ಕಾನ್ನಾಳ ಗ್ರಾಮದ ಬಾಂದಾರಕ್ಕೆ ಹರಿದ ಕಾಲುವೆ ನೀರು

| Published : Mar 05 2024, 01:30 AM IST

ಸಾರಾಂಶ

ಬಸವನಬಾಗೇವಾಡಿ: ಪ್ರತಿಭಟನೆ ವೇಳೆ ಅಧಿಕಾರಿಗಳು ನೀಡಿದ ಭರವಸೆಯಂತೆ ತಾಲೂಕಿನ ಕಾನ್ನಾಳ ಗ್ರಾಮದ ಬಾಂದಾರಕ್ಕೆ ಮುಳವಾಡ ಏತನೀರಾವರಿ ಯೋಜನೆಯ ಸಂಕನಾಳ ಮುಖ್ಯ ಕಾಲುವೆಯಿಂದ ನೀರು ಬಿಡಲು ಅಧಿಕಾರಿಗಳ ಸಮ್ಮುಖದಲ್ಲಿ ಫೈಪ್ ಲೈನ್ ಅಳವಡಿಕೆ ಮಾಡಲಾಯಿತು. ಕುಡಿಯುವ ನೀರಿನ ತಾಪತ್ರಯ, ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ. ಎರಡು ಕಿಮೀ ಅಂತರದಲ್ಲಿರುವ ಈ ಕಾಲುವೆಯಿಂದ ಗ್ರಾಮದ ಬಾಂದಾರಕ್ಕೆ ನೀರು ಬಿಟ್ಟರೆ ಗ್ರಾಮದಲ್ಲಿ ಅಂತರ್ಜಲ ಮಟ್ಟಕ್ಕೆ ಪೂರಕವಾಗುತ್ತದೆ.

ಬಸವನಬಾಗೇವಾಡಿ:

ಪ್ರತಿಭಟನೆ ವೇಳೆ ಅಧಿಕಾರಿಗಳು ನೀಡಿದ ಭರವಸೆಯಂತೆ ತಾಲೂಕಿನ ಕಾನ್ನಾಳ ಗ್ರಾಮದ ಬಾಂದಾರಕ್ಕೆ ಮುಳವಾಡ ಏತನೀರಾವರಿ ಯೋಜನೆಯ ಸಂಕನಾಳ ಮುಖ್ಯ ಕಾಲುವೆಯಿಂದ ನೀರು ಬಿಡಲು ಅಧಿಕಾರಿಗಳ ಸಮ್ಮುಖದಲ್ಲಿ ಫೈಪ್ ಲೈನ್ ಅಳವಡಿಕೆ ಮಾಡಲಾಯಿತು. ಕುಡಿಯುವ ನೀರಿನ ತಾಪತ್ರಯ, ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ. ಎರಡು ಕಿಮೀ ಅಂತರದಲ್ಲಿರುವ ಈ ಕಾಲುವೆಯಿಂದ ಗ್ರಾಮದ ಬಾಂದಾರಕ್ಕೆ ನೀರು ಬಿಟ್ಟರೆ ಗ್ರಾಮದಲ್ಲಿ ಅಂತರ್ಜಲ ಮಟ್ಟಕ್ಕೆ ಪೂರಕವಾಗುತ್ತದೆ. ಕಾಲುವೆಯಿಂದ ನೀರು ಬಿಡಬೇಕೆಂದು ಆಗ್ರಹಿಸಿ ರಾಜ್ಯ ಬಿಜ್ಜಳ ಹೆದ್ದಾರಿ ಬಂದ್ ಮಾಡಿ ನೀರು ಬಿಡುವಂತೆ ಆಗ್ರಹಿಸಿದ್ದರು. ಈ ಕಾಲುವೆಯಿಂದ 10 ಇಂಚ್ ಪೈಪ್ ಲೈನ್ ಮೂಲಕ ನೀರು ಬಿಡುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂಪಡೆದುಕೊಂಡಿದ್ದರು.

ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೆಬಿಜೆಎನ್‌ಎಲ್ ಅಧಿಕಾರಿಗಳಾದ ಜಗದೀಶ ಹೊನ್ನಕಸ್ತೂರಿ, ಎನ್.ಎಸ್.ನರಸನಗೌಡರ, ಬಿ.ಟಿ.ದೊಡಮನಿ, ಪಿಐ ವಿಜಯಕುಮಾರ ಮರಗುಂಡಗಿ ಸಮ್ಮುಖದಲ್ಲಿ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕಾಲುವೆಯಿಂದ ಗ್ರಾಮದ ಬಾಂದಾರದವರೆಗೂ ನೆಲ ಅಗೆದು ಪೈಪ್ ಅಳವಡಿಕೆಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಾಡಳಿತಾಧಿಕಾರಿ ಸಂತೋಷ ಕುಂಟೋಜಿ, ರಮಾನಂದ ಚಕ್ಕಡಿ, ಪೊಲೀಸ್ ಸಿಬ್ಬಂದಿ ಇತರರು ಇದ್ದರು.

ಬಾಂದಾರಕ್ಕೆ ನೀರು ಬಿಡುವಂತೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬಳಿಕ ಅಧಿಕಾರಿಗಳು ಎಚ್ಚೆತ್ತಿದ್ದು, ನೀರು ಬಿಡುವ ಭರವಸೆ ನೀಡಿದ್ದರು. ಅದರಂತೆ ಕಾಲುವೆಯಿಂದ ನೀರು ಸೋಮವಾರ ಬಾಂದಾರಕ್ಕೆ ಬಂದು ತಲುಪಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ.