ಹುಬ್ಬಳ್ಳಿ:
ಗ್ಯಾರಂಟಿ ಯೋಜನೆ ರದ್ದುಪಡಿಸಿ, ಶಾಸಕರು, ಸಂಸದರ, ಹಿರಿಯ ಅಧಿಕಾರಿಗಳ 6 ತಿಂಗಳ ವೇತನವನ್ನೂ ನೀಡದೇ ಅದನ್ನೆಲ್ಲ ಬರದಿಂದ ತತ್ತರಿಸಿರುವ ರೈತರಿಗೆ ಪರಿಹಾರ ನೀಡಿ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ವಿಶೇಷ ಸಭೆ ಕರೆದು ನಿರ್ಣಯ ಕೈಗೊಳ್ಳಿ!ಇದು ರಾಜ್ಯ ಸರ್ಕಾರಕ್ಕೆ ರೈತ ಸೇನಾ ಕರ್ನಾಟಕ ಆಗ್ರಹಿಸಿರುವ ಪರಿ. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ರೈತಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ, ಬರಗಾಲದಿಂದ ರೈತರು ತತ್ತರಿಸಿದ್ದು ಅವರಿಗೆ ಪರಿಹಾರ ನೀಡುವ ಮೂಲಕ ಅಭಯ ಹಸ್ತ ಚಾಚಿ ಎಂದು ಮನವಿ ಮಾಡಿದ್ದಾರೆ.
ಸರ್ಕಾರ ಒಂದು ಖಾತಾಗೆ ₹ 2500 ತಾತ್ಕಾಲಿಕ ಪರಿಹಾರ ನೀಡುವುದಾಗಿ ಘೋಷಿಸಿ ತಿಂಗಳುಗಳು ಉರುಳಿದರೂ ರೈತರ ಖಾತೆಗೆ ಹಣ ಸೇರಿಲ್ಲ. ಜತೆಗೆ ಈ ಪರಿಹಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಆಗಿದ್ದು ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ ಕೆಲ ದಿನ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಅದೇ ಹಣವನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಲಾಗಿದೆ.6 ತಿಂಗಳ ವೇತನ ಬಿಡಿ:
ರಾಜ್ಯದಲ್ಲಿ 224 ಶಾಸಕರು, 28 ಸಂಸದರು, 75 ವಿಧಾನ ಪರಿಷತ್ ಸದಸ್ಯರಿದ್ದು, ಇವರು ತಮ್ಮ ಆರು ತಿಂಗಳ ವೇತನವನ್ನು ತೆಗೆದುಕೊಳ್ಳದೆ ಅದನ್ನು ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ತಿಳಿಸಬೇಕು. ಜತೆಗೆ ಆರ್ಥಿಕ ಸಂಕಷ್ಟದಿಂದ ತತ್ತರಿಸುವ ರೈತರ ಸಾಲಮನ್ನಾಕ್ಕೂ ಬಳಸಬಹುದು. ಜನಪ್ರತಿನಿಧಿಗಳೊಂದಿಗೆ ಐಎಎಸ್, ಐಪಿಎಸ್, ಕೆಎಎಸ್, ಹೀಗೆ ಉನ್ನತ ಅಧಿಕಾರಿಗಳ 6 ತಿಂಗಳ ವೇತನವನ್ನು ಬರ ಪರಿಹಾರ ನೀಡಲು ಮನವೊಲಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಸಭೆ ಕರೆದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಪ್ಪಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ವಿಧಾನಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಅವರು ಸದನದಲ್ಲಿ ತಮ್ಮ 6 ತಿಂಗಳ ವೇತನವನ್ನು ಬರ ಪರಿಹಾರಕ್ಕೆ ಬಿಟ್ಟುಕೊಡುವುದಾಗಿ ಘೋಷಿಸಿದ್ದರು. ಅದಕ್ಕೆ ಈಗ ಪುಷ್ಟಿ ನೀಡುವಂತೆ ರೈತ ಸೇನೆ ಕೂಡ ಆಗ್ರಹಿಸುತ್ತಿದೆ. ರೈತರು ಮಳೆ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಜನಪ್ರತಿನಿಧಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ತಮ್ಮ ಆರು ತಿಂಗಳ ವೇತನ ನೀಡುವ ಮೂಲಕ ರೈತರ ಕಣ್ಣೀರು ಒರೆಸಬೇಕು. ಜತೆಗೆ ಗ್ಯಾರಂಟಿ ಯೋಜನೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ಅದೇ ಹಣವನ್ನು ನೀಡಿದರೆ ಸರ್ಕಾರವು ಆರ್ಥಿಕ ಸಂಕಷ್ಟದಿಂದ ಪಾರಾಗಲಿದೆ.
ವೀರೇಶ ಸೊಬರದಮಠ, ಅಧ್ಯಕ್ಷ, ರೈತಸೇನಾ ಕರ್ನಾಟಕ