ಅತಿಕ್ರಮಣದಾರರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲು ಸಾಧ್ಯವಿಲ್ಲ: ರಾಮಾ ಮೊಗೇರ

| Published : Oct 09 2024, 01:34 AM IST

ಅತಿಕ್ರಮಣದಾರರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲು ಸಾಧ್ಯವಿಲ್ಲ: ರಾಮಾ ಮೊಗೇರ
Share this Article
  • FB
  • TW
  • Linkdin
  • Email

ಸಾರಾಂಶ

ಅತಿಕ್ರಮಣದಾರರಿಗೆ ಅರಣ್ಯಹಕ್ಕು ಕಾಯ್ದೆಯಡಿ ಭೂಮಿ ಮಂಜೂರಿ ಮಾಡುವ ಅವಕಾಶ ಇದ್ದರೂ ಅಧಿಕಾರಿಗಳು ಮಾಡುತ್ತಿಲ್ಲ. ಅಧಿಕಾರಿಗಳಿಗೆ ಅರಣ್ಯಭೂಮಿ ಅತಿಕ್ರಮಣದಾರರಿಗೆ ಪಟ್ಟಾ ಕೊಡಲು ಇಚ್ಛಾಶಕ್ತಿ ಇಲ್ಲವಾಗಿದೆ.

ಭಟ್ಕಳ: ಅತಿಕ್ರಮಣದಾರರಿಗೆ ಪಟ್ಟಾ ಸಿಗುವ ವರೆಗೂ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಅತಿಕ್ರಮಣದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಅರಣ್ಯಭೂಮಿ ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಎಂ. ಮೊಗೇರ ಹೇಳಿದರು,

ಪಟ್ಟಣದಲ್ಲಿ ಮಂಗಳವಾರ ಅತಿಕ್ರಮಣದಾರರ ಹೋರಾಟ ಸಮಿತಿಯ ಪ್ರಮುಖರು ಮತ್ತು ಅತಿಕ್ರಮಣದಾರರ ಸಭೆಯಲ್ಲಿ ಮಾತನಾಡಿದರು.ಅತಿಕ್ರಮಣದಾರರಿಗೆ ಅರಣ್ಯಹಕ್ಕು ಕಾಯ್ದೆಯಡಿ ಭೂಮಿ ಮಂಜೂರಿ ಮಾಡುವ ಅವಕಾಶ ಇದ್ದರೂ ಅಧಿಕಾರಿಗಳು ಮಾಡುತ್ತಿಲ್ಲ. ಅಧಿಕಾರಿಗಳಿಗೆ ಅರಣ್ಯಭೂಮಿ ಅತಿಕ್ರಮಣದಾರರಿಗೆ ಪಟ್ಟಾ ಕೊಡಲು ಇಚ್ಛಾಶಕ್ತಿ ಇಲ್ಲವಾಗಿದೆ. ಅರಣ್ಯ ಹಕ್ಕು ಕಾಯ್ದೆ ಜಾರಿಯಲ್ಲಿರುವುದರಿಂದ ಮತ್ತು ಈ ಕಾಯ್ದೆಯಡಿ ಸಲ್ಲಿಸಲಾದ ಅರ್ಜಿ ತಿರಸ್ಕೃತಗೊಂಡು ಅದಕ್ಕೆ ಮೇಲ್ಮನವಿ ಸಲ್ಲಿಕೆ ಆಗಿರುವುದರಿಂದ ಇದು ಇತ್ಯರ್ಥ ಆಗುವ ವರೆಗೆ ಅತಿಕ್ರಮಣ ಮಾಡಲಾದ ಅರಣ್ಯಭೂಮಿಯನ್ನು ತೆರವುಗೊಳಿಸುವುದು, ತೊಂದರೆ ಕೊಡುವುದು ಕಾಯ್ದೆಯ ಉಲ್ಲಂಘನೆ ಆಗಿದೆ.

ಅತಿಕ್ರಮಣದಾರರು ತಮ್ಮ ಪೂರ್ವಜರ ಕಾಲದಿಂದಲೂ ಅರಣ್ಯಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಅಲ್ಲಿಯೇ ಮನೆ, ತೋಟ ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಅರಣ್ಯ ಭೂಮಿ ಅತಿಕ್ರಮಣದಾರರಿಗೆ ತೊಂದರೆ ಕೊಡುವ ಕೆಲಸ ಮಾಡಬಾರದು. ಜಿಪಿಎಸ್ ಆಗದೇ ಇರುವ ಅತಿಕ್ರಮಣ ಜಾಗವನ್ನು ಜಿಪಿಎಸ್ ಮಾಡಿಕೊಡಬೇಕು. ಜಿಪಿಎಸ್ ಆದವರಿಗೆ ತೊಂದರೆ ಕೊಡುವ ಕೆಲಸ ಮಾಡಬಾರದು. ಹಳೇ ಅತಿಕ್ರಮಣದಾರರಿಗೆ ತೊಂದರೆಯಾದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದ ಅವರು ಹೋರಾಟ ಸಮಿತಿಯು ಹೊಸ ಅತಿಕ್ರಮಣದ ಪರವಾಗಿ ಎಂದಿಗೂ ಇಲ್ಲ ಎಂದರು.

ತಾಲೂಕಿನಲ್ಲಿ ಅರಣ್ಯಭೂಮಿ ಅತಿಕ್ರಮಣದಾರರನ್ನು ಒಗ್ಗೂಡಿಸಿ ಬೃಹತ್ ಶಕ್ತಿ ಪ್ರದರ್ಶನ ಮಾಡಲಾಗುವುದು. ಹೋರಾಟ ಸಮಿತಿಯ ಮುಖಂಡ ಗಣಪತಿ ನಾಯ್ಕ ಜಾಲಿ ಮಾತನಾಡಿ, ಅರಣ್ಯಭೂಮಿ ಅತಿಕ್ರಮಣದಾರರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಕಳೆದ ಹಲವು ವರ್ಷಗಳಿಂದ ಭಯದಿಂದಲೇ ಬದುಕುತ್ತಿರುವ ಅತಿಕ್ರಮಣದಾರರಿಗೆ ಪಟ್ಟಾ ಸಿಕ್ಕರೇ ಮಾತ್ರ ಅವರ ಹಲವು ವರ್ಷಗಳ ಸಮಸ್ಯೆ ಬಗೆಹರಿಯಲಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡುವುದು ಅಗತ್ಯವಿದೆ ಎಂದರು.

ಭಟ್ಕಳದಲ್ಲಿ ರಾಮಾ ಮೊಗೇರ ನೇತೃತ್ವದಲ್ಲಿ ಅರಣ್ಯಭೂಮಿ ಅತಿಕ್ರಮಣದಾರರ ಹೋರಾಟ ನಡೆಸಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ನಾಗೇಶ ದೇವಡಿಗ, ಪಾಂಡುರಂಗ ನಾಯ್ಕ ಬೆಳಕೆ, ಖಯ್ಯೂಂ ಸಾಬ್, ಸತೀಶ ಆಚಾರಿ, ಸಾಗರದ ನ್ಯಾಯವಾದಿ ವಿನಯಕುಮಾರ, ಪ್ರಕಾಶ ನಾಯ್ಕ, ಶಬ್ಬರ್ ಸಾಬ್, ಜಾಲಿ ಪಪಂ ಸದಸ್ಯ ರಮೇಶ ಗೊಂಡ, ದಿನೇಶ ಮೊಗೇರ, ಶಂಕರ ನಾಯ್ಕ, ಜಗನ್ನಾಥ ಹಾಗೂ ವಿವಿಧ ಭಾಗದ ಅರಣ್ಯಭೂಮಿ ಅತಿಕ್ರಮಣದಾರರಿದ್ದರು.