ಗ್ರಾಮೀಣ ಬದುಕಿನ ಚಿತ್ರಣ ಅರಿಯಲು ಶಿಬಿರಗಳು ಸಹಕಾರಿ

| Published : Apr 30 2025, 12:38 AM IST

ಗ್ರಾಮೀಣ ಬದುಕಿನ ಚಿತ್ರಣ ಅರಿಯಲು ಶಿಬಿರಗಳು ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಯ ಮುಖ್ಯ ಗುರು ಡಿ. ವಿರೂಪಣ್ಣ ಮಾತನಾಡಿ, ಗ್ರಾಮೀಣ ಭಾಗದ ಸಾವಿರಾರು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚರಾಗಬಾರದೆಂಬ ಕಾರಣಕ್ಕಾಗಿ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘವು ಗ್ರಾಮೀಣ ಪ್ರದೇಶದಲ್ಲಿ ಕಾಲೇಜು ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದೆ

ಹೂವಿನಹಡಗಲಿ: ಗ್ರಾಮೀಣ ಪ್ರದೇಶದ ಜನರ ದೈನಂದಿನ ಜೀವನ ಚಿತ್ರಣ ಅರಿಯಲು, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಸೇವಾ ಶಿಬಿರಗಳು ಸಹಕಾರಿಯಾಗಿವೆ ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನ ರೆಡ್ಡಿ ಹೇಳಿದರು.

ತಾಲೂಕಿನ ಮಾಗಳ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಬಿಆರ್‌ ಕಾಲೇಜು 7 ದಿನಗಳ ಕಾಲ ಆಯೋಜಿಸಿರುವ ವಾರ್ಷಿಕ ವಿಶೇಷ ಸೇವಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬಿತ್ತುವ ಕೆಲಸ ಶಿಬಿರಗಳಿಂದ ಆಗುತ್ತಿದೆ. ಹಳ್ಳಿಗಳಲ್ಲಿ ಜನರ ಜೀವನ, ಸಮಾಜದೊಂದಿಗೆ ಅವರ ಸಂಬಂಧಗಳನ್ನು ಶಿಬಿರಾರ್ಥಿಗಳು ಅರಿಯಬೇಕಿದೆ. ಹಳ್ಳಿಗಳಲ್ಲಿ ಸ್ವಚ್ಛತೆ, ಜನ, ಜಾನುವಾರುಗಳ ಆರೋಗ್ಯ, ಪರಿಸರ ಪ್ರಜ್ಞೆ, ದೇಶದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ನಾವೆಲ್ಲಾ ಪಣ ತೊಡಬೇಕಿದೆ ಎಂದರು.

ಶಾಲೆಯ ಮುಖ್ಯ ಗುರು ಡಿ. ವಿರೂಪಣ್ಣ ಮಾತನಾಡಿ, ಗ್ರಾಮೀಣ ಭಾಗದ ಸಾವಿರಾರು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚರಾಗಬಾರದೆಂಬ ಕಾರಣಕ್ಕಾಗಿ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘವು ಗ್ರಾಮೀಣ ಪ್ರದೇಶದಲ್ಲಿ ಕಾಲೇಜು ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದೆ. ಆದರಿಂದ ಈ ಕಾಲೇಜು ವಿದ್ಯಾರ್ಥಿಗಳೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಿದೆ ಎಂದರು.

ಕಾಲೇಜು ಪ್ರಾಚಾರ್ಯ ಎಸ್‌.ಎಸ್‌. ಪಾಟೀಲ್‌ ಮಾತನಾಡಿ, ಕಾಲೇಜನಿಂದ ಸೇವಾ ಶಿಬಿರಗಳನ್ನು 50 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ. ಈ ಸೇವಾ ಶಿಬಿರದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಬಿರಾರ್ಥಿಗಳಾಗಿ ಆಗಮಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಅಂಗೂರೇಶ್ವರ ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ, ನಿಷ್ಠೆಯಿಂದ ಸೇವಾ ಮನೋಭಾವನೆ ಇಟ್ಟುಕೊಂಡು, ದೇಶಿ ಸಂಸ್ಕೃತಿ ಉಳಿಸಿ-ಬೆಳೆಸಬೇಕು ಎಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷ ವಿರೂಪಾಕ್ಷಪ್ಪ ಯಳಮಾಲಿ, ಎಸ್‌ಡಿಎಂಸಿ ಅಧ್ಯಕ್ಷೆ ಕೆ. ಮಮತಾ, ಆಡಳಿತ ಮಂಡಳಿಯ ಸದಸ್ಯ ಕೆ.ಎಂ. ಉದಾಸಿ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಅಣ್ಣಾಜಿ ಯಶೋಧರಗೌಡ, ಪತ್ರಕರ್ತ ಚಂದ್ರು ಕೊಂಚಿಗೇರಿ, ಬಸ್ತಿ ಭರತೇಶ, ರಂಗಾಪುರ ನಾಗೇಶ ಇತರರಿದ್ದರು.

ಶಿಬಿರಾಧಿಕಾರಿ ಡಾ. ಶರಣಪ್ಪ ಜಕ್ಕಲಿ ಸ್ವಾಗತಿಸಿದರು, ಎಸ್‌.ಬಿ. ಸಂಜಯ ಕುಮಾರ, ಆಶಾ ಬಾರಿಕರ ಕಾರ್ಯಕ್ರಮ ನಿರೂಪಿಸಿದರು. ಮಾಬುಸಾಬ್‌ ವಂದಿಸಿದರು.

ಆನಂತರದಲ್ಲಿ ಅಂತಾರಾಷ್ಟ್ರೀಯ ಜನಪದ ಕಲಾವಿದ ಜೀವನಸಾಬ್‌ ವಾಲಿಕಾರ್‌ ಅವರಿಂದ ಜನಪದ ಸಂಗಮ ಕಾರ್ಯಕ್ರಮ ಜನಮನ ಸೆಳೆಯಿತು.