ಶಿಲಾಯುಗದ ರಕ್ಕಸಗಲ್ಲುಗಳಿಗೆ ಸಿಗುವುದೇ ರಕ್ಷಣೆ?

| Published : Feb 26 2024, 01:34 AM IST

ಸಾರಾಂಶ

ಮಾನವನ ಆಕಾರ ಹೋಲುವ ವಿಶಾಲ ನಿಲುವುಗಲ್ಲುಗಳು ಮಾತ್ರ ಕುರಿ, ದನಗಾಯಿಗಳು ಆಟವಾಡುವ ಬೊಂಬೆಗಳಾಗಿ ಒಂದೊಂದಾಗಿ ಅಳಿಯುತ್ತಿದ್ದು, ತಂತಿಬೇಲಿ ಹಾಕಿ ರಕ್ಷಣೆಗೆ ಮುಂದಾಗುವರೇ ಎಂದು ಇತಿಹಾಸಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ತಾಲೂಕಿನ ಕೆಲವು ಭಾಗಗಳಲ್ಲಿ ಕಂಡುಬರುವ ಶಿಲಾಯುಗದ ರಕ್ಕಸಗಲ್ಲುಗಳು ರಕ್ಷಣೆಗೆ ಮೊರೆ ಇಡುತ್ತಿದ್ದರೂ ಇನ್ನುವರೆಗೆ ಯಾವುದೇ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ.

ಶಿಲಾಯುಗ ಕಾಲಮಾನದಲ್ಲಿ ಮಾನವನು ವಾಸಿಸಿರುವ ಕುರಿತು ದೇಶದ ಕೆಲವು ಭಾಗಗಳಲ್ಲಿ ನಿಲುವುಗಲ್ಲುಗಳು ಕಂಡುಬರುತ್ತಿವೆ. ಪಕ್ಷಿಯಾಕಾರದ, ಅಸ್ಪಷ್ಟ ಮಾನವನಾಕೃತಿಯ ಶಿಲ್ಪಗಳು ಆಂಧ್ರಪ್ರದೇಶದ ನಿಡಿಮಿಲ್ಲ, ದೊಮಾಡ, ತೃತಿಗುಟ್ಟ, ಡೊಂಗಾ ಟೊಗು ಹಾಗೂ ತಮಿಳುನಾಡಿನ ವೆಟ್ಟೂರು, ಕರ್ನಾಟಕದ ಐಹೊಳೆ, ಹಿರೇಬೆಣಕಲ್ಲು, ಮಡಿಕೇರಿ ಹತ್ತಿರದ ರಾಮಸ್ವಾಮಿ ಕಣಿವೆಗಳಲ್ಲಿ ದೊರೆತಿದ್ದರೂ ಅವು ಸ್ಪಷ್ಟ ಮಾನವನ ಆಕೃತಿ ಹೋಲುವುದಿಲ್ಲ. ಆದರೆ ತಾಲೂಕಿನ ಕುಮತಿ, ಹುಲಿಕುಂಟೆ ಗ್ರಾಮಗಳ ಹೊರವಲಯದಲ್ಲಿ ಸಿಗುವ ನಿಲುವುಗಲ್ಲುಗಳು (ರಕ್ಕಸಗಲ್ಲುಗಳು) ಸ್ಪಷ್ಟವಾಗಿ ಮಾನವನಾಕೃತಿ ಹೊಂದಿವೆ. ಅಲ್ಲದೇ ಬೃಹತ್ ಶಿಲಾಯುಗದ ಇತಿಹಾಸವನ್ನು ಹುದುಗಿಸಿಕೊಂಡಿವೆ.

ಮಾನವನ ಆಕಾರ ಹೋಲುವ ವಿಶಾಲ ನಿಲುವುಗಲ್ಲುಗಳು ಮಾತ್ರ ಕುರಿ, ದನಗಾಯಿಗಳು ಆಟವಾಡುವ ಬೊಂಬೆಗಳಾಗಿ ಒಂದೊಂದಾಗಿ ಅಳಿಯುತ್ತಿದ್ದು, ತಂತಿಬೇಲಿ ಹಾಕಿ ರಕ್ಷಣೆಗೆ ಮುಂದಾಗುವರೇ ಎಂದು ಇತಿಹಾಸಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ತಾಲೂಕು ಕೇಂದ್ರದಿಂದ 40 ಕಿಮೀ ದೂರದಲ್ಲಿರುವ ಕುಮತಿ ಗ್ರಾಮದ ಕೆರೆಯ ಪಕ್ಕದ ಜಮೀನೊಂದರಲ್ಲಿ ಇಂತಹ ಅಪರೂಪದ ಮಾನವನಾಕೃತಿ ನೋಡಬಹುದು. ಮಾನವನು ಎರಡು ಕೈಗಳನ್ನು ಅಡ್ಡಲಾಗಿ ಹಿಡಿದು ಕೆಳಗೆ ಕೈಗಳನ್ನು ಬಾಗಿಸಿದಂತೆ ಕಾಣುತ್ತಿದ್ದು, ಕೆಲವು ಭಾರಿ ಹಕ್ಕಿಗಳಂತೆ ಕಾಣುತ್ತವೆ. ಆದರೆ 1996ರಲ್ಲಿ ಪುರಾತತ್ವ ಇಲಾಖೆಯ ಬೆಂಗಳೂರು ಶಾಖೆಯ ಕೆ.ಪಿ. ಪೂಣಚ್ಚ ಅವರ ನೇತೃತ್ವದಲ್ಲಿ ನಡೆಸಿದ ಗ್ರಾಮಾಂತರ ಸರ್ವೇಕ್ಷಣ ಕಾರ್ಯದ ಸಂದರ್ಭದಲ್ಲಿ ಕುಮತಿ ಮತ್ತು ಹುಲಿಕುಂಟೆಯಲ್ಲಿ ಮಾನವನ ಆಕೃತಿಯ ಶಿಲ್ಪಗಳೇ ಎಂದು ಈ ನೆಲೆಗಳನ್ನು ಗುರುತಿಸಿದೆ. ಒಂದು ಕಂಡಿ ಕೋಣೆಯ ಕಲ್ಗೋರಿ, ಮಾನವನಾಕೃತಿಯ ಏಕಶಿಲಾ ಸಮುಚ್ಛಯಗಳು ಇವುಗಳ ಆಧಾರದ ಮೇಲೆ ಬೃಹತ್ ಶಿಲಾಯುಗದ ನೆಲೆಗಳು ಎಂದು ಸ್ಪಷ್ಟಪಡಿಸಿದ್ದಾರೆ. ಕುಮತಿ ಗ್ರಾಮದ ಕೆರೆಯ ದಂಡೆಯ ಉತ್ತರ ಭಾಗದಲ್ಲಿಯ ಜಮೀನಿನಲ್ಲಿ ಮೂಲ 7 ಮೂಲ ನಿಲುವುಗಲ್ಲುಗಳಿದ್ದವು. ಈಗ 2 ಮಾತ್ರ ಉಳಿದುಕೊಂಡಿವೆ. ಸ್ಥಳೀಯವಾಗಿ ದೊರೆಯುವ ಗ್ರಾನೈಟ್ ಶಿಲೆಯ ಅಗಲವಾದ ಶಿಲಾಫಲಕಗಳಿಂದ ನಿರ್ಮಿಸಲಾಗಿದೆ.

ಕುಮತಿ ಪಕ್ಕದ ಹುರುಳಿಹಾಳ್ ಗ್ರಾಮದ ಜಮೀನೊಂದರಲ್ಲಿ ಹಾಗೂ ತಿಮ್ಮವ್ವನಹಳ್ಳಿಯ ಜಮೀನೊಂದರಲ್ಲಿ ಕಬ್ಬಿಣ ತಯಾರಿಸುವ ಕುಲುಮೆಗಳ ಅವಶೇಷಗಳು ಪತ್ತೆಯಾಗಿವೆ. ಜತೆಗೆ ಚಿನ್ನಹಗರಿ ಉಪನದಿ ಪಕ್ಕದಲ್ಲಿಯೇ ಹರಿಯುತ್ತಿದ್ದು, ಗುಡೇಕೋಟೆಯ ವಿಶಾಲ ಬೆಟ್ಟಗುಡ್ಡಗಳಲ್ಲಿ ಆದಿಮಾನವನು ವಾಸಿಸುವ ಕುರುಹುಗಳು ಸಿಕ್ಕಿವೆ. ಆದರೆ ಇವುಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು. ಕುಮತಿ ಮತ್ತು ಹುಲಿಕುಂಟೆಯಲ್ಲಿರುವ ಶಿಲಾಯುಗದ ನಿಲುವುಗಲ್ಲುಗಳು ಇನ್ನೆರಡು ವರ್ಷ ಕಳೆದರೆ ದನ- ಕುರಿಗಾಹಿಗಳ ಕೈಗೆ ಸಿಕ್ಕು ಸಂಪೂರ್ಣವಾಗಿ ಹಾಳಾಗುವುದರಲ್ಲಿ ಸಂಶಯವಿಲ್ಲ. ಸಂಶೋಧನೆ ಆಗಲಿ: ಬೃಹತ್ ಶಿಲಾಯುಗದಲ್ಲಿ ಜನರು ಸಾವಿಗೀಡಾದಾಗ ಸಮಾಧಿ ಮಾಡುವ ಮಾಡುವ ವಿಧಾನಗಳಲ್ಲಿ ಇದೊಂದಾಗಿದೆ. ಆ ಕುಲದ ಯಜಮಾನ ಅಥವಾ ಹಿರಿಯರು ಸಾವಿಗೀಡಾದಾಗ ಅವರ ನೆನಪಿಗಾಗಿ ಸ್ಮಾರಕವಾಗಿ ಅದೇ ಆಕಾರವಾಗಿ ನಿಲುವುಗಲ್ಲು ನಿರ್ಮಿಸಿರಬೇಕು. ಪಕ್ಕದ ಗುಡೇಕೋಟೆಯ ಸುತ್ತಮುತ್ತ ವಿಶಾಲ ಬೆಟ್ಟಗುಡ್ಡಗಳಲ್ಲಿ ಆದಿಮಾನವನು ವಾಸಿಸುವ ಕುರುಹುಗಳು ಸಿಕ್ಕಿವೆ. ಆದರೆ ಇವುಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು ಎಂದು ಹವ್ಯಾಸಿ ಸಂಶೋಧಕ ಭೀಮಸಮುದ್ರ ರಂಗನಾಥ ತಿಳಿಸಿದರು.