ಸಾರಾಂಶ
ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸುತ್ತದೆ ಎಂಬ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಕಾಂಗ್ರೆಸ್ ಹಠವೋ ಮೀಸಲಾತಿ ಬಚಾವೋ ಚಳವಳಿಯನ್ನು ಸೆ.೧೩ ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಎನ್. ಮಹೇಶ್ ತಿಳಿಸಿದರು. ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜವಾದ ಮೀಸಲಾತಿ ಹಾಗೂ ಸಂವಿಧಾನ ವಿರೋಧಿಗಳು ಕಾಂಗ್ರೆಸ್‌ನವರು ಎಂಬುದು ಅಮೇರಿಕಾದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯಿಂದ ಸಾಬೀತಾಗಿದೆ. ರಾಹುಲ್ ಗಾಂಧಿ ಅವರ ತಾತ ಜವಾಹರಲಾಲ್ ನೆಹರು ಸಹ ಇದೇ ಹೇಳಿಕೆಯನ್ನು ನೀಡಿದ್ದರು. ಕಾಂಗ್ರೆಸ್ ಹಾಗೂ ನೆಹರು ಕುಟುಂಬ ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿದ್ದು, ಮೀಸಲಾತಿ ನೀಡುತ್ತಿರುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ ಎಂದು ದೂರಿದರು. ಅಮೇರಿಕಾ ಪ್ರವಾಸಲ್ಲಿರುವ ರಾಹುಲ್‌ಗಾಂಧಿ ಅವರು ಜಾರ್ಜ್‌ಟೌನ್ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿರುವ ಸಂವಾದದಲ್ಲಿ ಭಾರತದಲ್ಲಿರುವ ಮೀಸಲಾತಿ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷವೇ ಮೀಸಲಾತಿಯನ್ನು ತೆಗೆಯಲು ಸಾಧ್ಯ ಎಂಬ ಹೇಳಿಕೆಯನ್ನು ನೀಡಿರುವುದು ದುರದೃಷ್ಟಕರ. ಇಂಥ ನಾಯಕರು ಹಾಗೂ ಪಕ್ಷ ನಾವು ಮೀಸಲಾತಿ ಪರ ಹಾಗೂ ಸಂವಿಧಾನ ರಕ್ಷಕರು ಎಂದು ಹೇಳಿಕೊಂಡು ಆ ವರ್ಗಗಳ ಮತಗಳನ್ನು ಪಡೆದು ಅನ್ಯಾಯ ಮಾಡುತ್ತಾಲೇ ಬಂದಿದೆ. ಇದನ್ನು ಖಂಡಿಸಿ, ನಗರದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ, ಎಸ್ಟಿ ಮೋರ್ಚಾ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವ ಹಾಗೂ ನಂತರವು ಮೀಸಲಾತಿ ವಿರುದ್ಧವಾಗಿತ್ತು. ಗಾಂಧೀಜಿ ಹಾಗೂ ಜವಾಹರಲಾಲ್ ನೆಹರು ಅವರು ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದರು. ಅಂಬೇಡ್ಕರ್ ಅವರ ಆಶಯದ ವಿರುದ್ಧವಾಗಿದ್ದವರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ ಕಮೀಷನ್ ಆಯೋಗವನ್ನು ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಂದು ಸಚಿವರಾಗಿದ್ದ ಡಾ.ಅಂಬೇಡ್ಕರ್ ಅಸಮಾಧಾನಿತರಾಗಿ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಅಲ್ಲಿಂದಲೂ ಸಹ ಕಾಂಗ್ರೆಸ್ ಪಕ್ಷ ಮೀಸಲಾತಿ ವಿರುದ್ಧದ ನಿಲುವು ಹೊಂದಿದೆ. ಇದನ್ನು ಅರ್ಥ ಮಾಡಿಕೊಳ್ಳದ ನಮ್ಮ ಸಮುದಾಯದ ಬಂಧುಗಳು ಹಾಗೂ ಒಬಿಸಿ ವರ್ಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮೋಸ ಹೋಗುತ್ತಿದೆ. ಈ ಪಕ್ಷದಲ್ಲಿದ್ದು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ನಮ್ಮ ಎಚ್.ಸಿ. ಮಹದೇವಪ್ಪ ಅವರು ಏನು ಹೇಳುತ್ತಾರೆ. ಅವರದೇ ಪಕ್ಷದ ನಾಯಕರು ಇಂಥ ಹೇಳಿಕೆಯನ್ನು ನೀಡುತ್ತಿದ್ದಾರೆ. ಕೋಟ್ಯಂತರ ರು. ವೆಚ್ಚ ಮಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಜಾಪ್ರಭುತ್ವ ಉಳಿಸುವ ಹಾಗೂ ಸಂವಿಧಾನ ಉಳಿಸುವ ಅಭಿಯಾನ ಮಾಡುತ್ತಿದ್ದಾರೆ. ಈ ಬಗ್ಗೆ ಆ ಪಕ್ಷದ ನಾಯಕರು ಏಕೆ ಮಾತನಾಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಗೋಸುಂಬೆ ಬಣ್ಣ ಬಯಲಾಗಿದೆ ಎಂದು ಎನ್. ಮಹೇಶ್ ಟೀಕಿಸಿದರು. ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳು ಹಾಗೂ ಅದು ಹೊಂದಿರುವ ಶಕ್ತಿಯಿಂದ ರಾಹುಲ್ ಗಾಂಧಿ ಅಲ್ಲ ಅವರ ತಾತ ಜವಾಹರಲಾಲ್ ನೆಹರು ಬಂದರೂ ಸಹ ಸಂವಿಧಾನದತ್ತವಾಗಿ ನೀಡಿರುವ ಮೀಸಲಾತಿಯನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಇದನ್ನು ಸಂಸತ್‌ನಲ್ಲಿ ಸಂವಿಧಾನದ ಪುಸ್ತಕ ಹಿಡಿದು ಪ್ರದರ್ಶನ ಮಾಡುವ ರಾಹುಲ್ ಗಾಂಧಿ ಅರ್ಥವಾಗುತ್ತಿಲ್ಲ. ಸಂವಿಧಾವನ್ನು ಓದಿ ಆರ್ಥೈಯಿಸಿಕೊಂಡಿದ್ದರೆ ಗೊತ್ತಾಗುತ್ತಿತ್ತು. ಕೇವಲ ಅಂಬೇಡ್ಕರ್ ಬರೆದ ಪುಸ್ತಕ ಹಿಡಿದುಕೊಂಡರೆ ಜ್ಞಾನಿಯಾಗುವುದಿಲ್ಲ. ಇನ್ನಾದರು ಕಾಂಗ್ರೆಸ್ ನಾಯಕರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ೬೦ ವರ್ಷಗಳ ಆಡಳಿತದಲ್ಲಿ ತೆಗೆದುಕೊಂಡು ಬಹಳಷ್ಟು ನಿರ್ಣಯಗಳು ಸಂವಿಧಾನದ ವಿರುದ್ದವಾಗಿದೆ. ಇಂಥ ಪಕ್ಷವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಜನರು ಬೆಂಬಲಿಸಬೇಕಾ? ಹೀಗಾಗಿ ರಾಹುಲ್‌ಗಾಂಧಿ ಹೇಳಿಕೆಯನ್ನು ಖಂಡಿಸಿ ಬಿಜೆಪಿಯಿಂದ ರಾಜ್ಯಾದ್ಯಂತ ಕಾಂಗ್ರೆಸ್ ಹಠಾವೋ, ಮೀಸಲಾತಿ ಬಚಾವೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಸಮುದಾಯಗಳ ಬಂಧುಗಳು ಆಗಮಿಸಬೇಕು ಎಂದು ಎನ್. ಮಹೇಶ್ ಮನವಿ ಮಾಡಿದರು. ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬುಲೆಟ್ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಮಾಂಬಳ್ಳಿ ರಾಮಣ್ಣ, ಅಗರರಾಜು, ಸಹ ವಕ್ತಾರ್ ಮಂಜುನಾಥ್ ಇದ್ದರು.