆ ಸಮಾಜ ಸುಧಾರಣಾ ಅನೇಕ ಯೋಜನೆಗಳನ್ನು ತಮ್ಮ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಾಕಾರ ಗೊಳಿಸುತ್ತಿದ್ದಾರೆ. ಪ್ರಗತಿನಿಧಿ, ವಾತ್ಸಲ್ಯ ಯೋಜನೆ, ಪಿಂಚಣಿ ಯೋಜನೆ, ಕೃಷಿ ಯೋಜನೆ, ಶೌರ್ಯ ವಿಪತ್ತು ಘಟಕ, ಮದ್ಯವರ್ಜನ ಶಿಬಿರ ಮುಂತಾದ ಯೋಜನೆಗಳಿಂದ ಶ್ರೀಕ್ಷೇತ್ರ ಪರ್ಯಾಯ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ವ್ಯಸನಮುಕ್ತರಾಗಿ ನವಜೀವನ ಸಮಿತಿಗೆ ಸೇರ್ಪಡೆಗೊಂಡ ಶಿಬಿರಾರ್ಥಿಗಳಾದ ನಿಮ್ಮಿಂದ ಸಮಾಜದಲ್ಲಿ ಮತ್ತಷ್ಟು ಜಾಗೃತಿ ಮೂಡಲಿ ಎಂದರು. ಜನಜಾಗೃತಿ ವೇದಿಕೆ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್‌ರವರು ಕುಟುಂಬ ದಿನ ಕಾರ್ಯಕ್ರಮ ನೆರವೇರಿಸಿ ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಎಂ.ಆರ್. ನಿರಂಜನ್, ಶಿಬಿರದ ಯೋಜನಾಧಿಕಾರಿ ನಾಗರಾಜ್ ಕುಲಾಲ್, ಶಿಬಿರಾಧಿಕಾರಿ ಕುಮಾರ್ ಟಿ., ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಕುಂಚೂರು ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಕೋಡ್ರು ಮುಂತಾದವರು ಮಾತನಾಡಿದರು. ಜನಜಾಗೃತಿ ವೇದಿಕೆ ಸದಸ್ಯರಾದ ಅರವಿಂದ ಸೋಮಯಾಜಿ, ಜಿ.ದೇವಪ್ಪ ಸಿಗದಾಳ್, ಭಾಗ್ಯ ನಂಜುಂಡ ಸ್ವಾಮಿ, ಮೇಲ್ವಿಚಾರಕ ಪ್ರದೀಪ್, ಆರೋಗ್ಯ ಸಹಾಯಕಿ ಸೌಮ್ಯ, ಸೇವಾ ಪ್ರತಿನಿಧಿ ಸುಧಾ, ಯೋಜನಾ ಕಚೇರಿ ಸಿಬ್ಬಂದಿ, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.