ಮೀಸಲು ರದ್ದು ಹೇಳಿಕೆ: ರಾಹುಲ್‌ ರಾಜೀನಾಮೆ, ಗಡಿಪಾರಿಗೆ ಒತ್ತಾಯ

| Published : Sep 14 2024, 01:45 AM IST

ಸಾರಾಂಶ

ಮೀಸಲಾತಿ ತೆಗೆಯುತ್ತೇವೆ ಎನ್ನುವ ಸಂವಿಧಾನ ವಿರೋಧಿ ಹೇಳಿಕೆಯನ್ನು ವಿದೇಶದಲ್ಲಿ ನೀಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿಯ ಎಸ್.ಸಿ ಮೋರ್ಚಾದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೀಸಲಾತಿ ತೆಗೆಯುತ್ತೇವೆ ಎನ್ನುವ ಸಂವಿಧಾನ ವಿರೋಧಿ ಹೇಳಿಕೆಯನ್ನು ವಿದೇಶದಲ್ಲಿ ನೀಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿಯ ಎಸ್.ಸಿ ಮೋರ್ಚಾದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

ಕೊಡಗು ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಪಿ.ಎಂ ರವಿ ಮೊಗೇರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪಕ್ಷದ ಪ್ರಮುಖರು, ಕಾರ್ಯಕರ್ತರು ಸಮಾವೇಶಗೊಂಡು, ಘೋಷಣೆಗಳನ್ನು ಕೂಗಿ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮಾತನಾಡಿ, ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾರತದಲ್ಲಿ ಮೀಸಲಾತಿ ರದ್ದುಪಡಿಸುವ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡಲು ಬಯಸುತ್ತದೆ ಎಂದು ಹೇಳುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಎಚ್ಚರಿಕೆ ನೀಡಿದಂತಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್, ಈ ಅವಧಿಯುದ್ದಕ್ಕೂ ಶೋಷಿತ ಸಮುದಾಯಗಳನ್ನು ತೇಜೋಜೋವಧೆ ಮಾಡುತ್ತಲೆ ಬಂದಿದೆ. ಪರಿಶಿಷ್ಟರಿಗೆ ತನ್ನ ಆಡಳಿತದ ಅವಧಿಯಲ್ಲಿ ಸೂಕ್ತ ಸ್ಥಾನ ಮಾನಗಳನ್ನು ನೀಡಿಲ್ಲವೆಂದು ಆರೋಪಿಸಿದ ಅವರು, ಅದೇ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಶೋಷಿತ ಸಮುದಾಯಗಳನ್ನು ಗುರುತಿಸಿ ಉನ್ನತ ಹುದ್ದೆಗಳನ್ನು ನೀಡಿದೆ ಎಂದು ಪ್ರತಿಪಾದಿಸಿದರು. ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಸಂವಿಧಾನದಿಂದಾಗಿ ಪರಿಶಿಷ್ಟ ಸಮುದಾಯಗಳು ಸಮಾಜದಲ್ಲಿ ಉನ್ನತಿ ಕಾಣಲು ಸಾಧ್ಯವಾಗಿದೆ. ಇದೀಗ ಸಂವಿಧಾನದಲ್ಲಿ ನೀಡಲ್ಪಟ್ಟ ಮೀಸಲಾತಿ ತೆಗೆದುಹಾಕುವ ಮಾತನಾಡಿರುವ ರಾಹುಲ್ ಗಾಂಧಿಯನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಆಗ್ರಹಿಸಿದರು.

ರಾಹುಲ್ ಗಡಿಪಾರಿಗೆ ಒತ್ತಾಯ:

ಎಂಎಲ್‌ಸಿ ಸುಜಾ ಕುಶಾಲಪ್ಪ ಮಾತನಾಡಿ, ವಿದೇಶಗಳಲ್ಲಿ ನಮ್ಮ ದೇಶದ ಆಗು ಹೋಗುಗಳನ್ನು, ಆಂತರಿಕ ವಿಚಾರಗಳನ್ನು ಪ್ರಶ್ನಿಸುವ ರಾಹುಲ್ ಗಾಂಧಿ ಅವರಿಗೆ ಇದೇ ವಿಚಾರಗಳನ್ನು ಸಂಸತ್‌ನಲ್ಲಿ ಚರ್ಚಿಸಲು ಅವಕಾಶವಿದೆ. ಆದರೆ ಈ ಕೆಲಸ ಮಾಡದೆ ಮನಬಂದಂತೆ ಮಾತನಾಡುತ್ತಿರುವ ರಾಹುಲ್ ಗಾಂಧಿ, ನಮ್ಮ ವಿರೋಧಿ ದೇಶ ಚೀನಾವನ್ನು ಹೊಗಳುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆ ರಾಹುಲ್ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ರಾಜೀನಾಮೆ ನೀಡಲಿ:

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ವಿಶ್ವದ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ನೀಡಿರುವ ಅಂಬೇಡ್ಕರ್ ಅವರು, ಮೀಸಲಾತಿಯ ಅವಕಾಶವನ್ನು ಶೋಷಿತ ಸಮುದಾಯಗಳಿಗೆ ನೀಡುವ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇಂತಹ ಸಂವಿಧಾನವನ್ನೆ ಬಿಜೆಪಿ ಅಧಿಕಾರಕ್ಕೆ ಬಂದರೆ ಬದಲಿಸುತ್ತದೆಂದು ಹೇಳುತ್ತಿದ್ದ ರಾಹುಲ್ ಗಾಂಧಿ, ಇದೀಗ ತಾವೇ ಸಂವಿಧಾನದಲ್ಲಿ ಅಡಕವಾದ ಮೀಸಲಾತಿಯನ್ನು ತೆಗೆಯುವ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಲೋಕಸಭಾ ವಿರೋಧ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅವರ ಸದಸ್ಯತ್ವವನ್ನು ತೆಗೆಯಬೇಕೆಂದರು.

ಪ್ರತಿಭಟನಾಕಾರರು ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಲೋಕಸಭಾ ಸ್ಪೀಕರ್‌ಗೆ ಕಳುಹಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷ ಮನು ಮಂಜುನಾಥ್, ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಸುವಿನ್ ಗಣಪತಿ, ಆರ್.ಕೆ. ಚಂದ್ರು, ಕನ್ನಿಕೆ, ಸಬಿತಾ, ಮನು ಮಂಜುನಾಥ್, ಬೊಳ್ಳಜಿರ ಅಯ್ಯಪ್ಪ, ಕಾಂಗೀರ ಸತೀಶ್, ವಿ.ಕೆ. ಲೋಕೇಶ್, ಉಮಾ ಪ್ರಭು, ಉಮೇಶ್ ಸುಬ್ರಮಣಿ ಮತ್ತಿತರರಿದ್ದರು.