ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ತಾಲೂಕಿನ ಭಂಟನೂರ ಗ್ರಾಮದ ಹತ್ತಿರ ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಕಾಲುವೆಗಳನ್ನು ಕಳಪೆ ಗುಣಮಟ್ಟದಿಂದ ನಿರ್ಮಿಸಿದ್ದರಿಂದ ಕಾಲುವೆಗಳು ಅಲ್ಲಲ್ಲಿ ಒಡೆದು ಕಾಲುವೆಯಲ್ಲಿಯ ನೀರು ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣ ಹಾನಿ ಸಂಭವಿಸಿದೆ. ಈ ಕುರಿತು ಕ್ರಮಕ್ಕೆ ಆಗ್ರಹಿಸಿ ರೈತರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನೆಗೆ ಬಾರದ್ದರಿಂದ ಕುಪಿತಗೊಂಡ ರೈತರು ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಗುರುವಾರ ಆಲಮಟ್ಟಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ೧೮೦ ಕಿಮೀ ದಿಂದ ೧೯೩ ಕಿಮೀ ವರೆಗಿನ ಹಾಗೂ ಮುಂದುವರೆದ ಕಾಮಗಾರಿಯ ಗುತ್ತಿಗೆದಾರರಾದ ಆದಿತ್ಯ ಕನಸ್ಪಕ್ಷನ ಗುತ್ತಿಗೆದಾರರಿದ್ದು ಕಾಮಗಾರಿಯೂ ಸಂಪೂರ್ಣ ಕಳಪೆ ಮಟ್ಟದಿಂದ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿರುವ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ತೆರಳಿದ ರೈತರು ಮುಖ್ಯ ಅಭಿಯಂತರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಹಿಂದೆಯೂ ಕಾಲುವೆ ಕಳಪೆ ಕಾಮಗಾರಿಯಿಂದ ರೈತರಿಗೆ ತುಂಬಾ ಹಾನಿಯುಂಟಾಗುತ್ತಿದ್ದು, ಕೂಡಲೇ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ, ಆಲಮಟ್ಟಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರರಿಗೆ ಜಯಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿ ಸೂಕ್ತ ಕ್ರಮಕ್ಕೆ ಕಾಲವಕಾಶ ನೀಡಿದ್ದರು. ಆದರೂ ಕೂಡಾ ಅಧಿಕಾರಿಗಳು ಸ್ಥಳ ವೀಕ್ಷಣೆಯನ್ನೂ ಕೂಡಾ ಮಾಡದೇ ಬೇಜವಾಬ್ದಾರಿ ತೋರಿದ್ದರಿಂದ ಗುರುವಾರ ಆಲಮಟ್ಟಿ ಕೆಬಿಜೆಎನ್‌ಎಲ್ ಕಚೇರಿಗೆ ತೆರಳಿದ ಜಯಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನೂರಾರು ರೈತರು ಕೆಲಕಾಲ ಧರಣಿಯನ್ನು ನಡೆಸಿದರಲ್ಲದೇ ಕಾಮಗಾರಿ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಹಾಕಿದರು.ಈ ಸಮಯದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಳಿಕೋಟೆ ತಾಲೂಕು ಅಧ್ಯಕ್ಷ ಬಸವರಾಜ ಸಿಂಗನಹಳ್ಳಿ ಮಾತನಾಡಿ, ಮುಳವಾಡ ಏತ ನೀರಾವರಿ ಯೋಜನೆಗೆ ಸಂಬಂಧಿಸಿ ತಾಳಿಕೋಟೆ ತಾಲೂಕಿನ ಭಂಟನೂರ ಗ್ರಾಮದ ಹತ್ತಿರ ನಿರ್ಮಿಸಲಾದ ಕಾಲುವೆ ಕಾಮಗಾರಿಯು ಕಳಪೆಮಟ್ಟದಿಂದ ಕೂಡಿದ್ದು ಹಾಗೂ ಕಾಮಗಾರಿಯನ್ನು ಪೂರ್ಣಗೊಳಿಸದೇ ಇರುವುದರಿಂದ ಸಂಬಂಧಪಟ್ಟ ಗ್ರಾಮಗಳಾದ ಗೋಟಖಂಡಿ, ಭಂಟನೂರ ಗಡಿ, ಸೋಮನಾಳ, ಕಾರಗನೂರ, ಕೊಡಗಾನೂರ, ಗುಂಡಕನಾಳ, ಗ್ರಾಮಗಳ ರೈತರಿಗೆ ಕಾಲುವೆಯ ಯಾವುದೇ ರೀತಿಯ ಸದ್ಬಳಕೆ ಆಗುತ್ತಿಲ್ಲ. ರೈತರು ಕಾಲುವೆಗಾಗಿ ಅಪಾರ ಪ್ರಮಾಣದ ಭೂಮಿಯನ್ನು ಕಳೆದುಕೊಂಡಿರುತ್ತಾರೆ. ಆದರೂ ಉಳಿದ ಅಲ್ಪ ಜಮೀನಿನಲ್ಲಿ ಬೆಳೆ ಬೆಳೆಯಲು ನೀರು ಸಿಗುತ್ತಿಲ್ಲ ಜಾನುವಾರುಗಳಿಗೂ ನೀರಿನ ತೊಂದರೆ ಇದೆ. ಈಗಾಗಲೇ ರೈತರು ಇಲಾಖೆಗೆ ಮಾ.೧೯ ರಂದು ಪ್ರಾಯೋಗಿಕವಾಗಿ ನೀರು ಹರಿಸಿದಾಗ ತೊಂದರೆಗೊಳಗಾದ ರೈತರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಯಾವುದೇ ಕ್ರಮ ಅಧಿಕಾರಿಗಳು ಜರುಗಿಸದಿದ್ದಾಗ ನಮ್ಮ ಜಯ ಕರ್ನಾಟಕ ಸಂಘಟನೆ ತಾಳಿಕೋಟಿ ತಾಲೂಕು ಘಟಕ ಅಧ್ಯಕ್ಷರನ್ನು ರೈತರು ಸಂಪರ್ಕಿಸಿ ವಿಷಯ ತಿಳಿಸಿದಾಗ ಸೂಕ್ತಕ್ರಮಕ್ಕೆ ಜೂ.೧೨ ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಇರುತ್ತದೆ. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಮತ್ತು ಅಧಿಕಾರಿಗಳಿಗೆ ನೀಡಿರುವ ಕಾಲಾವಧಿ ಮುಗಿದಿದ್ದರಿಂದ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನೂರಾರು ರೈತರು ಆಲಮಟ್ಟಿಯ ಪೋಸ್ಟ್ ಆಫೀಸ್ ಸರ್ಕಲ್‌ದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ ಪಾದಯಾತ್ರೆ ಮೂಲಕ ಬಂದು ಧರಣಿಯನ್ನು ನಡೆಸುವ ಅನಿವಾರ್ಯತೆ ಬಂದಿದೆ. ಕೂಡಲೇ ಕೆಬಿಜೆಎನ್‌ಎಲ್ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿ ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಅವರು ಕಾಲುವೆಯ ಒಳ ಹರಿವಿನ ಪ್ರಮಾಣವನ್ನು ಹೆಚ್ಚಿಸಿ ಕೊನೆಯ ಗ್ರಾಮದವರೆಗೂ ನೀರು ಹರಿಯುವಂತೆ ಅಚ್ಚಾಕಟ್ಟಾದ ಕಾಮಗಾರಿಯನ್ನು ನಿರ್ವಹಿಸಬೇಕು ಎಂದು ಒತ್ತಾಯಿಸಿದರು.ಈ ಸಮಯದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಸವರಾಜ ಸಿಂಗನಹಳ್ಳಿ, ಸಂಗನಗೌಡ ಮೂಲಿಮನಿ, ಸೋಮನಗೌಡ ಆನೇಸೂರ, ನಿಂಗಪ್ಪ ನಾಗೂರ, ಬಸವರಾಜ ತಳ್ಳೊಳ್ಳಿ, ಮಲ್ಲನಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಬಸನಗೌಡ ಕೊಳೂರ, ರಾಜುಗೌಡ ಯಾತಗಿರಿ, ಕನಕರೆಡ್ಡೆಪ್ಪಗೌಡ ಕನಕರೆಡ್ಡಿ, ಸಿದ್ದನಗೌಡ ನಾವದಗಿ, ಒಳಗೊಂಡು ನೂರಾರು ರೈತರು ಇದ್ದರು.