ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲಿ, ಪ್ರಾಧಿಕಾರದಿಂದ ನಿಯಮಗಳನ್ನು ಗಾಳಿಗೆ ತೂರಿ ಮಾಡಿರುವ ನಿವೇಶನಗಳ ಹಂಚಿಕೆಯನ್ನು ರದ್ದು ಮಾಡುವ ಕುರಿತು ನಗರಾಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲಿ, ಪ್ರಾಧಿಕಾರದಿಂದ ನಿಯಮಗಳನ್ನು ಗಾಳಿಗೆ ತೂರಿ ಮಾಡಿರುವ ನಿವೇಶನಗಳ ಹಂಚಿಕೆಯನ್ನು ರದ್ದು ಮಾಡುವ ಕುರಿತು ನಗರಾಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ.

ನಗರಾಭಿವೃದ್ಧಿ ಇಲಾಖೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಈ ಕುರಿತು ಸಮಗ್ರ ವರದಿ ತರಿಸಿಕೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಾಧಿಕಾರದ ಗುತ್ತಿಗೆ ನೌಕರ ಹಾಗೂ ಆಯುಕ್ತರು ಮನಬಂದಂತೆ ಆಡಳಿತ ಮಾಡಿ, ನಿವೇಶನಕ್ಕಾಗಿ ಸಾರ್ವಜನಿಕರು ನೀಡಿದ ಹಣ, ಪ್ರಾಧಿಕಾರದ ವಿವಿಧ ಮೂಲಗಳ ಆದಾಯದ ಹಣವನ್ನು ಅಕ್ರಮವಾಗಿ ತೆಗೆದು ವಂಚನೆ ಮಾಡಿರುವುದು ಸಾಮಾನ್ಯ ವಿಷಯವಲ್ಲ. ಕೂಡಲೇ ಈ ಕುರಿತು ಇಲಾಖಾ ಅಧಿಕಾರಿಗಳು ಕೊಪ್ಪಳ ಪ್ರಾಧಿಕಾರದಲ್ಲಿ ಏನೇನು ಆಗಿದೆ ಎನ್ನುವ ಮಾಹಿತಿಯನ್ನು ತರಿಸಿಕೊಂಡು, ವರದಿ ಸಿದ್ಧ ಮಾಡುವಂತೆ ಸೂಚಿಸಿದ್ದಾರೆ.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಂಚಿಕೆ ಮಾಡಲಾಗಿರುವ 116 ನಿವೇಶನಗಳು ನಿಯಮಾನುಸಾರ ಇದೆಯೇ? ಲಾಟರಿ ಮೂಲಕ ಆಯ್ಕೆ ಮಾಡುವ ವೇಳೆಯಲ್ಲಿ ಸಾರ್ವಜನಿಕ ಪ್ರಕಟಣೆ ನೀಡಲಾಗಿದೆಯೇ? ಲಾಟರಿ ಮೂಲಕ ಆಯ್ಕೆಯಾದ ಎಲ್ಲರಿಗೂ ನಿವೇಶನ ಹಂಚಿಕೆ ಮಾಡಲಾಗಿದೆಯೇ? ಹಂಚಿಕೆ ಮಾಡದೇ ಇದ್ದರೆ ಆ ನಿವೇಶನಗಳನ್ನು ಯಾರಿಗೆ ಮತ್ತು ಯಾವ ಆಧಾರದಲ್ಲಿ ಹಂಚಿಕೆ ಮಾಡಲಾಗಿದೆ ಎನ್ನುವ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನಗರಾಭಿವೃದ್ಧಿ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.

ಒಂದೇ ಕುಟುಂಬದವರಿಗೆ ಒಂಬತ್ತು ನಿವೇಶನ: ಲಾಟರಿ ಮೂಲಕ ಆಯ್ಕೆಯಾಗಿ, ಪಡೆಯದೇ ಇರುವ ನಿವೇಶನಗಳನ್ನು ನಿಯಮ ಗಾಳಿಗೆ ತೂರಿ, ಅಕ್ರಮವಾಗಿ ತೆರೆದ ಖಾತೆಗೆ ಹಣ ವರ್ಗಾಯಿಸಿಕೊಂಡು, ಹಂಚಿಕೆ ಮಾಡಲಾಗಿರುವ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ''''ಕನ್ನಡಪ್ರಭ''''ಕ್ಕೆ ಲಭ್ಯ ದಾಖಲೆಗಳ ಪ್ರಕಾರ, ಒಂದೇ ಕುಟುಂಬದ ಅಡ್ಡ ಹೆಸರು ಇರುವ 9 ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಇದು ಪ್ರಾಧಿಕಾರದ ಅಧ್ಯಕ್ಷರ ಕುಟುಂಬಕ್ಕೆ ಸೇರಿದ್ದಲ್ಲ ಎನ್ನುವುದು ದಾಖಲೆಯಿಂದ ಗೊತ್ತಾಗಿದೆ. ವಯಸ್ಕರಲ್ಲದ ಕೆಲವರಿಗೆ ಹಂಚಿಕೆಯಾಗಿದೆ, ಕೆಲವೊಬ್ಬರಿಗೆ ಬೇರೆ ಬೇರೆ ಹೆಸರಿನಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ.

ಇದೆಲ್ಲ ಮಾಹಿತಿಯನ್ನು ಈಗಾಗಲೇ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಅವರು ತರಿಸಿಕೊಂಡಿದ್ದು, ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚಿಸಿದ್ದಾರೆ.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ. ಕಾನೂನು ರೀತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.