ಏಕಾಗ್ರತೆ ವ್ಯಾಸಂಗದಿಂದ ಸಾಧನೆ ಮಾಡಬಹುದು: ಡಾ.ಜಿ.ಬಿ.ಮಲ್ಲಪ್ಪ

| Published : Sep 13 2024, 01:37 AM IST

ಏಕಾಗ್ರತೆ ವ್ಯಾಸಂಗದಿಂದ ಸಾಧನೆ ಮಾಡಬಹುದು: ಡಾ.ಜಿ.ಬಿ.ಮಲ್ಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯೆ ಎಂಬ ಜ್ಞಾನದ ಬೆಳಕಿನ ಶಕ್ತಿಯು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂಬ ಸತ್ಯ ಅರಿತು ಕಷ್ಟು ಪಟ್ಟು ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಿ ಸಮಾಜದ ಮುಖ್ಯ ವಾಹಿನಿಗೆ ಬಂದು ಅತ್ಯುನ್ನತ ಹುದ್ದೆ ಅಲಂಕರಿಸಲು ಪಣ ತೊಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳು ಏಕಾಗ್ರತೆಯಿಂದ ವ್ಯಾಸಂಗ ಮಾಡಿದರೆ ಶೈಕ್ಷಣಿಕವಾಗಿ ಸಾಧನೆ ಮಾಡಬಹುದು ಎಂದು ತುಮಕೂರು ಗುಬ್ಬಿಯ ಬಂಡಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಬಿ.ಮಲ್ಲಪ್ಪ ಕರೆ ನೀಡಿದರು.

ಪಟ್ಟಣದ ಶ್ರೀಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಶಿಕ್ಷಕರ ದಿನಾಚರಣೆ ಹಾಗೂ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರಿಯೊಂದಿಗೆ ಶ್ರದ್ಧೆಯಿಂದ ಓದಿದರೆ ಸಾಧನೆಯ ಸಂಕಲ್ಪ ಸಾಧ್ಯವಾಗಲಿದೆ ಎಂದರು.

ವಿದ್ಯೆ ಎಂಬ ಜ್ಞಾನದ ಬೆಳಕಿನ ಶಕ್ತಿಯು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂಬ ಸತ್ಯ ಅರಿತು ಕಷ್ಟು ಪಟ್ಟು ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಿ ಸಮಾಜದ ಮುಖ್ಯ ವಾಹಿನಿಗೆ ಬಂದು ಅತ್ಯುನ್ನತ ಹುದ್ದೆ ಅಲಂಕರಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲದ ಇಒ ಶೀಲಾ ಮಾತನಾಡಿ, ಈ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು, ಸಾಧಾರಣ ವಿದ್ಯಾರ್ಥಿಯಾಗಿದ್ದ ನಾನು ನಿರಂತರ ಪ್ರಯತ್ನ ಹಾಗೂ ಸಾಧಿಸಲೇಬೇಕೆಂಬ ಛಲದಿಂದ ಉನ್ನತ ಹುದ್ದೆ ಅಲಂಕರಿಸಿದ್ದೇನೆ ಎಂದರು.

ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದು ಪ್ರಯತ್ನ ಮಾಡಿದರೆ ಖಂಡಿತವಾಗಿ ಸಾಧನೆ ಮಾಡಲು ಸಾಧ್ಯವಿದೆ ಎಂಬುದಕ್ಕೆ ನಾನೇ ನಿಮ್ಮ ಮುಂದೆ ನಿಂತಿದ್ದೇನೆ. ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಆತ್ಮ ವಿಶ್ವಾಸದಿಂದ ಮುನ್ನಡೆಯಬೇಕು ಎಂದರು.

ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಬಿಸಿಎಂ ಇಲಾಖೆ ವಿದ್ಯಾರ್ಥಿ ನಿಲಯದ ಹಿರಿಯ ನಿಲಯ ಪಾಲಕಿ ಗೀತಾ ಮಾತನಾಡಿದರು. ಕಾಲೇಜಿನ ಆಡಳಿತ ಅಧಿಕಾರಿ ಎಸ್.ಬಿ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೃಷ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಗಂಜಿಗೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರವೀಣ್‌ಕುಮಾರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಬಸವೇಶ್ವರ ಟ್ರೇಡರ್ಸ್‌ ಮಾಲೀಕ ಬಸವೇಗೌಡ, ಪುರಸಭೆ ಮಾಜಿ ಸದಸ್ಯ ಕೆ.ಬಿ. ನಂದೀಶ್, ಬಂಡಿ ಶಿಕ್ಷಣ ಸಂಸ್ಥೆ ನಿರ್ದೇಶಕ ನಾಗರಂಗಪ್ಪ ಇದ್ದರು.