ಬೆಳಗಿನ ಜಾವ ನಾಲ್ಕು ಗಂಟೆಗೆಲೇ ಮದ್ಯ ಮಾರಾಟ ಆರಂಭವಾಗಿ, ರಾತ್ರಿ ಹನ್ನೆರಡು ಗಂಟೆಯಾದರೂ ನಿಲ್ಲೋಲ್ಲ. ಇಡೀ ಮಂಗಾಪುರ ಗ್ರಾಮವೇ ಮದ್ಯ ಪ್ರದೇಶದಂತಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ಮಾಲೂರುಮಂಗಾಪುರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣವೇ ಸಂಪೂರ್ಣವಾಗಿ ನಿಲ್ಲಿಸಬೇಕು. ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳನ್ನು ಸೀಜ್ ಮಾಡಿ ಮದ್ಯ ಸರಬರಾಜು ಮಾಡುವ ಬಾರ್‌ಗಳ ಪರವಾನಗಿ ರದ್ದುಪಡಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ತಾಲೂಕಿನ ಆಲೇರಿಯಲ್ಲಿ ತಾಲೂಕು ಆಡಳಿತದ ನಡೆ ಗ್ರಾಮದ ಕಡೆ ಸಾರ್ವಜನಿಕರ ಕುಂದುಕೊರೆತೆಗಳ ಸಭೆಯಲ್ಲಿ ಮಾತನಾಡಿದರು.ಮಂಗಾಪುರದ ಮಹಿಳೆಯರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುವ ಕುರಿತು ಶಾಸಕ ನಂಜೇಗೌಡರ ಗಮನಕ್ಕೆ ತಂದರಲ್ಲದೆ ಫೋನ್ ಮಾಡಿದರೆ ಮದ್ಯ ಮನೆಗೆ ತಂದು ಕೊಡುತ್ತಾರೆ, ಬೆಳಗಿನ ಜಾವ ನಾಲ್ಕು ಗಂಟೆಗೆಲೇ ಮದ್ಯ ಮಾರಾಟ ಆರಂಭವಾಗಿ, ರಾತ್ರಿ ಹನ್ನೆರಡು ಗಂಟೆಯಾದರೂ ನಿಲ್ಲೋಲ್ಲ. ಇಡೀ ಮಂಗಾಪುರ ಗ್ರಾಮವೇ ಮದ್ಯ ಪ್ರದೇಶದಂತಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.ಮನವಿಗೆ ಸ್ಪಂದಿಸಿ ಶಾಸಕರು ಸ್ಥಳದಲ್ಲಿದ್ದ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳನ್ನು ಕರೆಯಿಸಿದಾಗ, ನೆರೆದಿದ್ದ ಮಹಿಳೆಯರು ಹಾಗೂ ಗ್ರಾಮಸ್ಥರು “ಪೊಲೀಸರಿಂದ ಏನೂ ಆಗಲ್ಲ, ಬಂದವರಿಗೆ ಎರಡು ಸಾವಿರ ರು. ಕೊಟ್ಟರೆ ಸುಮ್ಮನೆ ಹೋಗುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಶಾಸಕರು ತಕ್ಷಣವೇ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಕರೆದು, ಯಾವುದೇ ಕಾರಣಕ್ಕೂ ಇನ್ನು ಮುಂದೆ ಗ್ರಾಮಗಳಲ್ಲಿ ಮದ್ಯ ಮಾರಾಟ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಕುಟುಂಬಗಳು ನಾಶವಾಗುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ಜೀವನ ದುಸ್ತರವಾಗುತ್ತಿದೆ. ಇದನ್ನು ಹೀಗೆ ಮುಂದುವರೆಸಿದರೆ ಮಹಿಳೆಯರ ಶಾಪ ತಟ್ಟುತ್ತದೆ, ಅವರ ನೋವನ್ನು ನಿವಾರಿಸಬೇಕೆಂದು ಹೇಳಿದರು.