ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಪಠ್ಯಧ್ಯಯನಕ್ಕೆ ಮಾತ್ರ ಸೀಮಿತಗೊಳಿಸದೇ ವೈವಿಧ್ಯಮಯ ಕಲಿಕಾ ಶಿಬಿರಗಳ ಮೂಲಕ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರಬೇಕು ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕರೆ ನೀಡಿದ್ದಾರೆ.ನಗರದ ಕೊಡಗು ವಿದ್ಯಾಲಯದಲ್ಲಿ ಹೀಲಿಯಂ ಬಲೂನನ್ನು ಆಕಾಶಕ್ಕೆ ಹಾರಿಸುವ ಮೂಲಕ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಾಮರಾಜನ್, ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹವ್ಯಾಸಗಳನ್ನು ಉತ್ತೇಜಿಸಲು ಮತ್ತು ಅವರ ಸಾಮರ್ಥ್ಯಗಳನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪಠ್ಯಾಧ್ಯಯನಕ್ಕಷ್ಟೇ ಸೀಮಿತವಾಗದೆ, ಇಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿನ ಪ್ರತಿಭೆಯ ಬೆಳವಣಿಗೆಗೆ ಅವಕಾಶವನ್ನು ಶಾಲೆಗಳಲ್ಲಿ ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದರು.
ಮೊಬೈಲ್ ಬಳಸಬೇಡಿ ಎಂದು ಮಕ್ಕಳಿಗೆ ಹೇಳುವ ಬದಲು, ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕಾದ ಸೃಜನಾತ್ಮಕ ಚಟುವಟಿಕೆಗಳತ್ತ ಅವರು ಗಮನ ನೀಡುವಂತೆ ಮಾಡುವಂತಾಗಬೇಕು. ಪೋಷಕರು ಮಕ್ಕಳ ಆಸಕ್ತಿಗಳನ್ನು ಗುರುತಿಸಿ, ಅವರ ಹವ್ಯಾಸಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದೂ ರಾಮರಾಜನ್ ಹೇಳಿದರು. ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿ ತಮ್ಮದೇ ಛಾಪು ಮೂಡಿಸಿರುವ ಸಂಪನ್ಮೂಲ ವ್ಯಕ್ತಿ ಗಳನ್ನು ಒಂದೆಡೆ ಸೇರಿಸಿ ಈ ಶಿಬಿರವನ್ನು ನಡೆಸುತ್ತಿರುವುದು ಶ್ಲಾಘನೀಯ. ಕೊಡಗು ವಿದ್ಯಾಲಯದ ಬೇಸಿಗೆ ಶಿಬಿರವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿದೆ ಎಂಬುದರಲ್ಲಿ ಸಂಶಯವಿಲ್ಲ ಎಂದು ಕೊಡಗು ವಿದ್ಯಾಲಯದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತ ಪಡಿಸಿದರು.ಈ ಶಿಬಿರದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ನಿಪುಣ ತರಬೇತುದಾರರು ಶಿಬಿರದಲ್ಲಿನ 250 ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಸಲಹಾ ಸಮಿತಿಯ ಸದಸ್ಯ ಕುಮಾರ್ ಸುಬ್ಬಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ರಘು ಮಾದಪ್ಪ, ಆಡಳಿತ ಮಂಡಳಿ ಉಪಾಧ್ಯಕ್ಷೆ ಊರ್ವಶಿ ಮುದ್ದಯ್ಯ, ಕರೆಸ್ಪೋಡೆಂಟ್ ಪವಿತ್ರ ಅಪ್ಪಯ್ಯ, ಆಡಳಿತ ಮಂಡಳಿ ಸದಸ್ಯರಾದ ಗುರುದತ್ತ್ ಸಿ.ಎಸ್., ಶಾಲೆಯ ಪ್ರಾಂಶುಪಾಲೆ ಸುಮಿತ್ರ ಕೆ.ಎಸ್., ,ಆಡಳಿತ ನಿರ್ವಹಣಾಧಿಕಾರಿ ರವಿ. ಪಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.