ಬಿಜೆಪಿ ಟಿಕೆಟ್ ಕೈ ತಪ್ಪಿಸಲು ಸಾಧ್ಯವಿಲ್ಲ: ಸಂಸದ ಉಮೇಶ ಜಾಧವ್‌

| Published : Jan 18 2024, 02:00 AM IST

ಬಿಜೆಪಿ ಟಿಕೆಟ್ ಕೈ ತಪ್ಪಿಸಲು ಸಾಧ್ಯವಿಲ್ಲ: ಸಂಸದ ಉಮೇಶ ಜಾಧವ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಲೋಕಸಭಾ ಬಿಜೆಪಿ ಟಿಕೆಟ್ ನನಗೇ ಪಕ್ಕಾ. ಹಂಡ್ರೆಡ್ ಪರ್ಸೆಂಟ್ ಈ ಬಾರಿಯೂ ಟಿಕೆಟ್ ನನಗೆನೆ. ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಬೇರೆ ಎನ್ನುವ ಪ್ರಶ್ನೇಯೇ ಇಲ್ಲ. ಯಾರೇನೇ ತಿಪ್ಪರಲಾಗ ಹಾಕಿದ್ರೂ ನನಗೆ ಬಿಜೆಪಿ ಟಿಕೆಟ್ ಕೈ ತಪ್ಪಿಸಲು ಸಾಧ್ಯವಿಲ್ಲವೆಂದು ಕಲಬುರಗಿ ಬಿಜೆಪಿ ಸಂಸದ ಡಾ.ಉಮೇಶ ಜಾಧವ್ ವಿಶ್ವಾಸ.

ಕನ್ನಡಪ್ರಭ ವಾರ್ತೆ ಕಲಬುರಗಿ

ಈ ಬಾರಿಯೂ ಕಲಬುರಗಿ ಲೋಕಸಭಾ ಬಿಜೆಪಿ ಟಿಕೆಟ್ ನನಗೇ ಪಕ್ಕಾ. ಹಂಡ್ರೆಡ್ ಪರ್ಸೆಂಟ್ ಈ ಬಾರಿಯೂ ಟಿಕೆಟ್ ನನಗೆನೆ. ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಬೇರೆ ಎನ್ನುವ ಪ್ರಶ್ನೇಯೇ ಇಲ್ಲ. ಯಾರೇನೇ ತಿಪ್ಪರಲಾಗ ಹಾಕಿದ್ರೂ ನನಗೆ ಬಿಜೆಪಿ ಟಿಕೆಟ್ ಕೈ ತಪ್ಪಿಸಲು ಸಾಧ್ಯವಿಲ್ಲವೆಂದು ಕಲಬುರಗಿ ಬಿಜೆಪಿ ಸಂಸದ ಡಾ.ಉಮೇಶ ಜಾಧವ್ ಹೇಳಿದ್ದಾರೆ.

ಕೆಲವರು ನಮ್ಮಲ್ಲಿ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ಹಲವರಿಗೆ ಪ್ರಚೋದನೆ ಮಾಡಿ ಟಿಕೆಟ್‌ ಕೇಳಲು ಮುಂದೆ ಮಾಡುತ್ತಿದ್ದಾರೆ. ಹೀಗೆ ಹಲವರಿಗೆ ಪ್ರವೋಕ್ ಮಾಡಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂದು ಹೆಸರು ಕೇಳಿ ಬಂದಿರುವ ಹಾಲಿ ಶಾಸಕ ಬಸವರಾಜ ಮತ್ತಿಮಡು ಅವರೇ ನನಗೆ ಮೂರು ಲಕ್ಷ ಓಟ್‌ಗಳಿಂದ ಗೆಲ್ಲಿಸುತ್ತೇನೆ ಎಂದಿದ್ದಾರೆಂದು ಡಾ. ಜಾಧವ್‌ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿರುವ ಬಗ್ಗೆ ಜಾಧವ್ ಪ್ರತಿಕ್ರಿಯೆ ನೀಡಿ, ನಾನು ಈ ಮೊದಲು ಸಣ್ಣ ವ್ಯಕ್ತಿಯಾಗಿಯೇ ಅವರನ್ನು ಸೋಲಿಸಿದ್ದೇನೆ. ಎದುರಾಳಿ ಯಾರೇ ಇರಲಿ ಈ ಸಣ್ಣ ವ್ಯಕ್ತಿಯೇ ಮತ್ತೊಮ್ಮೆ ಸೋಲಿಸುತ್ತಾನೆಂದರು.

ತಮ್ಮ ಟಿಕೆಟ್‌ ತಪ್ಪಿಸಲು ಯತ್ನಗಳು ಸಾಗಿವೆ. ಅದೆಲ್ಲ ಗೊತ್ತಿದೆ. ಯಾರೇ ತಿಪ್ಪರಲಾಗ ಹೊಡೆದ್ರೂ ನನಗೆ ಟಿಕೆಟ್ ಕೈ ತಪ್ಪಿಸಲು ಸಾಧ್ಯವಿಲ್ಲ. ಕೆಲವರು ನನಗೆ ಆ ಕಡೆಯಿಂದ ಡಿಸ್ಟರ್ಬ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮ್ಮ‌ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ, ಅದಕ್ಕೇ ಆಕಾಂಕ್ಷಿಗಳು ಧೈರ್ಯವಾಗಿ ಹೇಳಿಕೊಳ್ಳುತ್ತಾರೆಂದರು.

ಬಿಜೆಪಿಯಂತೆ ಕಾಂಗ್ರೆಸ್‌ನಲ್ಲಿ ಯಾಕೆ ಯಾರೂ ಮಾತಾಡಲ್ಲ? ಕಾಂಗ್ರೆಸ್‌ನಲ್ಲಿ ಕಲಬುರಗಿ ಲೋಕಸಭೆಗೆ ಒಂದು ಹೆಸರು ಬಿಟ್ಟರೆ ಬೇರೆಯವರು ಕೇಳೋದಕ್ಕೆ ಹೋಗೊಲ್ಲ ಏಕೆ ಎಂದು ಪ್ರಶ್ನಿಸಿದರಲ್ಲದೆ, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ಎಂಪಿ ಟಿಕೆಟ್ ಕೇಳುತ್ತಿದ್ದಾನೆ. ತಾವು ಇದನ್ನು ಸ್ವಾಗತಿಸೋದಾಗಿ ಹೇಳಿದರು.

ನಮ್ಮಲ್ಲಿ ಟಿಕೆಟ್ ಕೇಳುವ ಧೈರ್ಯ ಬರುತ್ತಿದೆ. ಆದರೆ, ಕಾಂಗ್ರೆಸ್‌ನಲ್ಲಿ ಇದು ಇಲ್ಲವೇ ಇಲ್ಲ. ಕಾಂಗ್ರೆಸ್‌ನಲ್ಲಿ ಅವರಿಬ್ಬರು ಬಿಟ್ಟರೆ ಕ್ಯಾಂಡಿಡೆಟ್ ಬೇರೆಯವರಾರೂ ಇಲ್ಲವೇ ಎಂದು ಪರೋಕ್ಷವಾಗಿ ಖರ್ಗೆ ಕುಟುಂಬದ ಹೆಸರು ಹೇಳದೆ ಟೀಕಿಸಿದರು.

ತಾವು ಯಾವುದೇ ಚುನಾವಣೆಯನ್ನು ಸುಲಭ ಅಂತ ಅಂದುಕೊಳ್ಳೋದಿಲ್ಲವೆಂದರಲ್ಲದೆ, ಈ ಚುನಾವಣೆಯಲ್ಲಿಯೂ ನಾವೇ ಗೆಲ್ಲೋದು. ಲೋಕಸಭಾ ಚುನಾವಣೆ ದೇಶದ ಚುನಾವಣೆ ಅಂತ ಜನ ಭಾವಿಸಿದ್ದಾರೆ. ಇದು ದೇಶದ ಅಭಿವೃದ್ಧಿ, ದೇಶದ ಐಕ್ಯತೆ, ದೇಶದ ರಕ್ಷಣೆಯ ಚುನಾವಣೆ ಇದೆ, ವಿಧಾನ ಸಭಾ ಚುನಾವಣೆಯೇ ಬೇರೆ ಲೋಕಸಭಾ ಚುನಾವಣೆಯೇ ಬೇರೆ ಅಂತ ಸ್ವತಃ ಕಾಂಗ್ರೆಸ್ ನಲ್ಲಿನ ತಮ್ಮ ಸ್ನೇಹಿತರೇ ಹೇಳುತ್ತಿದ್ದಾರೆಂದರು.