ಸಾರಾಂಶ
ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕಾಗಿ ಅಧಿಕಾರಿಗಳ ರಜೆ ರದ್ದು ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೂರು ದಿನ ಸರ್ಕಾರಿ ರಜೆ ಇದ್ದರೂ ಬಿಬಿಎಂಪಿ ಅಧಿಕಾರಿಗಳು ನಗರದ ವಿವಿಧ ಕಡೆ ರಸ್ತೆ ಗುಂಡಿ ಮುಚ್ಚಿಸುವ ಕಾರ್ಯ ನಡೆಸುತ್ತಿದ್ದಾರೆ.ಶನಿವಾರ ನಗರದ ಯಲಹಂಕ ವಲಯದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರದಲ್ಲಿ ನಿರಂತರವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಶನಿವಾರ, ಭಾನುವಾರ, ಸೋಮವಾರ ಸರ್ಕಾರಿ ರಜೆ ಇದ್ದರೂ ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಎಂಜಿನಿಯರ್ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ನಗರಲ್ಲಿ ಮಳೆ ಬರುವುದು ನಿಂತಿದ್ದು, ಗುತ್ತಿಗೆದಾರರಿಂದ ಹೆಚ್ಚು ಹಾಟ್ ಮಿಕ್ಸ್ ಪಡೆದು ಹಗಲು-ರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿಸಲಾಗುವುದು. ಬಾಕಿಯಿರುವ ರಸ್ತೆ ಗುಂಡಿಗಳನ್ನು ಶೀಘ್ರದಲ್ಲಿ ಮುಚ್ಚುತ್ತೇವೆ ಎಂದು ತಿಳಿಸಿದರು.ಯಲಹಂಕ ವಲಯ ಆಯುಕ್ತ ಕರೀಗೌಡ ಮಾತನಾಡಿ, ಯಲಹಂಕ ವಲಯದಲ್ಲಿ ಪ್ರಸಕ್ತ ವರ್ಷ 1,567 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಾಕಿಯಿರುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲಾಗುವುದು ಎಂದರು.
ಯಲಹಂಕ ವಲಯ ವ್ಯಾಪ್ತಿಯಲ್ಲಿ 865 ಕಿ.ಮೀ ಉದ್ದದ 5,433 ರಸ್ತೆಗಳನ್ನು ಡಾಂಬರೀಕರಣ ನಡೆಸಲು ಯೋಜನೆ ರೂಪಿಸಿದ್ದು, ಶೀಘ್ರ ಡಾಂಬರೀಕರಣ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ. 110 ಹಳ್ಳಿಗಳ ಪೈಕಿ ಯಲಹಂಕ ವಲಯದಲ್ಲಿ 14 ಹಳ್ಳಿಗಳು ಬರಲಿದ್ದು, 89 ಕಿ.ಮೀ ಉದ್ದದ 499 ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕಿದೆ ಎಂದರು.ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಮುಖ್ಯ ಎಂಜಿನಿಯರ್ ರಂಗನಾಥ್, ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್, ನಾಗಪ್ಪ ಕಮತಿ ಉಪಸ್ಥಿತರಿದ್ದರು.