ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿನಿಯಮ ಉಲ್ಲಂಘಿಸಿ ಎಂಆರ್‌ಪಿ ದರಕ್ಕಿಂತಲೂ ಅಧಿಕ ದರದಲ್ಲಿ ರಸಗೊಬ್ಬರ ಮಾರಾಟ ಮಾಡುತ್ತ ಅನ್ನದಾತರಿಗೆ ದ್ರೋಹ ವೆಸಗುತ್ತಿರುವ ಕೃಷಿ ಪರಿಕರ ಮಾರಾಟಗಾರರ ಪರವಾನಿಗೆ ರದ್ದುಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿ.ವೀರೇಶ್ ಆಗ್ರಹಿಸಿದರು.ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಭಾನುವಾರ ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದ ಬಿಲ್‌ಗಳನ್ನು ಪ್ರದರ್ಶಿಸಿ ಮಾತನಾಡಿದರು.ಎಮ್ಮಿಗನೂರು ಗ್ರಾಮದಲ್ಲಿ ಶ್ರೀಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್ ಮತ್ತು ಹನುಮಾನ್ ಟ್ರೇಡರ್ಸ್ ಎರಡು ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ನಿಯಮ ಉಲ್ಲಂಘಿಸಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡುವ ಮೂಲಕ ದೇಶಕ್ಕೆ ಅನ್ನ ನೀಡುವ ರೈತರಿಗೆ ಅಂಗಡಿಗಳ ಮಾಲೀಕರು ಮೋಸವೆಸಗುತ್ತಿದ್ದಾರೆ. ಕೃಷಿ ಪರಿಕರ ಮಾರಾಟ ಅಂಗಡಿಗಳಲ್ಲಿ ನಿಯಮದಂತೆ ದರ ಪಟ್ಟಿ ಪ್ರದರ್ಶಿಸಬೇಕು ಹಾಗೂ ದಾಸ್ತಾನು ಇರುವ ಕೃಷಿ ಪರಿಕರ ಪಟ್ಟಿ ಪ್ರದರ್ಶಿಸಬೇಕು. ಆದರೆ ಈ ಅಂಗಡಿಗಳಲ್ಲಿ ಇದು ಯಾವುದನ್ನೂ ಅಂಗಡಿಗಳ ಮಾಲೀಕರು ಮಾಡುವುದಿಲ್ಲ. ಈ ಕುರಿತು ರೈತರು ಪ್ರಶ್ನಿಸಿದರೆ ನಮ್ಮನ್ನೇ ಗದರುತ್ತಾರೆ. ಈ ಮೊದಲು ರೈತರಿಗೆ ವಿಶ್ವಾಸದಿಂದ ರಸಗೊಬ್ಬರ ಸೇರಿ ಕೃಷಿ ಪರಿಕರ ನೀಡುತ್ತಿದ್ದರು. ಇದೀಗ ಹೊಲ, ಗದ್ದೆ, ಮನೆ ಅಡಮಾನ ಇಡುವಂತೆ ಕೃಷಿ ಪರಿಕರ ಮಾರಾಟಗಾರರು ಒತ್ತಾಯಿಸುತ್ತಿದ್ದಾರೆ. ಈ ರೀತಿಯ ನಿಯಮ ಉಲ್ಲಂಘನೆ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ. ಅಷ್ಟೇ ಅಲ್ಲದೇ ಅಂಗಡಿಯವರ ಪರ ಮಾತಾಡಿ ತಾತ್ಸಾರ ತೋರುತ್ತಿದ್ದಾರೆ. ಈ ಕುರಿತು ಸಂಬಂಧ ಪಟ್ಟ ಇಲಾಖೆಯ ಮೇಲಾಧಿಕಾರಿಗಳು ಎಚ್ಛೆತ್ತುಕೊಂಡು ನಿಯಮ ಉಲ್ಲಂಘಿಸಿ ರಸಗೊಬ್ಬರ ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಿಗೆ ರದ್ದು ಪಡಿಸಬೇಕು ಹಾಗೂ ಕೃಷಿ ಪರಿಕರ ಮಾರಾಟಗಾರರ ಪರವಾಗಿಯೇ ಸಹಕರಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂದರ್ಭ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಖಾಸಿಂಸಾಬ್, ಎಮ್ಮಿಗನೂರು ಘಟಕ ಅಧ್ಯಕ್ಷ ಸಣ್ಣ ಜಡೆಪ್ಪ, ಪದಾಧಿಕಾರಿಗಳಾದ ಕಾಗೆ ಈರಣ್ಣ, ಅಡಿವೆಯ್ಯಸ್ವಾಮಿ, ಓ.ಎಂ. ಮಹಾಂತಸ್ವಾಮಿ, ಟಿ.ಜಡೆಪ್ಪ, ಶಿವರುದ್ರಗೌಡ, ಹರಿಜನ ಲಿಂಗಪ್ಪ, ಗುಡಿಸಲು ರಾಜಾಸಾಬ್, ಅಲ್ಲಾಸಾಬ್, ವೀರೇಶಗೌಡ್ರು, ಎಚ್.ಮಲ್ಲಯ್ಯ ಸೇರಿ ರೈತರಿದ್ದರು.