ಕನಕಗಿರಿ: ವಿಬಿಜಿ ರಾಮ್ ಜಿ ಯೋಜನೆ ರದ್ದುಪಡಿಸಿ ನರೇಗಾ ಯೋಜನೆ ಮರುಸ್ಥಾಪಿಸುವ ಮೂಲಕ ಕೂಲಿಕಾರರಿಗೆ ಕೆಲಸ ನೀಡುವುದು ಸೇರಿ ಇತರೇ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ಇಲ್ಲಿನ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಾಪಂ ಇಒ ರಾಜಶೇಖರಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಹಿರಿಯ ಉಪಾಧ್ಯಕ್ಷ ಎಚ್.ಗಂಗಾಧರಯ್ಯ ಮಾತನಾಡಿ, ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ವಿಬಿಜಿ ರಾಮ್ ಜಿ ಯೋಜನೆಯ ಹೆಸರನ್ನೇ ಕೂಲಿ ಕಾರ್ಮಿಕರಿಗೆ ಹೇಳಲು ಆಗುವುದಿಲ್ಲ. ಈ ಯೋಜನೆ ಮೂಗಿಗೆ ತುಪ್ಪ ಸವರುವ ಕೆಲಸ. ನರೇಗಾ ಯೋಜನೆಯಡಿ ಕೃಷಿ ಕೂಲಿಕಾರರಿಗೆ ಉದ್ಯೋಗ ನೀಡಲು ವಿಳಂಬ ಮಾಡುತ್ತಿರುವ ಧೋರಣೆ ಖಂಡನೀಯ. ಈ ವರ್ಷದ ಮುಂಗಾರು ಕೈಕೊಟ್ಟ ಕಾರಣ ಗ್ರಾಮೀಣ ಭಾಗದ ಕೃಷಿ ಕೂಲಿಕಾರರು ಬದುಕು ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರದ ಬಿಜೆಪಿ ಮೋದಿ ಸರ್ಕಾರವು ಕೃಷಿ ಕಾರ್ಮಿಕರಿಗೆ ನಿರಂತರವಾಗಿ ಅನ್ಯಾಯವೆಸಗುತ್ತಾ ಬಂದಿದ್ದು, ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಕೃಷಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಒದಗಿಸಬೇಕಾಗಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪ್ರಧಾನ ಮಂತ್ರಿ ಆವಾಸ ಯೋಜನೆಯ ಫಲಾನುಭವಿಗಳಿಗೆ ಹಂಚಿಕೆಯಾಗಿರುವ ಮನೆ ನಿವೇಶನಗಳ ಬಾಕಿ ಹಣ ಇನ್ನೂ ಬಿಡುಗಡೆಯಾಗದೆ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.

ತಾಲೂಕು ಅಧ್ಯಕ್ಷ ರಮೇಶ ಮಾತನಾಡಿ, ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ಹಿರೇಡಂಕನಕಲ್ ಮನೆ ನಿವೇಶನ ರಹಿತರಿಗೆ ಸರ್ಕಾರ ಜಾಗ ಮಂಜೂರು ಮಾಡಬೇಕು ಮತ್ತು ಅರ್ಜಿ ಹಾಕಿದ ಎಲ್ಲ ಬಡವರಿಗೂ ಮನೆ ನಿವೇಶನ ಹಂಚಿಕೆ ಮಾಡಬೇಕು. ಕೃಷಿ ಕೂಲಿಕಾರರ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ ೨೦೦ ಮಾನವ ದಿನಗಳ ಕೆಲಸ ಸೃಜಿಸಿ, ₹೭೦೦ ಕನಿಷ್ಠ ವೇತನ ನಿಗದಿಪಡಿಸಬೇಕು. ಫಲಾನುಭವಿಗಳಿಗೆ ದನದದೊಡ್ಡಿ ಶೆಡ್ ಹಣ ಬಿಡುಗಡೆ ಮಾಡಬೇಕು. ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಮೇಟಿಗಳಿಗೆ ಬಾಕಿ ಇರುವ ಪ್ರೋತ್ಸಾಹಧನ ತಕ್ಷಣವೇ ಮಂಜೂರು ಮಾಡಬೇಕು. ಎನ್‌ಎಂಎಂಎಸ್ ಆ್ಯಪ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಜಂಟಿ ಕಾರ್ಯದರ್ಶಿ ಹುಸೇನಪ್ಪ ಕೆ., ಕಾರ್ಯದರ್ಶಿ ಬಾಳಪ್ಪ ಹುಲಿಹೈದರ, ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಅಮರೇಶ ಕಡಗದ, ಚಂದ್ರಪ್ಪ, ನಾಗಮ್ಮ, ಈರಮ್ಮ ಮೆಟ್ರಿ, ದುರ್ಗಮ್ಮ, ಈಶಪ್ಪ ಇತರರಿದ್ದರು.