ಸಾರಾಂಶ
ಹೊಸಪೇಟೆ: ಇಲ್ಲಿ ಮಳೆಯೂ ಆಗಿಲ್ಲ, ಕೆರೆ ಒಡೆದು ಕೋಡಿಯೂ ಬಿದ್ದಿಲ್ಲ. ಆದರೂ ನಗರದ ಹೃದಯ ಭಾಗದ ಮೂರಂಗಡಿ ವೃತ್ತದಲ್ಲಿ ನೀರು ನಿರಂತರವಾಗಿ ಹರಿಯುತ್ತಿದೆ.ದೀಪಾವಳಿ ಹಬ್ಬದಿಂದ ಆರಂಭಗೊಂಡಿರುವ ಮಳೆ ಹರಿದಾಟದ ಪ್ರವಾಹ ಇನ್ನು ನಿಂತಿಲ್ಲ. ಜನರು ಮಾತ್ರ ಅದೇ ನೀರಿನಲ್ಲೆ ನಿತ್ಯವೂ ತಿರುಗಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ನಗರದ ಬಸವಣ್ಣ ಕಾಲುವೆಗೆ ತುಂಗಭದ್ರಾ ಜಲಾಶಯದಿಂದ ನೀರು ಬಿಡಲಾಗುತ್ತಿದೆ. ಈ ಕಾಲುವೆಯ ನೀರು ರಸ್ತೆಗೆ ಹರಿದು ಹೋಗುತ್ತಿದೆ. ನಗರಸಭೆ ತನಗೆ ಬರುವುದಿಲ್ಲ ಎಂದು ನೀರಾವರಿ ಇಲಾಖೆ ಮೇಲೆ ಸಮಸ್ಯೆ ಎತ್ತಿ ಹಾಕುತ್ತಿದೆ. ನೀರಾವರಿ ಇಲಾಖೆ ಗಮನಕ್ಕೆ ಇದ್ದರೂ ಸುಮ್ಮನಾಗುತ್ತಿದ್ದಾರೆ. ಜನರು ಮಾತ್ರ ಈ ಗಲೀಜ ನೀರು ದಾಟಿಯೇ ತೆರಳುವಂತ ಸ್ಥಿತಿ ಇದೆ.ಬಸವಣ್ಣ ಕಾಲುವೆಯಲ್ಲಿ ಗಲೀಜು ನೀರು ಸೇರಿಕೊಳ್ಳುತ್ತಿದೆ. ಕಾಲುವೆ ಅಕ್ಕಪಕ್ಕದಲ್ಲಿರುವ ನಿವಾಸಿಗಳು, ಹೋಟೆಲ್‌ನವರು, ಅಂಗಡಿಯವರು ಕೂಡ ತ್ಯಾಜ್ಯ ಬಿಸಾಡುತ್ತಿದ್ದಾರೆ. ಜೊತೆಗೆ ಚರಂಡಿ ನೀರು ಸೇರಿಕೊಳ್ಳುತ್ತಿದೆ. ಈ ಕಾಲುವೆ ನೀರು ಮೂರಂಗಡಿ ವೃತ್ತದಲ್ಲಿ ದುರ್ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗಕ್ಕೆ ಎಡೆ ಮಾಡಿಕೊಡುವ ಮುನ್ನ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.
ನಗರದ ನಿವಾಸಿಗಳು ಹಲವು ಬಾರಿ ನಗರಸಭೆ ಗಮನಕ್ಕೆ ತಂದರೂ ಸಮಸ್ಯೆಗೆ ಮಾತ್ರ ಪರಿಹಾರ ದೊರೆತಿಲ್ಲ. ನಗರಸಭೆ ನೀರಾವರಿ ಇಲಾಖೆಯತ್ತ ಬೊಟ್ಟು ಮಾಡಿದರೆ, ನೀರಾವರಿ ಇಲಾಖೆಯ ಅಧಿಕಾರಿಗಳು ಮಾತ್ರ ಈ ಸಮಸ್ಯೆಗೂ ತಮಗೂ ಸಂಬಂಧ ಇಲ್ಲದಂತೇ ತೆಪ್ಪಗಿದ್ದಾರೆ. ನಗರದ ನಿವಾಸಿಗಳು ಹಾಗೂ ಮಾರುಕಟ್ಟೆಗೆ ನಿತ್ಯ ಹಳ್ಳಿಗಳಿಂದ ಬರುವ ಜನರು ಗಲೀಜ ನೀರನ್ನು ದಾಟಿಯೇ ತೆರಳುವಂತಾಗಿದೆ. ಜಿಲ್ಲಾ ಕೇಂದ್ರದಲ್ಲೇ ಈ ಸ್ಥಿತಿ ಇದ್ದರೆ, ಇನ್ನೂ ಜಿಲ್ಲೆಯ ಉಳಿದೆಡೆ ಹೇಗೆ ಎಂದು ಜನರು ಜಿಲ್ಲಾಡಳಿತದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈಗಾಗಲೇ ನೀರಾವರಿ ಇಲಾಖೆಗೆ ಈ ಸಮಸ್ಯೆ ಬಗ್ಗೆ ತಿಳಿಸಲಾಗಿದೆ. ಇದುವರೆಗೆ ಸಮಸ್ಯೆ ಬಗೆಹರಿಸಿಲ್ಲ ಎಂದರೆ ಲಿಖಿತ ರೂಪದಲ್ಲಿ ಪತ್ರ ಬರೆದು ತಿಳಿಸಲಾಗುವುದು ಎನ್ನುತ್ತಾರೆ ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪ.
ನಗರದಲ್ಲಿ ಬಸವಣ್ಣ ಕಾಲುವೆ ನೀರು ಹರಿದಾಡುತ್ತಿದೆ. ಮೂರಂಗಡಿ ವೃತ್ತದ ಬಳಿ ತೆರಳಲು ಆಗುತ್ತಿಲ್ಲ. ಜನರು ಈ ಬಗ್ಗೆ ಹಲವು ಬಾರಿ ನಗರಸಭೆ ಗಮನಕ್ಕೂ ತಂದರೂ ಸಮಸ್ಯೆ ಪರಿಹಾರ ಆಗುತ್ತಿಲ್ಲ. ವ್ಯಾಪಾರಿಗಳು, ಗ್ರಾಹಕರು ಸೇರಿದಂತೆ ಜನರಿಗೆ ತೊಂದರೆ ಆಗಿದೆ. ಜಿಲ್ಲಾ ಕೇಂದ್ರದಲ್ಲೇ ಈ ಸ್ಥಿತಿ ಇದ್ದರೆ ಇನ್ನು ಉಳಿದ ಕಡೆ ಹೇಗೆ ಇರಬಾರದು. ಜಿಲ್ಲೆಯಲ್ಲಿ ಆಡಳಿತವೇ ನಿಷ್ಕ್ರಿಯವಾಗಿದೆ ಎನ್ನುತ್ತಾರೆ ಹೊಸಪೇಟೆ ನಿವಾಸಿ ನವೀನ್.