ಕೆನರಾ ಬ್ಯಾಂಕ್ ವತಿಯಿಂದ ಕ್ರೀಡಾ ಪರಿಕರಗಳ ವಿತರಣೆ

| Published : Apr 17 2025, 12:04 AM IST

ಸಾರಾಂಶ

ಪ್ರಾಥಮಿಕ ಮತ್ತು ಪೌಢಶಿಕ್ಷಣ ಮಟ್ಟದಲ್ಲಿ ಸಿಎಸ್‌ಆರ್ ಆಧಾರಿತ ಕ್ರೀಡಾ ಶಿಕ್ಷಣ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮತ್ತು ಕೆನರಾ ಬ್ಯಾಂಕ್ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.

ಕನ್ನಡಪ್ರಭ ವಾರ್ತೆ ತುಮಕೂರುಪ್ರಾಥಮಿಕ ಮತ್ತು ಪೌಢಶಿಕ್ಷಣ ಮಟ್ಟದಲ್ಲಿ ಸಿಎಸ್‌ಆರ್ ಆಧಾರಿತ ಕ್ರೀಡಾ ಶಿಕ್ಷಣ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮತ್ತು ಕೆನರಾ ಬ್ಯಾಂಕ್ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ. ಈ ಸಂಬಂಧ ನಗರದ ಗೊಲ್ಲಹಳ್ಳಿಯಲ್ಲಿ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿಎಸ್‌ಆರ್ ಯೋಜನೆಯಡಿಯಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಕೆನರಾ ಬ್ಯಾಂಕಿನ ಪ್ರಾಂತೀಯ ಪ್ರಧಾನ ವ್ಯವಸ್ಥಾಪಕರಾದ ಗಂಗೇಶ್ ಗುಂಜನ್, ಗ್ರಾಮಾಂತರ ಪ್ರದೇಶದ ಶಾಲಾ ಮಕ್ಕಳಿಗೆ ಕ್ರೀಡಾ ತರಬೇತಿ, ಮಾರ್ಗದರ್ಶನ ಮತ್ತು ವಿಶೇಷ ತರಬೇತಿ ಶಿಬಿರಗಳು, ಕ್ರೀಡಾ ಅಕಾಡೆಮಿಗಳು ಮತ್ತು ಕ್ರೀಡಾಪಟುಗಳೊಂದಿಗೆ ಪಾಲುದಾರಿಕೆಯನ್ನು ಬ್ಯಾಂಕ್ ರೂಪಿಸಲಿದೆ ಎಂದರು. ಪ್ರತಿಭಾನ್ವಿತ ವ್ಯಕ್ತಿಗಳು ಕ್ರೀಡಾ ವೃತ್ತಿಜೀವನವನ್ನು ಮುಂದುವರಿಸಲು, ಕ್ರೀಡಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಬೆಳೆಸಲು ಬ್ಯಾಂಕ್ ಸಿದಾರ್ಥ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡು ಸೌಲಭ್ಯಗಳನ್ನು ನಿರ್ಮಿಸಲು, ದೈಹಿಕ ಚಟುವಟಿಕೆ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು ಕ್ರೀಡಾ ಮೂಲಸೌಕರ್ಯದ ಕೊರತೆಯನ್ನು ನೀಗಿಸುತ್ತದೆ ಎಂದು ಅವರು ಹೇಳಿದರು.ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿಯಲ್ಲಿ ಎಸ್ಸಿ ಎಸ್ಟಿ ಸಮುದಾಯ 5ರಿಂದ 10ನೇ ತರಗತಿಯ 12 ಸಾವಿರ ಹೆಚ್ಚು ಮಕ್ಕಳಿಗೆ 3 ಸಾವಿರದಿಂದ 5 ಸಾವಿರದ ತನಕ ಈಗಾಗಲೇ ರಾಜ್ಯದಲ್ಲಿ ಸಹಾಯಧನವನ್ನು ಕೆನರಾ ಬ್ಯಾಂಕ್ ನೀಡಿದೆ. ಆರ್ಥಿಕ ಸ್ವಾವಲಂಬನೆ ಮತ್ತು ಜನಸಾಮಾನ್ಯರಿಗೆ ಸವಲತ್ತುಗಳ ಸದುಪಯೋಗಕ್ಕೆ ಜನರಿಗೆ ಉಪಯುಕ್ತ ಯೋಜನೆಗಳನ್ನು ಜಾರಿಗೆ ತರುವುದಾಗಿ ಗಂಗೇಶ್ ಗುಂಜನ್ ಹೆಳಿದರು.ಸಮಾರಂಭದಲ್ಲಿ ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರರರಾದ ಡಾ.ವಿವೇಕ್ ವೀರಯ್ಯ ಮಾತನಾಡಿ, ಶಿಕ್ಷಣ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯನವರು ಗ್ರಾಮೀಣ ಪ್ರದೇಶದ ತಳ ಸಮುದಾಯದ ಜನರಿಗೆ ಶಿಕ್ಷಣ ನೀಡುವ ಹೆಬ್ಬಯಕೆಯಿಂದ ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಇಂದು ಜಾಗತಿಕ ಮನ್ನಣೆ ಪಡೆದಿದೆ ಎಂದರು.ಆರೋಗ್ಯ, ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಇನ್ನಷ್ಟು ಪ್ರಗತಿದಾಯಕ ಯೋಜನೆಗಳನ್ನು ಗ್ರಾಮೀಣ ಪ್ರದೇಶ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದು, ಅಂತಹ ತಳ ಸಮುದಾಯದ ಮಕ್ಕಳಿಗೆ ಸಿಎಸ್‌ಆರ್ ಆಧಾರಿತ ಯೋಜನೆಗಳನ್ನು ಮುಂದುವರಿಸುವಂತೆ ಕೆನರಾ ಬ್ಯಾಂಕಿನ ಅಧಿಕಾರಿಗಳಲ್ಲಿ ಮನವಿ ಮಾಡಿದರು.ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಬಿ. ನಂಜುಂಡಪ್ಪ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ್, ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಸಂಯೋಜಕರಾದ ದಯಾನಂದ, ಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ, ದೇವರಾಜು, ಡಿಇಡಿ ಕಾಲೇಜಿನ ಪ್ರಾಂಶುಪಾಲರಾದ ಈಶ್ವರಪ್ಪ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.ಗೊಲ್ಲಹಳ್ಳಿಯಲ್ಲಿ ಶ್ರೀ ಸಿದ್ದಾರ್ಥ ಪ್ರಾಥಮಿಕ ಮತ್ತು ಪ್ರೌಢಾಶಾಲಾ ಮಕ್ಕಳಿಗೆ ವಿವಿಧ ರೀತಿಯ ಕ್ರೀಡಾಸಾಮಾಗ್ರಿಗಳನ್ನು ಇದೇ ವೇಳೆ ವಿತರಿಸಲಾಯಿತು.