ತಮ್ಮ ಪ್ರಧಾನಿ ರಕ್ಷಿಸಲಾಗದ ಕಾಂಗ್ರೆಸ್‌ನಿಂದ ದೇಶ ರಕ್ಷಣೆ ಸಾಧ್ಯವೇ?: ಗೋವಿಂದ ಕಾರಜೋಳ ಪ್ರಶ್ನೆ

| Published : Apr 09 2024, 12:52 AM IST

ತಮ್ಮ ಪ್ರಧಾನಿ ರಕ್ಷಿಸಲಾಗದ ಕಾಂಗ್ರೆಸ್‌ನಿಂದ ದೇಶ ರಕ್ಷಣೆ ಸಾಧ್ಯವೇ?: ಗೋವಿಂದ ಕಾರಜೋಳ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಪ್ರಧಾನಿಗಳನ್ನೆ ರಕ್ಷಣೆ ಮಾಡಿಕೊಳ್ಳಲಾಗದ ಕಾಂಗ್ರೆಸ್‌ನಿಂದ ದೇಶ ರಕ್ಷಣೆ ಮಾಡಲು ಸಾಧ್ಯವೇ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಮ್ಮ ಪ್ರಧಾನಿಗಳನ್ನೆ ರಕ್ಷಣೆ ಮಾಡಿಕೊಳ್ಳಲಾಗದ ಕಾಂಗ್ರೆಸ್‌ನಿಂದ ದೇಶ ರಕ್ಷಣೆ ಮಾಡಲು ಸಾಧ್ಯವೇ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.

ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ಅಂಗವಾಗಿ ಸೋಮವಾರ ಆಯೋಜಿಸಲಾಗಿದ್ದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಏಕತೆ ಹಾಗೂ ಭದ್ರತೆಗೆ ಕಾಂಗ್ರೆಸ್‌ ಬೇಕು ಎನ್ನುವ ನಾಯಕರಿಗೆ ತಮ್ಮದೇ ಪಕ್ಷದ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ ಗಾಂಧಿ ರಕ್ಷಣೆ ಮಾಡಿಕೊಳ್ಳಲಾಗಲಿಲ್ಲ. ಕಾಂಗ್ರೆಸ್‌ ನ ಅವಧಿಯಲ್ಲಿ ಭಯೋತ್ಪಾದಕತೆ, ಬ್ರಷ್ಟಾಚಾರ ಹೆಚ್ಚು ಇತ್ತು. ಆದರೆ ಕಳೆದ 10 ವರ್ಷದಲ್ಲಿ ಮೋದಿಜಿ ಭಯೋತ್ಪಾದನೆ ಹತ್ತಿಕ್ಕಿದ್ದಾರೆ. ಬ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟಿದ್ದಾರೆ. ನಮ್ಮ ಮೇಲೆ ವಿಶ್ವದ ಯಾವುದೇ ದೇಶ ದಾಳಿ ಮಾಡಲು ಹತ್ತಾರು ಬಾರಿ ಯೋಚನೆ ಮಾಡುವಂತೆ ಮಾಡಿದ್ದಾರೆ. ದೇಶದ ಭದ್ರತೆಗೆ ಬಿಜೆಪಿ ಅನಿವಾರ್ಯವಾಗಿದ್ದು ಇದಕ್ಕೆ ಮೋದಿಜಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕಾಗಿ ಎಲ್ಲರೂ ಬಿಜೆಪಿಗೆ ಮತ ಹಾಕಬೇಕು ಎಂದರು. ಮುಂದಿನ 5 ವರ್ಷದಲ್ಲಿ ದೇಶದಲ್ಲಿ ಅಂತ್ಯೋದಯ ಆಡಳಿತ, ನವೋದಯ ಸಿದ್ದಾಂತ ಹಾಗೂ ಬ್ರಷ್ಟಾಚಾರ ಮುಕ್ತ ಭಾರತ ಮಾಡುವುದು ಮೋದಿಜಿ ಗುರಿಯಾಗಿದ್ದು, ಭಾರತ ವಿಶ್ವ ಗುರುವಾಗಬೇಕಾದರೆ ಅದು ಮೋದಿಜಿಯಿಂದ ಮಾತ್ರ ಸಾಧ್ಯ. ಭಾರತ ಎಂದರೆ ಬಿಕ್ಷಕರ, ಹಾವಾಡಿಗರ ದೇಶ ಎಂದು ಹೀಯಾಳಿಸುತ್ತಿದ್ದ ವಿಶ್ವದ ಅನೇಕ ರಾಷ್ಟ್ರಗಳು ಇಂದು ಮೋದಿಜಿಗೆ ರತ್ನಗಂಬಳಿ ಹಾಸಿ ದೇಶಕ್ಕೆ ಬರುವಂತೆ ಬೇಡಿಕೊಳ್ಳುತ್ತಿವೆ ಎಂದರು.

ದೇಶದಲ್ಲಿ ಮೋದಿ ಆಡಳಿತ ಹಾಗೂ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಆಡಳಿತದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡೋಣ. ಎರಡೂ ಪಕ್ಷಗಳ ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡಬೇಕು. ಪ್ರತಿ ಮತದಾರರನ್ನು ಮಾತನಾಡಿಸಿ ಅತಿ ಹೆಚ್ಚು ಮತ ಬಿಜೆಪಿಗೆ ಬರುವಂತೆ ನೋಡಿಕೊಳ್ಳಬೇಕು. ನೀವು ನನಗೆ ಮತಹಾಕಿ ಗೆಲ್ಲಿಸಿದರೆ ಜಿಲ್ಲೆಗೆ ಅಗತ್ಯ ಸೌಕರ್ಯ, ಶಿಕ್ಷಣ, ಆರೋಗ್ಯ, ನೀರಾವರಿ ಸೇರಿ ಜನರು ಬಯಸಿದಂತೆ ಸೇವೆ ಮಾಡುತ್ತೇನೆ ಎಂದರು.

ಚಿತ್ರದುರ್ಗ ಲೋಕಸಭಾ ಚುನಾವಣೆ ಸಹ ಉಸ್ತುವಾರಿ ಎಸ್. ಲಿಂಗಮೂರ್ತಿ ಮಾತನಾಡಿ, ಬಿಸಿಲಿನಲ್ಲಿಯೂ ನಮ್ಮ ಕಾರ್ಯಕರ್ತರು ದೇಶ ಉಳಿಯಬೇಕೆಂದು ಹೋರಾಟ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಖಚಿತ. ನಮ್ಮಲ್ಲಿ ಎಷ್ಟೇ ಗೊಂದಲ ಇದ್ದರು ಸಹ ಈ ಕ್ಷೇತ್ರಕ್ಕೆ ಗೋವಿಂದ ಕಾರಜೋಳ ಅವರನ್ನು ಅಭ್ಯರ್ಥಿಯನ್ನಾಗಿ ಹೈಕಮಾಂಡ್ ಕಳುಹಿಸಿದೆ. ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಸೋತಿರಬಹುದು. ಆದರೆ ಲೋಕಸಭೆ ಚುನಾವಣೆ ಬಂದಾಗ ತಾಲೂಕಿನಲ್ಲಿ 20 ಸಾವಿರ ಮತಗಳ ಮುನ್ನಡೆಯನ್ನು ಸಾಧಿಸಿದ್ದೇವೆ. ಈ ಬಾರಿಯು ಹೆಚ್ಚು ಮತಗಳನ್ನು ಪಡೆಯಲಿದ್ದೇವೆ. ಗೋವಿಂದ ಕಾರಜೋಳ ಗೆದ್ದು ಕೇಂದ್ರ ಸಚಿವರಾಗಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಪ್ರಧಾನ ಕಾರ್ಯದರ್ಶಿ ನಾಯಿಗೆರೆ ಜಗದೀಶ್, ದೊಡ್ಡಯ್ಯ, ಜಿಲ್ಲಾ ಕಾರ್ಯದರ್ಶಿ ಸಿಂಧು, ಜೆಡಿಎಸ್ ಅಧ್ಯಕ್ಷ ಗಣೇಶ್, ಯುವ ಘಟಕದ ಅಧ್ಯಕ್ಷ ಕಿರಣ್, ಜಿಪಂ ಮಾಜಿ ಸದಸ್ಯ ಹನುಮಂತಪ್ಪ, ದ್ಯಾಮಣ್ಣ, ಗುರುಸ್ವಾಮಿ, ಕೊಂಡಾಪುರ ಮಂಜುನಾಥ, ಒಬಿಸಿ ಅಧ್ಯಕ್ಷ ಹೇರೂರು ಮಂಜುನಾಥ್, ದೊಡ್ಡಘಟ್ಟ ಲಕ್ಷ್ಮಣ್, ಸಾಚ ಮಂಜಯ್ಯ, ಕೀರ್ತಿ , ಪುರಸಭೆ ಸದಸ್ಯರು ಇದ್ದರು.