15ರಂದು ಮಹಿಳೆಯರಿಂದ ಪೊರಕೆ ಹಿಡಿದು ಪ್ರತಿಭಟನೆ

| Published : Feb 12 2024, 01:33 AM IST

ಸಾರಾಂಶ

ವ್ಯವಸ್ಥಾಪಕ ವೆಂಕಟೇಶ ಮಜ್ಜಿಗುಡ್ಡಾ ಅವರನ್ನು ಕೇವಲ ಅಮಾನತು ಮಾಡಲಾಗಿದೆ. ಆದರೆ ಇನ್ನು ಪೊಲೀಸ್ ಪ್ರಕರಣ ಬ್ಯಾಂಕಿನಿಂದ ದಾಖಲಿಸಿಲ್ಲ. ಕೆನರಾ ಬ್ಯಾಂಕ ಈ ಬಗ್ಗೆ ನೀರ್ಲಕ್ಷ್ಯ ಧೋರಣೆ ತಳೆದಿರುವದು ನಮ್ಮಲ್ಲಿ ಆತಂಕ ಹಾಗೂ ಅಸಮಾಧಾನ ತಂದಿದೆ

ಅಂಕೋಲಾ: ಸ್ತ್ರೀ ಶಕ್ತಿಗಳಿಗೆ ಸಾಲ ನೀಡಿ ಅದನ್ನು ಸಂಘದವರು ಮರು ಪಾವತಿ ಮಾಡಿದರೂ ಸಹ ದಾಖಲೆಗಳಲ್ಲಿ ನಮೂದಿಸದೇ ಕೆನರಾ ಬ್ಯಾಂಕನಿಂದ ನಾವು ಮೋಸಕ್ಕೆ ಒಳಗಾಗಿದ್ದೇವೆ. ಈ ಹಿನ್ನೆಲೆಯಲ್ಲಿ ವಂಚನೆಗೆ ಒಳಗಾದ ಸ್ತ್ರೀಶಕ್ತಿ ಸಂಘಗಳ ನೂರಾರು ಮಹಿಳೆಯರು ಪೊರಕೆ ಹಿಡಿದು ಫೆ. 15ರಂದು ಕೆನರಾ (ಸಿಂಡಿಕೇಟ್) ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ವಂಚನೆಗೆ ಒಳಗಾದ ಸ್ತ್ರೀಶಕ್ತಿ ಸಂಘಗಳ ಪ್ರಮುಖರು ತಿಳಿಸಿದ್ದಾರೆ.

ಸುಮಾರು 75 ಸ್ವ-ಸಹಾಯಗಳಿಗೆ ಪಟ್ಟಣದ ಸಿಂಡಿಕೇಟ್ (ಕೆನರಾ) ಬ್ಯಾಂಕ್‌ನಲ್ಲಿ ಅನ್ಯಾಯವಾಗಿದೆ. ಕಳೆದ 2023 ರ ಜನವರಿಯಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ನಮಗಾದ ಅನ್ಯಾಯ ಸರಿ ಪಡಿಸಿಕೊಡಿ ಎಂದು ಕಾರವಾರದ ರಿಜನಲ್‌ ಕಚೇರಿಗೆ ತೆರಳಿ ಪ್ರತಿಭಟಿಸಿದ್ದೇವು. ಆದರೆ ಇನ್ನು ಪ್ರಕರಣದಲ್ಲಿ ಭಾಗಿಯಾದ ವ್ಯವಸ್ಥಾಪಕ ವೆಂಕಟೇಶ ಮಜ್ಜಿಗುಡ್ಡಾ ಅವರ ಮೇಲೆ ಬ್ಯಾಂಕಿನಿಂದ ಎಎಫ್ಆರ್ ದಾಖಲಿಸದೆ ಜಾಣ ಮೌನ ವಹಿಸಿದ್ದಾರೆ. ಇದರಿಂದ ನಮಗೆ ತೀವ್ರ ತೊಂದರೆ ಆಗಿದೆ.

ವ್ಯವಸ್ಥಾಪಕ ವೆಂಕಟೇಶ ಮಜ್ಜಿಗುಡ್ಡಾ ಅವರನ್ನು ಕೇವಲ ಅಮಾನತು ಮಾಡಲಾಗಿದೆ. ಆದರೆ ಇನ್ನು ಪೊಲೀಸ್ ಪ್ರಕರಣ ಬ್ಯಾಂಕಿನಿಂದ ದಾಖಲಿಸಿಲ್ಲ. ಕೆನರಾ ಬ್ಯಾಂಕ ಈ ಬಗ್ಗೆ ನೀರ್ಲಕ್ಷ್ಯ ಧೋರಣೆ ತಳೆದಿರುವದು ನಮ್ಮಲ್ಲಿ ಆತಂಕ ಹಾಗೂ ಅಸಮಾಧಾನ ತಂದಿದೆ.

ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಮಜ್ಜಿಗಡ್ಡಾ ಅವರು ಹಣ ದುರಪಯೋಗ ಪಡಿಸಿದ ಬಗ್ಗೆ ಇಲಾಖಾ ತನಿಖೆಯಿಂದ ದೃಢಪಟ್ಟಿದೆ.ಆದರೆ ಬ್ಯಾಂಕಿನಿಂದ ನಮಗೆ ಮಾತ್ರ ಇನ್ನು ತನಕ ನ್ಯಾಯ ಸಿಕ್ಕಿಲ್ಲ. ನಾವು ನಮ್ಮ ಜೀವನಕ್ಕಾಗಿಯೋ ಅಥವಾ ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ಬೇರಡೆ ಸಾಲ ಮಾಡಲು ತೆರಳಿದರೆ ಲಕ್ಷಾಂತರ ಸಾಲ ಇರುವದಾಗಿ ನಮ್ಮ ದಾಖಲೆಗಳಲ್ಲಿ ತೋರಿಸುತ್ತದೆ.

ಈ ಪ್ರಕರಣ ಕೆನರಾ ಬ್ಯಾಂಕಿನವರು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆಯೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಪ್ರಕರಣ ನಡೆದು ಒಂದು ವರ್ಷ ಕಳೆಯುತ್ತ ಬಂದಿದೆ. ಈ ಬಗ್ಗೆ ಕೆನರಾ ಬ್ಯಾಂಕಗೆ ಸುತ್ತಾಡಿ ಸುತ್ತಾಡಿ ಸುಸ್ತಾಗಿ ಹೋಗಿದ್ದೇನೆ. ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಮಗೆ ಕೆನರಾ ಬ್ಯಾಂಕಿನಿಂದ ಆದ ಅನ್ಯಾಯದ ವಿರುದ್ಧ ಪೊರಕೆ ಹಿಡಿದು ನೂರಾರು ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ.

ಈ ವೇಳೆ ನಾಗಮಣಿ ಸ್ವ-ಸಹಾಯ ಸಂಘ, ಭಾರತ ಸ್ತ್ರೀ ಶಕ್ತಿ ಸ್ವಹಾಯ ಸಂಘ, ಶ್ರೀ ಗಣೇಶ ಸ್ವ-ಸಹಾಯ ಸಂಘ, ಚಾಂದ್ ಸ್ವ-ಸಹಾಯ ಸಂಘ, ಬಿಸ್ಮಿಲ್ಲಾ ಸ್ವ-ಸಹಾಯ ಸಂಘ, ನಬಿಯಾ ಸ್ವ-ಸಹಾಯ ಸಂಘ, ಬಿಲಾಲ ಸ್ವ-ಸಹಾಯ ಸಂಘ, ಮಹಾಲಕ್ಷ್ಮೀ ಸ್ವ-ಸಹಾಯ, ನಾಗವಲ್ಲಿ ಬಿಲಾಲ ಸ್ವ-ಸಹಾಯ ಸಂಘ, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.