ಉಡುಪಿ: ರಾಜ್ಯದಲ್ಲಿ 3.50 ಲಕ್ಷ ಬಿಪಿಎಲ್ ಕಾರ್ಡುಗಳ ರದ್ದು ಪ್ರಕ್ರಿಯೆಯನ್ನು ನಿಲ್ಲಿಸಲು ಸೂಚಿಸಿದ್ದೇನೆ ಎಂದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.ಉಡುಪಿ ಜಿಲ್ಲಾ ಉಸ್ತಿವಾರಿ ಸಚಿವರಾಗಿರುವ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರ ರಾಜ್ಯದಲ್ಲಿ 7,59,000 ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಸೂಚಿಸಿದೆ, ಅದರಂತೆ ಈಗಾಗಲೇ ಸುಮಾರು 4 ಲಕ್ಷ ಬಿಪಿಎಲವ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ, ಅದನ್ನೇನೂ ಮಾಡಕಾಗಲ್ಲ. ಆದರೆ ನಾನು ಸಚಿವನಾದ ಕೂಡಲೇ ಉಳಿದ 3.50 ಲಕ್ಷ ಬಿಪಿಎಲ್ ಕಾರ್ಡುಗಳ ರದ್ದು ಪ್ರಕ್ರಿಯೆಯನ್ನು ನಿಲ್ಲಿಸಿದ್ದೇನೆ, ಅವುಗಳನ್ನು ಸೂಕ್ತ ಪರಿಶೀಲನೆ ಮಾಡಿ, ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ, ಸದ್ಯಕ್ಕೆ ಯಾವುದೇ ಕಾರ್ಡ್ ರದ್ದತಿ ಮಾಡದಂತೆ ಸೂಚಿಸಿದ್ದೇನೆ ಎಂದರು.

ಪಡಿತರ ಇಕೆವೈಸಿ ಕಡ್ಡಾಯ: ರಾಜ್ಯದಲ್ಲಿ ಪಡಿತರ ಕಾರ್ಡುಗಳ ಕೆವೈಸಿ ಮಾಡಿ ಐದು ವರ್ಷ ಆಗಿದೆ. ಈಗ ಮತ್ತೇ ಇಕೆವೈಸಿ ಮಾಡಿಸಲು ಕೇಂದ್ರ ಸರ್ಕಾರದ ನಿರ್ದೇಶನ ಇದೆ, ರಾಜ್ಯದಲ್ಲಿ2.59 ಕೋಟಿ ಕಾರ್ಡುಗಳನ್ನು ಇಕೆವೈಸಿ ಮಾಡಬೇಕು, ಕಾರ್ಡು ಹೊಂದಿರುವವರಲ್ಲಿ ಮರಣ ಹೊಂದಿದವರ, ಬಡತನ ರೇಖೆಯಿಂದ ಮೇಲೆ ಬಂದಿರುವವರ, ಕಾರ್ಡು ಅಗತ್ಯ ಇಲ್ಲದವರ ಹೀಗೆ ಎಲ್ಲಾ ಡಾಟಾಗಳಿ ಇಕೆವೈಸಿಯಿಂದ ಲಭ್ಯವಾಗಲಿದೆ, ಆದ್ದರಿಂದ ಸೆ. 31ರೊಳಗೆ ಕೆವೈಸಿ ಮಾಡಿಕೊಳ್ಳಬೇಕು ಎಂದವರು ಹೇಳಿದರು.

ಕರಾವಳಿಗೆ ಕುಚ್ಚಲಕ್ಕಿ ಪ್ರಯತ್ನ: ನಿನ್ನೆಯಷ್ಟೇ ಇಲಾಖೆಯ ಅಧಿಕಾರ ವಹಿಸಿಕೊಂಡಿದ್ದೇನೆ, ಹೊಸ ಐಪಿಎಲ್ ಕಾರ್ಡ್ ನೀಡುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಚರ್ಚೆ ಮಾಡುತ್ತೇನೆ, ಕರಾವಳಿಯಲ್ಲಿ ಕುಚ್ಚಲಕ್ಕಿ ಬೇಡಿಕೆ ಇದೆ, ನಿಶ್ಚಿತವಾಗಿ ಈ ಬಗ್ಗೆ ಗಮನ ಹರಿಸುತ್ತೇನೆ, ಆಯಾ ಸ್ಥಳಕ್ಕೆ ತಕ್ಕಂತೆ ಬದಲಾವಣೆ ಪಡಿತರ ಪೂರೈಕೆಯಲ್ಲಿ ಮಾಡಿಕೊಂಡಿದ್ದೇವೆ, ಇಲ್ಲೂ ಮಾಡಲು ಸಾಧ್ಯವೇ ಎಂಬ ಬಗ್ಗೆ ಗಮನಹರಿಸುತ್ತೇನೆ ಎಂದು ಸಚಿವರು ಹೇಳಿದರು.

ಬಿಜೆಪಿಗೆ ನೈತಿಕತೆಯೇ ಇಲ್ಲ !: ಕಾಂಗ್ರೆಸ್ ಸಚಿವರ ಧ್ವಜಾರೋಹಣದ ಬಗ್ಗೆ ಮಾತನಾಡುವ ನೈತಿಕತೆ, 52 ವರ್ಷ ನಾಗಪುರದಲ್ಲಿ ಆರ್‌ಎಸ್‌ಎಸ್ ಮುಖ್ಯ ಕಚೇರಿಯಲ್ಲಿ ಧ್ವಜಾರೋಹಣ ಮಾಡದ ಬಿಜೆಪಿ ನಾಯಕರಿಗೆ ಇಲ್ಲ, ಅವರು ನಮಗೆ ನೈತಿಕ ಬೋಧನೆ ಮಾಡುವ ಅಗತ್ಯ ಇಲ್ಲ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಪಕ್ಷ ಧ್ವಜ ಎತ್ತಿ ಹೋರಾಡಿದೆ, ಅದೇ ರಕ್ತ ನಮ್ಮ ದೇಹದಲ್ಲೂ ಹರಿಯುತ್ತಿದೆ, ಸಚಿವ ಜಮೀರ್ ಅಹ್ಮದ್ ನನಗೆ ಬೇರೆ ಜವಾಬ್ದಾರಿ ಜಾಸ್ತಿ ಇದೆ, ಾಜಿಲ್ಲಾ ಉಸ್ತುವಾರಿ ಬೇಡ ಎಂದು ಹೇಳಿದ್ದಾರೆ, ಉಸ್ತುವಾರಿ ಬೇಡ ಎಂದರೇ ಧ್ವಜಾರೋಹಣದ ಜವಾಬ್ದಾರಿಯು ಇರುವುದಿಲ್ಲ, ನಾನು ಪ್ರವಾಸದಲ್ಲಿದ್ದೆ ಹೆಚ್ಚು ಮಾಹಿತಿ ನನಗೆ ಗೊತ್ತಿಲ್ಲ ಎಂದವರು ಹೇಳಿದರು. ಆರ್‌ಎಸ್‌ಎಸ್‌ ಹೆಸರೇ ಹೇಳಿಲ್ಲ !: ನೋಂದಣಿಯಾಗದ ಯಾವುದೇ ಅನಧಿಕೃತ ಸಂಸ್ಥೆಗಳಿಗೆ ಶಾಲೆ ದೇವಾಲಯಗಳಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದೇವೆ, ಅದನ್ನು ಆರ್‌ಎಸ್‌ಎಸ್‌ನವರು ಯಾಕೆ ತಮ್ಮ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂದು ಅರ್ಥ ಆಗುತ್ತಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಾರ್ಕ್ ಶಾಲಾ ಮೈದಾನಗಳನ್ನು ಯಾರು ಉಪಯೋಗಿಸುತ್ತಾರೆ, ಇದು ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತೋ ಗೊತ್ತಾಗುವುದಿಲ್ಲ, ಬಳಕೆ ಮಾಡುವವರು ಯಾರು ಅನ್ನೋದು ಸರ್ಕಾರಕ್ಕೆ ಗೊತ್ತಿರಬೇಕು, ನೋಂದಣಿ ಮಾಡಿಕೊಂಡವರಾದರೇ ಸರಿ, ಅನಧಿಕೃತ ಸಂಘಟನೆಗಳಿಗೆ ಅವಕಾಶ ಇಲ್ಲ, ನಾವು ಎಲ್ಲೂ ಆರ್‌ಎಸ್‌ಎಸ್ ಹೆಸರನ್ನೇ ಹೇಳಿಲ್ಲ ಎಂದವರು ಸಮರ್ಥಿಸಿಕೊಂಡರು.