ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ ವ್ಯಾಪಕವಾಗಿ ಎಲ್ಲಾ ಕಡೆ ರೇಷನ್ ಕಾರ್ಡ್ ರದ್ದು ಮಾಡುತ್ತಿದೆ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಇರುವುದು ಶೂನ್ಯ ಅಭಿವೃದ್ಧಿಯ ಸರ್ಕಾರವಾಗಿದ್ದು, ಹಗರಣಗಳ ಸರ್ಕಾರ, ಭ್ರಷ್ಟ ಸರ್ಕಾರ ಎಂದು ಟೀಕಿಸಿದರು. ಸರ್ಕಾರವು ವ್ಯಾಪಕವಾಗಿ ರೇಷನ್ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿದ್ದು, ಬಿಪಿಎಲ್ ಕಾರ್ಡ್‌ಗಳನ್ನು ಗುರಿಯಾಗಿಸಿಕೊಂಡು ಎರಡು ತಿಂಗಳ ಅವಧಿಯಲ್ಲಿ ೧೧ ಲಕ್ಷ ರೇಷನ್ ಕಾರ್ಡ್, ಇಷ್ಟು ದೊಡ್ಡ ಪ್ರಮಾಣದಲ್ಲಿ ರದ್ದು ಮಾಡಿದ್ದಾರೆ. ಈ ಪ್ರಕ್ರಿಯೆ ನಿಂತಿಲ್ಲ ಇನ್ನೂ ಮುಂದುವರಿದಿದೆ ಎಂದರು.ಸರ್ಕಾರ ಇಲ್ಲಿಯವರೆಗೆ ಯಾವುದೇ ಸ್ಪಷ್ಟ ತೀರ್ಮಾನ ತೆಗೆದುಕೊಂಡಿರುವುದಿಲ್ಲ. ಇದರಿಂದಾಗಿ ಬಡವರು ಕೇಂದ್ರ, ರಾಜ್ಯ ಸರ್ಕಾರ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಪ್ರಮುಖವಾಗಿ ಆಯುಷ್ಮಾನ್ ಭಾರತ್, ಗೃಹಲಕ್ಷ್ಮಿ ಅನೇಕ ಯೋಜನೆಗಳಿಂದ ಬಿಪಿಎಲ್ ಕುಟುಂಬವು ವಂಚಿತರಾಗುತ್ತಾರೆ. ಬಡವರ ಪರ ಎಂದು ಭಾಷಣ ಮಾಡಿ ಇಷ್ಟು ಪ್ರಮಾಣದಲ್ಲಿ ರೇಷನ್ ಕಾರ್ಡ್ ರದ್ದು ಮಾಡಿದ ಸರ್ಕಾರ ಬಂದಿರುವುದು ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲು. ರೇಷನ್ ಕಾರ್ಡ್ ರದ್ದು ಮಾಡಬಾರದು ಎನ್ನುವ ಕುರಿತು ನಾವು ಹೋರಾಟ ಮಾಡಲಿದ್ದೇವೆ. ಕಸ್ತೂರಿ ರಂಗನ್ ವರದಿಗೆ ಸಂಬಂಧಪಟ್ಟಂತೆ ಕರ್ನಾಟಕದ ೧೭ ಜಿಲ್ಲೆಗಳು ಇದರ ವ್ಯಾಪ್ತಿ ಅಡಿಯಲ್ಲಿ ಬರುತ್ತಿದೆ. ಅತಿ ಸೂಕ್ಷ್ಮ ವಲಯವಾದ ಸಕಲೇಶಪುರ, ಬೇಲೂರು, ಮೂಡಿಗೆರೆ ಕೂಡ ಸೇರುತ್ತಿದೆ. ಸರ್ಕಾರವು ಇಲ್ಲಿವರೆಗೂ ಒಂದು ಸ್ಪಷ್ಟವಾದ ತೀರ್ಮಾನ ತೆಗೆದುಕೊಂಡಿರುವುದಿಲ್ಲ. ಇದರಿಂದ ದೊಡ್ಡ ಪ್ರಮಾಣದಲ್ಲಿ ಜನಜೀವನಕ್ಕೆ ತೊಂದರೆ ಆಗುತ್ತಿದೆ. ಈ ವಿಚಾರವನ್ನು ಕೂಡ ವಿಧಾನಸಭೆ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾವನೆ ಮಾಡುತ್ತೇವೆ ಎಂದು ತಿಳಿಸಿದರು.
ದ್ವೇಷದ ರಾಜಕಾರಣ ಒಳ್ಳೆಯದಲ್ಲ: ವ್ಯಕ್ತಿಯನ್ನು ಟೀಕಿಸುವುದು, ವೈಯಕ್ತಿಕ ದ್ವೇಷಗಳು ಸರ್ವಾಜನಿಕ ಬದುಕಿನಲ್ಲ್ಲಿ ಒಳ್ಳೆಯದಲ್ಲ. ಸಭ್ಯತೆ ಮೀರಿ ಯಾರೂ ಕೂಡ ನಡೆದುಕೊಳ್ಳಬಾರದು. ಸಾರ್ವಜನಿಕರು ದೃಶ್ಯ ಮಾಧ್ಯಮದ ಮೂಲಕ ಎಲ್ಲವನ್ನೂ ವೀಕ್ಷಣೆ ಮಾಡುತ್ತಿರುತ್ತಾರೆ. ಸಭ್ಯತೆ ಎನ್ನುವುದು ಎಲ್ಲರಲ್ಲೂ ಇರಬೇಕು. ಆಡಳಿತ ಪಕ್ಷದಲ್ಲಿ ಇದ್ದೇವೆ ಎನ್ನುವ ಕಾರಣಕ್ಕೆ ದ್ವೇಷವನ್ನು ಮಾಡುತ್ತಾ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುವುದು ಈ ಸರ್ಕಾರದಲ್ಲಿ ಹೆಚ್ಚಾಗಿದೆ. ಇವತ್ತು ಅವರು ಆಡಳಿತದಲ್ಲಿದ್ದರೇ ನಾಳೆ ನಾವು ಆಡಳಿತದಲ್ಲಿ ಇರುತ್ತೇವೆ. ಯಾವ ಸಂದರ್ಭದಲ್ಲೂ ಕೂಡ ಈ ರೀತಿ ಸಭ್ಯತೆ ಮೀರಿದ ವರ್ತನೆ ಮತ್ತು ವೈಯಕ್ತಿಕ ದ್ವೇಷದ ರಾಜಕಾರಣ ಒಳ್ಳೆಯದಲ್ಲ ಎಂದು ಸಲಹೆ ನೀಡಿದರು.ಉಪ ಚುನಾವಣೆ ಫಲಿತಾಂಶ ಬಂದ ನಂತರ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಕಳೆದುಕೊಳ್ಳುತ್ತಾರೆ. ಮೂರು ಸ್ಥಾನವನ್ನು ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈ ಸೂಕ್ಷ್ಮ ಕಾಂಗ್ರೆಸ್‌ಗೆ ಗೊತ್ತಾಗಿರುವುದರಿಂದ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಆಗದೆ ನಮ್ಮ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ನಮ್ಮ ಹೆಗಲ ಮೇಲೆ ಗನ್ ಇಟ್ಟುಕೊಂಡು ಅವರ ಹೈಕಮಾಂಡಿಗೆ ಗುಂಡು ಹಾರಿಸುವಂತಹ ಪ್ರಯತ್ನವನ್ನು ಈ ಆಫರ್ ಮೂಲಕ ಮಾಡುತ್ತಿದ್ದಾರೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹಣವ ಆಮಿಷವನ್ನು ಕೊಡುವಂತಹ ದುಸ್ಥಿತಿ ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಿಂದುಳಿದ ವರ್ಗ ಅಸ್ತ್ರ, ಅಹಿಂದ ಅಸ್ತ್ರ, ಹಣದ ಆಫರ್ ಅಸ್ತ್ರ ಇವುಗಳೆಲ್ಲಾವನ್ನು ಸಿದ್ದರಾಮಯ್ಯ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಆದರೆ ನಾವು ಸರ್ಕಾರ ಬೀಳಿಸುವುದಕ್ಕೆ ಹೋಗುವುದಿಲ್ಲ. ಇದೆಲ್ಲ ಗೊತ್ತಾದ ಮೇಲೆ ಸಿಎಂ ಈ ಥರ ಮಾತನಾಡುತ್ತಿದ್ದಾರೆ. "ಸಿದ್ದರಾಮಯ್ಯನ ಸುದ್ದಿಗೆ ಬಂದ್ರೆ ರಾಜ್ಯದ ಜನ್ರು ಸುಮ್ಮನಿರುವುದಿಲ್ಲ " ಎಂಬ ಹೇಳಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇದನ್ನು ಹೇಳಿರುವುದು ಬಿಜೆಪಿಯವರಿಗಲ್ಲ, ಇದು ಡಿ.ಕೆ. ಶಿವಕುಮಾರ್ ಮತ್ತು ಜಿ. ಪರಮೇಶ್ವರ್‌ರವರಿಗೆ ಹಾಗೂ ಕಾಂಗ್ರೆಸ್ ಹೈಕಾಮಾಂಡ್‌ಗೆ ಎಂದು ಮುಖ್ಯಮಂತ್ರಿ ವಿರುದ್ಧ ಇದೇ ವೇಳೆ ವ್ಯಂಗ್ಯವಾಗಿ ಮಾತನಾಡಿದರು.ಎಸ್‌ಐಟಿ ತನಿಖೆ ಆಗಲಿ: ಕೋವಿಡ್ ಸಂದರ್ಭದ ಪರಿಸ್ಥಿತಿ ೨೦೨೦ರ ಆಸುಪಾಸಿನಲ್ಲಿ ಮಾಸ್ಕ್ ಸಮೇತ ಸಿಗುತ್ತಿರಲಿಲ್ಲ. ಸ್ವಸಹಾಯ ಸಂಘದ ಮೂಲಕ ಬಿಜೆಪಿ ಮೋರ್ಚಾ ಮಹಿಳೆಯರು ಹೊಲಿದು ಕೊಟ್ಟಿದ್ದರಿಂದ ನಾವು ಜನರಿಗೆ ನೀಡಿದ್ದೇವೆ. ಸ್ಯಾನಿಟೈಸರ್ ಸಿಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ ಖರೀದಿಯನ್ನು ಕರ್ನಾಟಕ ಒಂದೇ ಅಲ್ಲ, ಜಗತ್ತಿನಲ್ಲಿನ ಎಲ್ಲಾ ರಾಷ್ಟ್ರಗಳು ಕೂಡ ಖರೀದಿ ಮಾಡಿದೆ. ಅಗತ್ಯಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಟ್ಟು ಖರೀದಿ ಮಾಡಲಾಗಿದೆ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ. ಎಸ್‌ಐಟಿ ತನಿಖೆ ಆಗಲಿ. ನಾವು ಯಾವ ತನಿಖೆಯನ್ನು ಕೂಡ ವಿರೋಧ ಮಾಡುತ್ತಿಲ್ಲ. ಆದರೆ ಕೋವಿಡ್ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಅವರ ತನ್ನ ಕುರ್ಚಿ ಅಭದ್ರತೆ ಬಿಜೆಪಿಯಿಂದ ಕಾಡುತ್ತಿಲ್ಲ. ಹೈಕಮಾಂಡ್‌ನಿಂದ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳಿಂದ ಅಭದ್ರತೆ ಕಾಣುತ್ತಿದೆ. ಸ್ವಾಭಿಮಾನಿ ಸಮಾವೇಶ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ಲೋಕಾಯುಕ್ತದ ಮುಂದೆ ಮುಖ್ಯಮಂತ್ರಿ ಕೈಕಟ್ಟಿ ನಿಲ್ಲುತ್ತಾರೆ ಎಂದರೆ ಎಲ್ಲಿ ಸ್ವಾಭಿಮಾನ ಅನಿಸುತ್ತದೆ. ತನ್ನ ಇಡೀ ಕುಟುಂಬ ಸೈಟ್ ವಾಪಸ್ ಕೊಟ್ಟ ಮೇಲೆ ಸ್ವಾಭಿಮಾನ ಇದೆ ಅನಿಸುತ್ತಿದಿಯೇ? ಒಂದು ವರ್ಷದಲ್ಲಿ ಸಾಲು ಸಾಲು ಹಗರಣ ಬಂದರೂ ನನಗೆ ಏನು ಗೊತ್ತಿಲ್ಲ ಎಂದರೇ ಅದಕ್ಕೆ ಸ್ವಾಭಿಮಾನ ಎಂದು ಕರೆಯಬಹುದಾ! ಸ್ವಾಭಿಮಾನ ಎಂದರೇ ಏನು ಎಂಬುದನ್ನು ಅವರಿಗೆ ಕೇಳಬೇಕು ಎಂದು ಕುಟುಕಿದರು. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಮುಖಂಡರಾದ ರೇಣುಕುಮಾರ್, ಇತರರು ಉಪಸ್ಥಿತರಿದ್ದರು.*ಬಾಕ್ಸ್: ವಕ್ಫ್ ವಿಚಾರದಲ್ಲಿ ಮೌನವೇಕೆ? ದಿನದಿಂದ ದಿನಕ್ಕೆ ವಕ್ಫ್ ತನ್ನ ಆಸ್ತಿ ಘೋಷಣೆ ಮಾಡಿಕೊಂಡು ಹೆಚ್ಚು ಮಾಡಿಕೊಳ್ಳುತ್ತಿದೆ. ದೇವಾಲಯ, ಮಠ, ಪಾರ್ಕ್, ಶಾಲೆ, ಮನೆ, ತೋಟ ಇತರೆ ಎಲ್ಲಾವನ್ನು ವಕ್ಫ್ ತನ್ನ ವ್ಯಾಪ್ತಿಗೆ ಮುಂದಾಗಿರುವುದು ಒಂದು ಆಘಾತಕಾರಿ ಸಂಗತಿ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಕ್ಫ್ ತನ್ನ ಕಬಂಧಬಾಹು ಚಾಚುತ್ತಿದೆ. ಇಷ್ಟಾದ್ರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಮೌನವಹಿಸಿದೆ. ವಕ್ಫ್ ಪರವಾಗಿ ಸರ್ಕಾರ ವಕಾಲತ್ತು ವಹಿಸುತ್ತಿರುವುದು ರಾಜ್ಯದಲ್ಲಿ ಒಂದು ಆಘಾತಕಾರಿ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.