ಕೆನರಾ ಬ್ಯಾಂಕ್‌ ಕಳ್ಳತನ; ಮತ್ತೆ 12 ಬಂಧನ

| N/A | Published : Jul 12 2025, 12:32 AM IST / Updated: Jul 12 2025, 11:47 AM IST

ಸಾರಾಂಶ

 ನಿಷ್ಕರ್ಷ ಚಿತ್ರದ ಮಾದರಿಯಲ್ಲಿ ಕಳೆದ ಮೇ 25ರಂದು ಮನಗೂಳಿಯಲ್ಲಿ ನಡೆದ ಕೆನರಾ ಬ್ಯಾಂಕ್‌ ಲೂಟಿ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ಶಶಿಕಾಂತ ಮೆಂಡೆಗಾರ

 ವಿಜಯಪುರ :  ನಿಷ್ಕರ್ಷ ಚಿತ್ರದ ಮಾದರಿಯಲ್ಲಿ ಕಳೆದ ಮೇ 25ರಂದು ಮನಗೂಳಿಯಲ್ಲಿ ನಡೆದ ಕೆನರಾ ಬ್ಯಾಂಕ್‌ ಲೂಟಿ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಬ್ಯಾಂಕ್‌ ಸಿಬ್ಬಂದಿ ಒತ್ತೆಯಾಳಾಗಿಸಿಕೊಂಡಿದ್ದರೇ ಇಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ಆತನ ಸ್ನೇಹಿತರೇ ಕಳ್ಳತನ ಮಾಡಿದ್ದಾರೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಕೆನರಾ ಬ್ಯಾಂಕ್ ಕಳ್ಳತನ ಸೇಮ್ ಟು ಸೇಮ್ ನಿಷ್ಕರ್ಷ ಚಿತ್ರದಂತಿದೆ. ನಮ್ಮ ದೇಶ ಅನಕ್ಷರಸ್ಥರಿಂದ ಹಾಳಾಗಿಲ್ಲ, ಅಕ್ಷರಸ್ಥರಿಂದ ಹಾಳಾಗಿದೆ ಎಂಬ ಮಾತಿನಂತೆ ಆರೋಪಿಗಳೆಲ್ಲ ಡಿಪ್ಲೋಮಾ, ಡಬಲ್ ಡಿಗ್ರಿ, ಡಾಕ್ಟರೇಟ್ ಮಾಡಿದವರಿದ್ದಾರೆ. ಆರೋಪಿಗಳು ಪ್ರಮುಖ ಹುದ್ದೆಗಳಲ್ಲಿದ್ದವರೇ ಹಣದಾಸೆಗೆ ಕಳ್ಳರಾಗಿದ್ದು ಇಲ್ಲಿ ಕಂಡುಬಂದಿದೆ. ಬ್ಯಾಂಕ್ ಸೀನಿಯರ್ ಮ್ಯಾನೇಜರ್, ಮೂವರು ರೇಲ್ವೆ ಇಲಾಖೆ ನೌಕರರು, ಶಿಕ್ಷಕ, ವಾಹನ ಚಾಲಕರು ಸೇರಿ ಥೇಟ್ ಸಿನೆಮಾದಂತೆಯೇ ಲಾರಿ, ಕಾರು, ಬೈಕ್‌ಗಳನ್ನು ಬಳಸಿ ಕಳ್ಳತನ ಮಾಡಿದ್ದಾರೆ.

ವಿಶ್ವಾಸ ಉಳಿಸಿಕೊಂಡ ಖಾಕಿಗಳು.

ಕಳ್ಳರನ್ನು ಹಿಡಿಯುತ್ತೇವೆ ಎಂದು ಭರವಸೆ ನೀಡಿದ್ದ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಕಳ್ಳರ ಹೆಡೆಮುರಿ ಕಟ್ಟಿದೆ. ಹೆಚ್ಚುವರಿ ಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿಗಳಾದ ತುಳಜಪ್ಪ ಸುಲ್ಫಿ, ಸುನೀಲ ಕಾಂಬಳೆ, ಬಲ್ಲಪ್ಪ ನಂದಗಾವಿ, ಸಿಪಿಐಗಳಾದ ರಮೇಶ ಅವಜಿ, ಗುರುಶಾಂತ ದಾಶ್ಯಾಳ, ಅಶೋಕ ಚವ್ಹಾಣ ಹಾಗೂ ಪಿಎಸ್‌ಐಗಳ ನೇತೃತ್ವದಲ್ಲಿ 100ಕ್ಕು ಅಧಿಕ ಸಿಬ್ಬಂದಿಗಳುಳ್ಳ 8 ತಂಡಗಳನ್ನು ರಚಿಸಿ ಕಾರ್ಯಾಚರಣೆ ಮಾಡಲಾಗಿದೆ.

ಬಂಧಿತ ಆರೋಪಿಗಳು:

ಕಳೆದ ತಿಂಗಳು ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ ಮಿರಿಯಾಲ್, ಆತನ ಸ್ನೇಹಿತ ಚಂದ್ರಶೇಖರ ನರೇಲಾ ಹಾಗೂ ಸುನೀಲ ಮೋಕಾನನ್ನು ಬಂಧಿಸಲಾಗಿತ್ತು. ಇದೀಗ ಬಾಲರಾಜ ಯರಿಕುಲಾ, ಗುಂಡು ಜೋಸೆಫ್, ಚಂದನರಾಜ ಪಿಳೈ, ಇಜಾಜ್ ಧಾರವಾಡ, ಪೀಟರ್ ಜಯಚಂದ್ರಪಾಲ್, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ, ಮೊಹಮ್ಮದ ಆಸೀಫ್ ಕಲ್ಲೂರ, ಅನೀಲ ಮಿರಿಯಾಲ, ಅಬು ಯಶ್‌ಮಾಲಾ, ಸೋಲೋಮನ ವೆಸ್ಲಿ ಪಲುಕುರಿ, ಮರಿಯಾದಾಸ ಗೋನಾ ಬಂಧಿತರು. ಇನ್ನೂ ಮೂರ್ನಾಲ್ಕು ಜನರ ಬಂಧನ ಸಾಧ್ಯತೆ ಇದೆ.

ಒಟ್ಟು 39.26 ಕೋಟಿ ಜಪ್ತಿ:

ಇದೀಗ ಶೇ. 85ರಷ್ಟು ವಸ್ತುಗಳನ್ನು ರಿಕವರಿ ಮಾಡಿದ್ದು, ಕೇವಲ ಶೇ15 ಬಾಕಿ ಇದೆ. ಕಳ್ಳತನವಾಗಿದ್ದ ಚಿನ್ನದ ಗ್ರಾಸ್ ವೇಟ್ 58 ಕೆಜಿ ಇದ್ದು, ಅದರ ನೆಟ್ ವೇಟ್ 40 ಕೆಜಿ ಇದೆ. ಮೊದಲು ಬಂಧಿತರಾಗಿದ್ದ ಆರೋಪಿಗಳಿಂದ ₹ 10.5 ಕೋಟಿ ಮೌಲ್ಯದ ಬಂಗಾರ ಹಾಗೂ ₹ 5 ಲಕ್ಷ ಹಣ ವಶಕ್ಕೆ ಪಡೆಯಲಾಗಿತ್ತು. ಈಗ ಬಂಧಿತರಾದ ಮತ್ತೆ 12 ಆರೋಪಿಗಳಿಂದ 29 ಕೆಜಿ ಬಂಗಾರ ಹಾಗೂ ₹1.16 ಕೋಟಿ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ಪ್ರಕರಣದಲ್ಲಿ ಈವರೆಗೆ 15 ಜನರನ್ನ ಬಂಧಿಸಿದ್ದು, 39 ಕೆಜಿ ಬಂಗಾರ ಹಾಗೂ ಆಭರಣ, 1.16 ಕೋಟಿ ನಗದು ಹಾಗೂ ವಾಹನಗಳು ಮೌಲ್ಯ ಸೇರಿ ಒಟ್ಟು 39.26 ಕೋಟಿ ವಶಕ್ಕೆ ಪಡೆದಂತಾಗಿದೆ.ಎರಡು ಇನೋವಾ ಸೇರಿ 5 ಕಾರು ಹಾಗೂ ರೇಲ್ವೆ ಇಲಾಖೆ ಲಾರಿ, ಬಂಗಾರ ಕರಗಿಸುವ ಸಾಧನಗಳು, ಗ್ಯಾಸ್ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್, ನಾಲ್ಕು ವಾಕಿಟಾಕಿಗಳು, ಪಿಸ್ತೂಲ್ ಮಾದರಿಯ ನಕಲಿ ಲೈಟರ್ ವಶಕ್ಕೆ ಪಡೆಯಲಾಗಿದೆ.

ಕದ್ದ ಹಣ ಕ್ಯಾಸಿನೋಗೆ ಬಳಕೆ

ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರ ನೆರೆಲ್ಲಾ ಎಂಬಾತ ಕ್ಯಾಸಿನೋ ವ್ಯಸನಿಯಾಗಿದ್ದು, ಆತನಿಂದಾಗಿ ಸಹಚರರೆಲ್ಲರೂ ಸಾಕಷ್ಟು ಹಣವನ್ನು ಕ್ಯಾಸಿನೋಗೆ ಸುರಿದಿದ್ದರು. ಈ ಹಿಂದೆ ಗೋವಾ, ಸಿಂಗಪೂರ, ಶ್ರೀಲಂಕಾ ಸೇರಿದಂತೆ ಅನೇಕ ಕಡೆ ಕೋಟ್ಯಾಂತರ ಹಣವನ್ನು ಕ್ಯಾಸಿನೋಗೆ ಸುರಿದಿದ್ದಾರೆ. ಹಾಗಾಗಿ ಕೆನರಾ ಬ್ಯಾಂಕ್‌ನಿಂದ ಕದ್ದ 1.16 ಕೋಟಿ ಹಣವನ್ನೂ ಸಹ ಗೋವಾದ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೋದಲ್ಲಿ ಡೆಪಾಸಿಟ್ ಮಾಡಿದ್ದರು. ಪೊಲೀಸರು ಆ ಹಣ ಸೇರಿ ಒಟ್ಟು 39.26 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರತಿ ವರ್ಷ ಸರಾಸರಿ ಜಿಲ್ಲೆಯಲ್ಲಿ ₹ 7ರಿಂದ 8 ಕೋಟಿ ಮೌಲ್ಯದ ವಸ್ತುಗಳು ಕಳ್ಳತನ ಆಗುತ್ತಿತ್ತು. ಆದರೆ ಒಂದೇ ಪ್ರಕರಣದಲ್ಲಿ 50 ಕೋಟಿಗೂ ಅಧಿಕ ಕಳ್ಳತನ ಆಗಿದ್ದರಿಂದ ಜಿಲ್ಲೆ ಸೇರಿ ರಾಜ್ಯದ ಜನರೇ ಬೆಚ್ಚಿ ಬಿದ್ದಿದ್ದರು.ಕೋಟ್...

ಮೂರು ತಿಂಗಳು ಪ್ಲಾನ್ ಮಾಡಿ ಮಾಡಿದ್ದ ಅತಿದೊಡ್ಡ ಬ್ಯಾಂಕ್ ಕಳ್ಳತನವನ್ನು ಪೊಲೀಸರ ತಂಡ ಒಂದೇ ತಿಂಗಳಲ್ಲಿ ಹೆಡೆಮುರಿ ಕಟ್ಟಿದೆ. ಮೊದಲು ಮೂವರು ಇದೀಗ ಮತ್ತೆ 12 ಸೇರಿ ಒಟ್ಟು 15 ಆರೋಪಿಗಳ ಬಂಧಿಸಲಾಗಿದೆ. ಮೊದಲು ₹ 12.75ಕೋಟಿ ವಸ್ತುಗಳ ರಿಕವರಿ ಆಗಿತ್ತು. ಇದೀಗ ಮೆಲ್ಟೆಡ್ ಗೋಲ್ಡ್, ಉಳಿದ ಚಿನ್ನಾಭರಣ, ನಗದು ಸೇರಿ ಒಟ್ಟು ₹ 39.26ಕೋಟಿ ಮೌಲ್ಯದ ವಸ್ತುಗಳನ್ನು ರಿಕವರಿ ಮಾಡಲಾಗಿದೆ. ದೂರು ಕೊಡುವಾಗ 58 ಕೆಜಿ ಎಂದು ದೂರು ದಾಖಲಾಗಿತ್ತು, ಬಳಿಕ ಪರಿಶೀಲನೆ ನಡೆಸಿದಾಗ 40.7ಕೆಜಿ ಬಂಗಾರ ಹೋಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಚೇತನಸಿಂಗ್ ರಾಠೋಡ, ಉತ್ತರ ವಲಯ ಐಜಿಪಿ.

ಡೂಪ್ಲಿಕೇಟ್ ಕೀ ಬಳಸಿ ಮಾಡಿದ್ದ ಕಳ್ಳತನದ ಬಂಗಾರವನ್ನು ಕರಗಿಸಿದ್ದರು. ಕಳ್ಳತನ ಮಾಡಿದ ಆರೋಪಿಗಳೆಲ್ಲರೂ ಹುಬ್ಬಳ್ಳಿಯವರಾಗಿದ್ದು, ತಂಡದಲ್ಲಿ ಸಿಸಿಟಿವಿ ಹ್ಯಾಕರ್, ಎಲೆಕ್ಟ್ರಿಶಿಯನ್, ಕಂಪ್ಯೂಟರ್ ಪರಿಣಿತರು ಇದ್ದಾರೆ. ಬ್ಯಾಂಕ್ ಬಗ್ಗೆ ಎಲ್ಲ ತಿಳಿದುಕೊಳ್ಳಲು ಆಗಾಗ ಬಂದು ಇದೇ ಬ್ಯಾಂಕ್ ನಲ್ಲಿ ಹತ್ತು ಲಕ್ಷ ಲೋನ್ ತೆಗೆದುಕೊಂಡಿದ್ದಾರೆ. ಕಳ್ಳತನದ ವೇಳೆ ಹೈಟೆಕ್ ವಾಕಿಟಾಕಿಗಳನ್ನೂ ಸಹ ಬಳಸಿದ್ದಾರೆ. ಈಗಾಗಲೇ 15 ಆರೋಪಿಗಳನ್ನು ಬಂಧಿಸಲಾಗಿದೆ.

-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ.

Read more Articles on